ಲಕ್ನೋ(ಉತ್ತರ ಪ್ರದೇಶ): ಕಿವಿಯೊಳಗೆ ವ್ಯಾಕ್ಸ್ ಇದೆ ಅಥವಾ ಏನೋ ಒಂದು ರೀತಿ ಅಹಿತಕರ ಅನುಭವ ಕಂಡುಬಂದಾಕ್ಷಣ ಸಾಮಾನ್ಯವಾಗಿ ಪೆನ್, ಇಯರ್ ಬಡ್ ಅಥವಾ ಕೈ ಬೆರಳುಗಳನ್ನು ಹಾಕಿ ಅದರಲ್ಲಿನ ವ್ಯಾಕ್ಸ್ ಅಥವಾ ಕಿವಿ ಗುಗ್ಗೆಯನ್ನು ತೆಗೆಯಲು ಮುಂದಾಗುತ್ತೇವೆ. ಆದರೆ, ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಕೇಳುವ ಸಾಮರ್ಥ್ಯವೇ ಹೋಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ನಾಲ್ಕನೇ ವಾಯ್ಸ್ ಕಾನ್ ಮತ್ತು ಏರ್ವೇ ಕಾನ್ಫರೆನ್ಸ್ನಲ್ಲಿ ಈ ಕುರಿತು ಮಾತನಾಡಿರುವ ತಜ್ಞ ವೈದ್ಯರು, ನಗರ ಪ್ರದೇಶದಲ್ಲಿ ಈ ರೀತಿ ಕೇಳುವಿಕೆ ನಷ್ಟದಿಂದ ಪ್ರತಿ ತಿಂಗಳು ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಕಿವಿಗೆ ಈ ರೀತಿಯ ವಸ್ತುಗಳನ್ನು ಹಾಕಿಕೊಳ್ಳುವ ಮೂಲಕ ಅನೇಕರು ಉದ್ದೇಶಪೂರಿತವಲ್ಲದೇ ಶ್ರವಣ ನಷ್ಟವನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.
ಓಟೋಲರಿಂಗೋಲಜಿಸ್ಟ್ಸ್ ಅಸೋಸಿಯೇಷನ್ನ ಮುಖ್ಯಸ್ಥ ಡಾ.ರಾಕೇಶ್ ಶ್ರೀವಾತ್ಸವ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಕಿವಿಯು ಸ್ವಯಂ ಸ್ವಚ್ಛಗೊಳಿಸುವ ಯಾಂತ್ರಿಕ ವ್ಯವಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ನಿರ್ವಹಣೆಯ ಅಗತ್ಯವಿಲ್ಲ. ಕಿವಿ ಗುಗ್ಗೆ ಅಥವಾ ವ್ಯಾಕ್ಸ್ ಅಥವಾ ಸೆರುಮೆನ್ ಕಿವಿಯಲ್ಲಿನ ಡ್ರಮ್ಸ್ಗಳನ್ನು ನೈಸರ್ಗಿಕವಾಗಿ ರಕ್ಷಣೆ ಮಾಡುತ್ತದೆ. ಇದು ಒಳಗಿವಿಯಲ್ಲಿನ ಧೂಳು ಮತ್ತು ಕೊಳೆಯಿಂದ ರಕ್ಷಿಸುತ್ತದೆ. ಆದರೆ, ಇದನ್ನು ತಿಳಿಯದೇ ಅಸ್ತವ್ಯಸ್ಥವಾಗಿ ಸ್ವಚ್ಛಗೊಳಿಸುವ ಕ್ರಮದಿಂದ ವಾಕ್ಸ್ ಕಿವಿಯೊಳಗೆ ಹೋಗುತ್ತದೆ. ಇದರಿಂದ ಹೆಚ್ಚಿನ ಒತ್ತಡ ಉಂಟಾಗಿ, ಕೇಳುವಿಕೆಯ ಶಕ್ತಿ ಕ್ಷಿಣಿಸುತ್ತದೆ. ಅಲ್ಲದೇ ಕಿವಿ ನೋವು ಮತ್ತು ಸೋಂಕಿಗೆ ಗುರಿಯಾಗುತ್ತದೆ. ಪ್ರತಿ ತಿಂಗಳು ಈ ರೀತಿಯ ಐದು ಆರು ಪ್ರಕರಣಗಳು ಬೆಳಕಿಗೆ ಬರುತ್ತಿದೆ ಎಂದರು.
ಮತ್ತೊಬ್ಬ ಶ್ರವಣ ತಜ್ಞ ಡಾ.ಸುಮಿತ್ ಶರ್ಮಾ ಮಾತನಾಡಿ, ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಮಕ್ಕಳ ಕಿವಿಗೆ ಸಾಸಿವೆ ಎಣ್ಣೆ ಹಾಕುವ ರೂಢಿ ಇದ್ದು, ಈ ರೀತಿ ಎಣ್ಣೆಯನ್ನು ಹಾಕದಂತೆ ಮನವಿ ಮಾಡಿದ್ದಾರೆ. ಕಿವಿಯೊಳಗೆ ಎಣ್ಣೆಯನ್ನು ಹಾಕುವುದರಿಂದ ಯಾವುದೇ ಪ್ರಯೋಜವಿಲ್ಲ. ಇದರಿಂದ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕೆಲವು ಮಂದಿಗೆ ಮಾತ್ರ ಗುಗ್ಗೆ ಸಮಸ್ಯೆ ಕಾಡುತ್ತದೆ. ಕಾರಣ ಅವರ ಕಿವಿ ಕೊಳವೆಯ (Ear Canal) ವಿನ್ಯಾಸ ಈ ರೀತಿಯಾಗಿರುತ್ತದೆ. ಇಂಥವರು ಅವಶ್ಯಕತೆ ಇದ್ದಲ್ಲಿ ವೈದ್ಯರ ಮೊರೆ ಹೋಗಬೇಕು. ಅದರ ಬದಲಾಗಿ ಸ್ವಯಂ ವೈದ್ಯರಾಗಬಾರದು ಎಂದರು.
ಕಿವಿಯಲ್ಲಿರುವ ಗುಗ್ಗೆ ಕೊಳೆ ಅದನ್ನು ತೆಗೆಯಬೇಕು ಎನ್ನುತ್ತಾರೆ ಅನೇಕರು. ಆದರೆ, ಈ ವ್ಯಾಕ್ಸ್ ಕಿವಿಯ ಡ್ರಮನ್ ಅನ್ನು ಧೂಳಿನಿಂದ ರಕ್ಷಿಸುತ್ತದೆ. ಅಲ್ಲದೇ, ಕಿವಿಯಲ್ಲಿ ವ್ಯಾಕ್ಸ್ ಇರುವುದು ಅನೇಕ ಬಾರಿ ಒಳ್ಳೆಯದು. ಸೋಂಕಿನ ಪ್ರಕರಣದಲ್ಲೂ ನಾವು ಸೋಂಕು ನಿವಾರಣೆ ಆದ ಬಳಿಕವೇ ಈ ವ್ಯಾಕ್ಸ್ ತೆಗೆಯುತ್ತೇವೆ ಎನ್ನುತ್ತಾರೆ ಡಾ.ಆಶೀಶ್ ಚಂದ್ರ.(ಐಎಎನ್ಎಸ್)
ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ತುಟಿ ಬಿರುಕು ಸಮಸ್ಯೆ: ಈ ತಪ್ಪು ಮಾಡಲೇಬೇಡಿ