ತಿರುವನಂತಪುರಂ: ಕೋವಿಡ್ 19 ಸಮಯದಲ್ಲಿ ಆಯುರ್ವೇದದ ಪಾತ್ರವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಬೇಕು. ಈ ಸಮಯದಲ್ಲಿ ಆಯುರ್ವೇದ ಸಂಶೋಧಕರು, ಅಭ್ಯಾಸಕಾರರು ದಣಿವರಿಯದೆ ಧೈರ್ಯದಿಂದ ತಮ್ಮ ಸೇವೆ ಸಲ್ಲಿಸಿದ್ದರು ಎಂದು ತಜ್ಞರು ಶ್ಲಾಘಿಸಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಗ್ಲೋಬಲ್ ಆಯುರ್ವೇದ ಫೆಸ್ಟಿವಲ್ನ ಅಂತಿಮ ದಿನದಂದು ಸಾಂಕ್ರಾಮಿಕತೆಯ ಸಂದರ್ಭದ ಅನುಭವ ಮತ್ತು ಸಂಶೋಧನೆ ಎಂಬ ವಿಚಾರವಾಗಿ ತಜ್ಞರು ಮಾತನಾಡಿದರು.
ಲಕ್ನೋದ ಆಯುರ್ವೇದ ಕಾಲೇಜಿನ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ರಸ್ತೋಗಿ ಮಾತನಾಡಿ, "ಕೋವಿಡ್ ರೋಗ ಆಯುರ್ವೇದದ ಪ್ರಸ್ತುತತೆಯನ್ನು ಮತ್ತೆ ಜಾರಿಗೆ ತಂದಿತು. ಎರಡನೇ ಅಲೆಯ ವೇಳೆ ಸೋಂಕಿನ ಪರಿಣಾಮ ಗಂಭೀರವಾಗಿತ್ತು. ಸಾವಿನ ದರವೂ ಹೆಚ್ಚಿತ್ತು. ಇಂಥ ಸಂದರ್ಭದಲ್ಲಿ ಆರೋಗ್ಯ ಸೇವೆ ವ್ಯವಸ್ಥೆಯಲ್ಲಿ ಅನೇಕ ಬಾರಿ ರೋಗಿಗಳಿಗೆ ಸೂಕ್ತ ರೀತಿಯ ಆರೈಕೆ ನೀಡಲು ಸಾಧ್ಯವಾಗದ ಪರಿಸ್ಥಿತಿ ಏರ್ಪಟ್ಟಿತ್ತು. ತೀವ್ರ ಸ್ವರೂಪದ ಪ್ರಕರಣಗಳಿಗೆ ಆಯುರ್ವೇದದ ಮಧ್ಯಸ್ಥಿಕೆಯೊಂದಿಗೆ ಉತ್ತಮ ಚಿಕಿತ್ಸೆ ನೀಡಲಾಯಿತು. ಅಲ್ಲದೇ, 14 ದಿನಗಳ ಕಾಲ ಐಸಿಯುನಲ್ಲಿದ್ದ ರೋಗಿಗಲಿಗೆ 19 ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಯಿಂದ ಸಂಪೂರ್ಣ ಚೇತರಿಕೆ ಸಾಧ್ಯವಾಯಿತು" ಎಂದು ಹೇಳಿದರು.
ಮತ್ತೊಂದು ಪ್ರಕರಣದ ಕುರಿತು ಮಾತನಾಡಿದ ಅವರು, "ಕೋವಿಡ್ ಎರಡನೇ ಅಲೆಯಲ್ಲಿ ಕುಟುಂಬದ ನಾಲ್ಕು ಮಂದಿ ವಯಸ್ಕರಿಗೆ ಪಾಸಿಟಿವ್ ಬಂದಿತ್ತು. ಅವರನ್ನೆಲ್ಲ ಮನೆಯಲ್ಲಿಯೇ ಆಯುರ್ವೇದ ಚಿಕಿತ್ಸೆಯ ಮೂಲಕ ಆಮ್ಲಜನಕ ಮಟ್ಟ ಕಡಿಮೆಯಾಗದಂತೆ ಆರೈಕೆ ಮಾಡಲಾಯಿತು" ಎಂದು ಮಾಹಿತಿ ನೀಡಿದರು.
"ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ಆಯುರ್ವೇದ ಪ್ರಮುಖ ಪಾತ್ರ ಹೊಂದಿದೆ ಎಂಬುದನ್ನು ಸಾಕಾಷ್ಟು ಪುರಾವೆಗಳು ಸಾಬೀತು ಮಾಡಿವೆ. ಆಯುರ್ವೇದವು ಆ್ಯಂಟಿವೈರಲ್ ಔಷಧಿಗಳ ಸಾಮರ್ಥ್ಯವನ್ನು ಹೊಂದಿರುವ ಸಮೃದ್ಧ ವಿಜ್ಞಾನ. ಇದು ವೈರಲ್ ಸೋಂಕಿನ ವಿರುದ್ಧ ಹೋರಾಡುತ್ತದೆ. ಆದರೆ, ಇಂಥ ಸಂದರ್ಭಗಳಲ್ಲಿ ಸಮಕಾಲೀನ ವಿಜ್ಞಾನದ ವ್ಯಾಪ್ತಿಯಲ್ಲಿರುವ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವುದೂ ಮುಖ್ಯವಾಗುತ್ತದೆ" ಎಂದು ನವದೆಹಲಿಯ ಚೌಧರಿ ಬ್ರಹ್ಮ ಪ್ರಕಾಶ್ ಆಯುರ್ವೇದ ಚರಕ ಸಂಸ್ಥಾನದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಪೂಜಾ ಸಬರ್ವಾಲ್ ತಿಳಿಸಿದರು.
ತಿರುವನಂತರಪುರಂನ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರೊಫೆಸರ್ ಡಾ.ರಾಜಮೋಹನ್ ಮಾತನಾಡಿ, "ಸಾಂಕ್ರಾಮಿಕದಂತಹ ಪರಿಸ್ಥಿತಿಯಲ್ಲಿ ಆಯುರ್ವೇದ ಅಥವಾ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳ ಸೇವೆಗಳು ಪರ್ಯಾಯ ಚಿಕಿತ್ಸೆಯಾಗಿದೆ" ಎಂದರು.(ಐಎಎನ್ಎಸ್)
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದ ಪದ್ಧತಿ ಸಹಾಯಕ: ತಜ್ಞರು