ಮನುಷ್ಯ ಬದುಕಲು ಜೀವಜಲ ಅಗತ್ಯ. ಅದೇ ಕುಡಿಯುವ ನೀರು ಶುದ್ಧವಾಗಿಲ್ಲದಿದ್ದರೆ, ಮಾರಣಾಂತಿಕ ಕಾಯಿಲೆ ಉಂಟಾಗಿ ಜೀವಕ್ಕೆ ಎರವಾಗಬಹುದು. ನೀರಿನ ಮೂಲಕ ಪ್ರವೇಶಿಸುವ ನೈಟ್ರೇಟ್ ಮತ್ತು ಟ್ರೈಹಲೋಮಿಥೇನ್‌ಗಳಿಂದ (ಟಿಎಚ್‌ಎಂ) ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ರಾಸಾಯನಿಕಗಳು ವೇಗವಾಗಿ ಪ್ರಸರಣಗೊಂಡು ಕ್ಯಾನ್ಸರ್ ಗೆಡ್ಡೆಗಳನ್ನು ಉಂಟು ಮಾಡುತ್ತವೆ. ಸ್ಪೇನ್‌ನ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ವಿಜ್ಞಾನಿಗಳು ಇದರ ಮೇಲೆ ಸಂಶೋಧನೆ ನಡೆಸಿದ್ದು, ಉತ್ತಮ ಆಹಾರ, ನೀರು ಸೇವನೆಯಿಂದ ಮಾತ್ರ ಈ ಅಪಾಯದಿಂದ ಪಾರಾಗಲು ಸಾಧ್ಯ ಎಂಬ ಸಲಹೆಯನ್ನೂ ನೀಡಿದ್ದಾರೆ.
ಕುಡಿಯುವ ನೀರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾಲಿನ್ಯಕಾರಕಗಳಾದ ನೈಟ್ರೇಟ್ ಮತ್ತು ಟಿಎಚ್ಎಂಗಳು ಪ್ರಾಸ್ಟೇಟ್ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಬೆಳೆಗೆ ಬಳಸುವ ರಸಗೊಬ್ಬರಗಳು ಮತ್ತು ಪಶುಪಾಲನಾ ಕೇಂದ್ರಗಳ ತ್ಯಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ ಇರುತ್ತದೆ. ಇದು ಮಳೆ ನೀರಿನಲ್ಲಿ ಸೇರಿಕೊಂಡು ಅಂತರ್ಜಲ ಮತ್ತು ನದಿ ಮೂಲಗಳನ್ನು ಸೇರುತ್ತದೆ. ಅದು ಕ್ರಮೇಣ ನೀರಿನಲ್ಲಿ ಬೆರೆತು ದೇಹ ಹೊಕ್ಕಿದಾಗ ಸಮಸ್ಯೆ ಉಂಟು ಮಾಡುತ್ತದೆ.
ನೈಟ್ರೇಟ್ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ ಟಿಎಚ್ಎಂಗಳು ಉಸಿರಾಟ ಮತ್ತು ಚರ್ಮದ ಮೂಲಕ ಕರುಳು ಸೇರುತ್ತದೆ. ಕಲುಷಿತ ನೀರಿನಲ್ಲಿ ಈಜುವ ಮೂಲಕ, ಪಾತ್ರೆಗಳನ್ನು ತೊಳೆಯುವುದು, ಇತ್ಯಾದಿಗಳನ್ನ ಮಾಡಿದಾಗ ಅವು ಮನುಷ್ಯ ದೇಹವನ್ನು ಸೇರುತ್ತವೆ. ಟಿಎಚ್ಎಂಗಳು ದೇಹದಲ್ಲಿ ಅತಿಹೆಚ್ಚು ಸೇರಿಕೊಳ್ಳುವುದರಿಂದ ಗಾಳಿಗುಳ್ಳೆಯ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದು ಈಗಾಗಲೇ ಸಾಬೀತಾಗಿದೆ. ಇದರ ಜೊತೆಗೆ ಇತರ ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗಲಿದೆಯಾ ಎಂಬುದು ಸ್ಪಷ್ಟವಾಗಿಲ್ಲ.
ಸಂಶೋಧನೆಯಲ್ಲಿ ಕಂಡುಬಂದಿದ್ದೇನು?: ನೀರಿನ ಮೂಲಕ ದೇಹವನ್ನು ಪ್ರವೇಶಿಸುವ ನೈಟ್ರೇಟ್ ಮತ್ತು ಟಿಎಚ್ಎಂಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆಯೇ ಎಂಬುದನ್ನು ವಿಜ್ಞಾನಿಗಳು ಪರೀಕ್ಷಿಸಿದ್ದಾರೆ. ಇದಕ್ಕಾಗಿ, 2008 ಮತ್ತು 2013 ರ ನಡುವೆ ಸ್ಪೇನ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 697 ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳ ಮೇಲೆ ನಿಗಾ ಇಟ್ಟು ಸಂಶೋಧನೆ ನಡೆಸಿದ್ದರು. ಇದರಲ್ಲಿ 97 ಜನರು ವೇಗವಾಗಿ ಹರಡುವ ಕ್ಯಾನ್ಸರ್ ಗೆಡ್ಡೆಗಳಿಗೆ ತುತ್ತಾಗಿದ್ದರು.
8ನೇ ವಯಸ್ಸಿನ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೂ ಸಂಶೋಧನೆ ನಡೆಸಲಾಗಿದೆ. ಪರೀಕ್ಷೆಗೆ ಒಳಗಾದವರು ನೈಟ್ರೇಟ್ ಮತ್ತು ಟಿಎಚ್ಎಂಗಳಿಗೆ ಎಷ್ಟು ಪ್ರಮಾಣದಲ್ಲಿ ತುತ್ತಾಗಿದ್ದಾರೆ. ಅವರು ಯಾವ ಪ್ರದೇಶದ ನಿವಾಸಿಗಳು, ಯಾವ ರೀತಿಯ ನೀರು ಕುಡಿಯುತ್ತಿದ್ದಾರೆ? ಎಷ್ಟು ನೀರು ಕುಡಿದಿದ್ದಾರೆ? ಅವರ ಪ್ರದೇಶದ ಅಂತರ್ಜಲದಲ್ಲಿರುವ ರಾಸಾಯನಿಕಗಳ ಸ್ವರೂಪ ಸೇರಿದಂತೆ ಮುಂತಾದ ಅಂಶಗಳನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ.
ಸಂಶೋಧನಾ ಪರೀಕ್ಷೆ ಫಲಿತಾಂಶವೇನು?: ನೀರಿನಲ್ಲಿ ನೈಟ್ರೈಟ್ ಪ್ರಮಾಣ ಹೆಚ್ಚಾದಷ್ಟೂ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ. ದಿನಕ್ಕೆ ಸರಾಸರಿ 6 ಮಿಲಿಗ್ರಾಂಗಿಂತ ಕಡಿಮೆ ನೈಟ್ರೇಟ್ ಸೇವಿಸಿದವರಿಗೆ ಹೋಲಿಸಿದರೆ 14 ಮಿಲಿಗ್ರಾಂಗಿಂತ ಹೆಚ್ಚು ನೈಟ್ರೇಟ್ ಪಡೆದವರು ಕಡಿಮೆ ಅಥವಾ ಮಧ್ಯಮ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ಗೆ ತುತ್ತಾಗಿದ್ದಾರೆ. ಇದು 1.6 ಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿದೆ.
ನೀರಿನ ಮೂಲಕ ಹೆಚ್ಚು ನೈಟ್ರೇಟ್ ದೇಹ ಸೇರಿದಲ್ಲಿ ಅದನ್ನು ತಡೆಯಲು ನಾರಿನಂಶ, ಹಣ್ಣು, ತರಕಾರಿಗಳು ಮತ್ತು ವಿಟಮಿನ್ ಸಿ ಪ್ರಮಾಣ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯದ ಪ್ರಮಾಣವನ್ನು ತಗ್ಗಿಸುತ್ತದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಪಾಲಿಫಿನಾಲ್‌ಗಳು ಕಾರ್ಸಿನೋಜೆನಿಕ್ ನೈಟ್ರೊಸಮೈನ್‌ಗಳ ರಚನೆಯನ್ನು ತಡೆಯುತ್ತದೆ ಎಂಬುದು ಸಂಶೋಧನೆಯ ಸಾರವಾಗಿದೆ.
ಓದಿ: ಸ್ವಯಂ ನಿರೋಧಕ ಕಾಯಿಲೆಯ ಚಿಕಿತ್ಸಾ ಗುಣಹೊಂದಿದೆ ಕೃತಕ ಸಿಹಿಕಾರಕಗಳು