ಯಾವುದೇ ರೋಗವನ್ನು ತಡೆಯುವಲ್ಲಿ ಸರಿಯಾದ ಆಹಾರ ಸೇವನೆ ಅವಶ್ಯಕ. ಆದರಂತೆ, ಈ ಆಹಾರವನ್ನು ಯಾವಾಗ ಸೇವಿಸುತ್ತೀರಾ ಎಂಬುದು ಕೂಡ ಪ್ರಮುಖವಾಗುತ್ತದೆ. ಅದರಲ್ಲೂ ದಿನದ ಮೊದಲ ಆಹಾರ ಅಂದರೆ ಬೆಳಿಗ್ಗಿನ ತಿಂಡಿ ಇದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಐಎಸ್ ಗ್ಲೋಬಲ್ ಅಧ್ಯಯನ ತಿಳಿಸಿದೆ. ಬೆಳಿಗ್ಗೆ 9 ಗಂಟೆ ಬಳಿಕ ತಿಂಡಿ ಸೇವಿಸುವವರಿಗೆ ಹೋಲಿಕೆ ಮಾಡಿದರೆ ಬೆಳಗ್ಗೆ 8ಗಂಟೆ ಒಳಗೆ ತಿಂಡಿ ತಿನ್ನುವುದರಿಂದ ಮಧುಮೇಹದ ಅಪಾಯವನ್ನು ಶೇ 59ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ಅನಾರೋಗ್ಯಕರ ಡಯಟ್, ದೈಹಿಕ ಚಟುವಟಿಕೆ ಕೊರತೆ ಮತ್ತು ಧೂಮಾಪಾನವೂ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದೀಗ ಆಹಾರ ಸೇವನೆ ಸಮಯವೂ ಕೂಡ ಇದಕ್ಕೆ ಕೊಡುಗೆ ನೀಡಲಿದೆ ಎಂದಿದ್ದಾರೆ.
ಆಹಾರ ಸೇವನೆ ಸಮಯವೂ ದೇಹದ ಜೈವಿಕ ಗಡಿಯಾರ, ರಕ್ತದ ಗ್ಲುಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದಾಗ್ಯೂ ಕೆಲವು ಅಧ್ಯಯನಗಳು ಮಾತ್ರ ಈ ಆಹಾರ ಸಮಯದ ಬಗ್ಗೆ ಗಮನ ಕೇಂದ್ರೀಕರಿಸಿದೆ. ಈ ಕೊರತೆಯ ನಡುವೆಯೂ ಐಎಸ್ ಗ್ಲೋಬಲ್ ಸಂಶೋಧಕರು, ತಿನ್ನುವ ಸಮಯ ಮತ್ತು ಟೈಪ್ 2 ಮಧುಮೇಹದ ನಡುವಿನ ಸಂಬಂಧ ಕುರಿತು ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ 1,03,312 ಜನರನ್ನು ಆಹಾರದ ಅಭ್ಯಾಸವನ್ನು ವಿಶ್ಲೇಷಿಸಲಾಗಿದೆ.
ಮೊದಲ ಎರಡು ವರ್ಷದ ಸರಾಸರಿ ಆಹಾರದ ಅಭ್ಯಾಸಗಳನ್ನು ಆಧಾರಿಸಿ, ಏಳು ವರ್ಷಗಳ ಕಾಲ ಅವರ ಆರೋಗ್ಯದ ಮಾದರಿಯನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 963 ಮಂದಿಗೆ ಹೊಸದಾಗಿ ಮಧುಮೇಹದ ಪರಿಣಾಮಕ್ಕೆ ಒಳಗಾಗಿದ್ದಾರೆ. ಈ ವೇಳೆ 9 ಗಂಟೆ ಮತ್ತು ಅದರ ಬಳಿಕ ಆಹಾರ ಸೇವನೆ ಮಾಡಿದವರಲ್ಲಿ ಮಧುಮೇಹದ ಅಪಾಯ ಗಮನಾರ್ಹವಾಗಿ ಹೆಚ್ಚಿದೆ. ಬೆಳಗಿನ ತಿಂಡಿಯನ್ನು ತಪ್ಪಿಸುವುದರಿಂದ ಗ್ಲುಕೋಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ತಪ್ಪುತ್ತದೆ. ಅಲ್ಲದೇ ಇನ್ಸುಲಿನ್ ಹಾರ್ಮೋನ್ ಡೋಸ್ಗಳು ಅನಿಯಮಿತವಾಗಬಹುದು.
ಕೇವಲ ತಿಂಡಿ ಒಂದೇ ಅಲ್ಲ, ರಾತ್ರಿ ಹೊತ್ತು ಊಟ ತಡ ಮಾಡುವುದರಿಂದಲೂ ಸಮಸ್ಯೆ ಹೆಚ್ಚಳ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಉದಾಹರಣೆಗೆ ರಾತ್ರಿ 10 ಗಂಟೆ ಬಳಿಕ ಆಹಾರ ಸೇವನೆ ಮಾಡುವವರಲ್ಲಿ ಮಧುಮೇಹದ ಅಪಾಯ ಹೆಚ್ಚಿದೆ. ದಿನದಲ್ಲಿ ಐದು ಬಾರಿ ಕಡಿಮೆ ಮಟ್ಟದಲ್ಲಿ ಆಹಾರ ಸೇವನೆ ಮಾಡುವವರಲ್ಲಿ ಈ ಅಪಾಯ ಕಡಿಮೆ ಇದೆ. 8 ಗಂಟೆ ಮುಂಚೆ ತಿಂಡಿ ಮತ್ತು ರಾತ್ರಿ 10ಗಂಟೆಗೆ ಮುಂಚೆ ಆಹಾರ ಸೇವನೆ ಮಾಡುವುದರಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು.
ಮಧುಮೇಹದ ಅಪಾಯ ಕಡಿಮೆ ಮಾಡಲು, ದಿನದ ಮೊದಲ ಆಹಾರವನ್ನು ಬೆಳಗ್ಗೆ 8 ಮತ್ತು ಕೊನೆಯ ಆಹಾರವನ್ನು ರಾತ್ರಿ 7ಗಂಟೆ ಮುಂಚಿತವಾಗಿ ಸೇವನೆ ಮಾಡುವುದು ಅತ್ಯುತ್ತಮ ಕ್ರಮವಾಗಿದೆ. ಇದು ಈ ಹಿಂದಿನ ಅಧ್ಯಯನದಲ್ಲಿ ಕೂಡ ತೋರಿಸಿದೆ. ಸ್ತನ ಮತ್ತು ಕ್ಯಾನ್ಸರ್ ಅಪಾಯವನ್ನು ಕೂಡ ಈ ರೀತಿಯ ಆಹಾರ ಕ್ರಮದಿಂದ ಕಡಿಮೆ ಮಾಡಬಹುದು ಎಂದು ಐಎಸ್ ಗ್ಲೋಬಲ್ ಅಧ್ಯಯನ ತಿಳಿಸಿದೆ. ಆಹಾರ ಕ್ರಮ, ಜೈವಿಕ ಗಡಿಯಾರ ಮತ್ತು ಆರೋಗ್ಯವೂ ಮಧುಮೇಹ ಮತ್ತು ಇತರೆ ಸಮಸ್ಯೆಗಳನ್ನು ತಡೆಯುವಲ್ಲಿ ಬಲವಾದ ಪರಿಣಾಮವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಮಧುಮೇಹ, ಹೃದಯ ಅಪಾಯದ ಭಯವೇಕೆ? ಸ್ನಾಕ್ ಬದಲು ಇದನ್ನು ಸೇವಿಸಿ