ಬೆಂಗಳೂರು: ಕ್ಯಾನ್ಸರ್ ಇದೊಂದು ಪದವೇ ಸಾಕು ಮಾನಸಿಕ ಖಿನ್ನತೆ ಹೆಚ್ಚಾಗಲು. ಇಂದು 'ವಿಶ್ವ ರಕ್ತ ಕ್ಯಾನ್ಸರ್' ದಿನ. ವರ್ಷದಿಂದ ವರ್ಷಕ್ಕೆ ರಕ್ತ ಕ್ಯಾನ್ಸರ್‌ನ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವದಾದ್ಯಂತ 1.24 ಮಿಲಿಯನ್ ರಕ್ತದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲಿ ಭಾರತದಲ್ಲಿಯೇ 70 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗ್ತಿದೆ.
ಬಹುತೇಕ ಜನರಿಗೆ ರಕ್ತದ ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆ ಹೆಚ್ಚಿದೆ. ಇದರಿಂದಾಗಿ ಪ್ರಾರಂಭಿಕ ಹಂತದಲ್ಲಿಯೇ ರಕ್ತದ ಕ್ಯಾನ್ಸರ್ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಇನ್ನೂ ಕೆಲವರಿಗೆ ರಕ್ತದ ಕ್ಯಾನ್ಸರ್ ಬಗ್ಗೆ ಸಾಕಷ್ಟು ಅನುಮಾನ ಹಾಗೂ ತಪ್ಪು ಗ್ರಹಿಕೆಗಳಿವೆ. ಹೀಗಾಗಿ, ರಕ್ತದ ಕ್ಯಾನ್ಸರ್ ಬಗೆಗಿನ ತಪ್ಪು ತಿಳುವಳಿಕೆ ಹಾಗೂ ಕ್ಯಾನ್ಸರ್‌ನ ಲಕ್ಷಣಗಳೇನು?, ಅದಕ್ಕೆ ಪರಿಹಾರವೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ಫೊರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಆಂಕೋಲಾಜಿ ಮತ್ತು ಹೆಮಟೋ ಆಂಕೋಲಾಜಿ ನಿರ್ದೇಶಕಿ ಡಾ. ನಿತಿ ರೈಜಾಡಾ ಮಾಹಿತಿ ನೀಡಿದ್ದಾರೆ.
ರಕ್ತದ ಕ್ಯಾನ್ಸರ್ ಯಾವುದು? : ಬಹುತೇಕ ಜನರಿಗೆ ರಕ್ತದ ಕ್ಯಾನ್ಸರ್ ಬಗ್ಗೆ ಜಾಗೃತಿ ಇರುವುದಿಲ್ಲ. ಸಾಮಾನ್ಯವಾಗಿ ಕಡಿಮೆ ರಕ್ತದ ಒತ್ತಡವನ್ನು ರಕ್ತದ ಕ್ಯಾನ್ಸರ್ ಅಥವಾ ಲ್ಯುಕೇಮಿಯಾ ಎಂದು ಕರೆಯಲಾಗುತ್ತದೆ. ಲ್ಯುಕೇಮಿಯಾ, ಲಿಂಪೋಮಾ, ಮೈಲೋಮಾ ಮತ್ತು ಮೈಲೋಡಿಸ್ಪ್ಲಾಸ್ಟಿಕ್ ಸಿಂಡ್ರೋಮ್‌ಗಳು ಸೇರಿದಂತೆ ಹಲವು ಬಗೆಯ ರಕ್ತದ ಕ್ಯಾನ್ಸರ್‌ಗಳಾಗಿ ಗುರುತಿಸಿಕೊಂಡಿವೆ. ಪ್ರತಿಯೊಂದು ರಕ್ತದ ಕ್ಯಾನ್ಸರ್‌ನ ಲಕ್ಷಣಗಳು ವಿಭಿನ್ನವಾಗಿರುತ್ತವೆ. ದೇಹದಲ್ಲಿನ ಪ್ಲೇಟ್‌ಲೆಟ್ಸ್ ಬೆಳವಣಿಗೆ ಅಸಹಜವಾದ ಸಂದರ್ಭದಲ್ಲಿ ರಕ್ತದ ಕ್ಯಾನ್ಸರ್ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಅಸಹಜ ಬೆಳವಣಿಗೆ ಮೂಳೆ ಮಜ್ಜೆಗಳಿಂದ ಪ್ರಾರಂಭವಾಗುತ್ತದೆ.
ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
- ಸಾಮಾನ್ಯವಾಗಿ ರಕ್ತದ ಕ್ತಾನ್ಸರ್ ಬರುತ್ತಿರುವ ಮೊದಲ ಲಕ್ಷಣವೆಂದರೆ, ದೇಹದಲ್ಲಿ ರಕ್ತದ ಕಣಗಳು ಕಡಿಮೆಯಾಗುವುದು.
- ಮೂಳೆ ಸ್ನಾಯುಗಳಲ್ಲಿ ನೋವು.
- ಹೊಟ್ಟೆ ಉಬ್ಬರ.
- ದೇಹದ ತೂಕ ಇಳಿಕೆ.
- ದೇಹದಲ್ಲಿ ನೀಲಿ ಕಲೆ ಕಾಣಿಸುವುದು.
- ಆಯಾಸ.
- ಗಂಟಲು, ಬಾಯಿ ಚರ್ಮ ಮತ್ತು ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು.
- ಕೂದಲು ಉದುರುವುದು.
- ಮೂಳೆ ಬಲಹೀನವಾಗುವುದು.
- ರೋಗನಿರೋಧಕ ಶಕ್ತಿ ಕುಂದುವುದು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದರಲ್ಲಿ ಕಂಡು ಬರುವ ಯಾವ ಲಕ್ಷಣಗಳನ್ನೂ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಕನಿಷ್ಠ 6 ತಿಂಗಳಿಗೊಮ್ಮೆ ರಕ್ತದ ಪರೀಕ್ಷೆ ಮಾಡಿಸುವುದು ಉತ್ತಮ ಎನ್ನುತ್ತಾರೆ ಡಾ. ನಿತಿ ರೈಜಾಡಾ.
ರಕ್ತದ ಕ್ಯಾನ್ಸರ್ ಇರುವ ಎಲ್ಲರಿಗೂ ಮೂಳೆ ಮಜ್ಜೆಯ ಕಸಿ ಅಗತ್ಯವಿದೆಯೇ?: ಈ ಕುರಿತು ಮಾಹಿತಿ ನೀಡಿರುವ ಡಾ. ನಿತಿ ರೈಜಾಡಾ, ರಕ್ತದ ಕ್ಯಾನ್ಸರ್ ಹೊಂದಿರುವ ಎಲ್ಲಾ ರೋಗಿಗಳಿಗೆ ಮೂಳೆ ಮಜ್ಜೆಯ ಕಸಿ ಅಗತ್ಯವಿಲ್ಲ. ಈ ಕಸಿಯು ಕ್ಯಾನ್ಸರ್‌ನ ಹಂತವನ್ನು ನೋಡಿ ನಿರ್ಧಾರ ಮಾಡಲಾಗುತ್ತದೆ. ಕೆಲವೊಮ್ಮೆ ರೋಗದ ತೀವ್ರತೆ, ಅನುವಂಶಿಕ ಇತಿಹಾಸ ಹೊಂದಿರುವ ಬಗ್ಗೆ ಇತರೆ ಮಾಹಿತಿ ಆಧರಿಸಿ ಈ ಕಸಿ ಮಾಡಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ಬ್ಲಡ್ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು ಇರುವುದರಿಂದ ಎಲ್ಲರಿಗೂ ಮೂಳೆ ಮಜ್ಜೆಯ ಕಸಿ ಅಗತ್ಯವಿಲ್ಲ.
ಲ್ಯುಕೇಮಿಯಾ ಮತ್ತು ರಕ್ತದ ಕ್ಯಾನ್ಸರ್ ವ್ಯತ್ಯಾಸ ಏನು?: ರಕ್ತದ ಕ್ಯಾನ್ಸರ್‌ನಲ್ಲಿ ಮೂರು ವಿಧಗಳಿವೆ.
- ಲ್ಯುಕೇಮಿಯಾ
- ಲಿಂಫೋಮಾ
- ಮತ್ತು ಮೈಲೋಮಾ.
'ಲ್ಯುಕೇಮಿಯಾ': ಕೂಡ ರಕ್ತದ ಕ್ಯಾನ್ಸರ್‌ನಲ್ಲಿ ಒಂದು ವಿಧ. ಈ ಕ್ಯಾನ್ಸರ್ ದೇಹದ ಎಲ್ಲಾ ಬಿಳಿ ರಕ್ತದ ಕಣಗಳ ಮೇಲೆ ಪರಿಣಾಮ ಬೀರಿ, ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಈ ಕ್ಯಾನ್ಸರ್ 15 ವರ್ಷ ಒಳಗಿನ ಮಕ್ಕಳಲ್ಲೂ ಕಾಣಿಸಿಕೊಳ್ಳಬಹುದು.
'ಲಿಂಫೋಮಾ': ಬ್ಲಡ್ ಕ್ಯಾನ್ಸರ್ 15 ವರ್ಷ ಮೇಲ್ಪಟ್ಟ 35 ವರ್ಷ ಒಳಗಿನವರು ಹಾಗೂ 50 ವರ್ಷ ಮೇಲ್ಪಟ್ಟವರಲ್ಲೂ ಕಾಣಿಸಿಕೊಳ್ಳುತ್ತದೆ.
'ಮೈಲೋಮಾ': ರಕ್ತದ ಕ್ಯಾನ್ಸರ್ ಪ್ಲಾಸ್ಮಾ ಕೋಶಗಳ ಮೇಲೆ ಪರಿಣಾಮ ಬೀರಲಿದ್ದು, ಬಿಳಿ ರಕ್ತ ಕಣಗಳನ್ನು ಕಡಿಮೆಗೊಳಿಸುತ್ತದೆ. ಜತೆಗೆ ದೇಹವನ್ನು ಸೋಂಕಿಗೆ ಗುರಿ ಮಾಡುತ್ತದೆ.
ರಕ್ತ ಕ್ಯಾನ್ಸರ್ ಬರಲು ಕಾರಣವೇನು?: ಬಹಳಷ್ಟು ಜನರಿಗೆ ರಕ್ತದ ಕ್ಯಾನ್ಸರ್ ಬರಲು ಕಾರಣ ರಕ್ತದ ಹೀನತೆ ಎನ್ನಲಾಗ್ತಿದೆ. ದೇಹವು ಆಮ್ಲಜನಕದ ಅಗತ್ಯತೆಯನ್ನು ಪೂರೈಸಲು ಸಾಕಷ್ಟು ಆರೋಗ್ಯಕರ ಕೆಂಪು ರಕ್ತದ ಕಣಗಳು ಅಥವಾ ಹಿಮೋಗ್ಲೋಬಿನ್ ಅವಶ್ಯಕ. ಇದು ಸಾಧ್ಯವಾಗದೇ ಇದ್ದಾಗ ದೇಹದಲ್ಲಿ ರಕ್ತ ಹೀನತೆ ಉಂಟಾಗಬಹುದು.
ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾದಾಗ ದೇಹದ ಅಂಗಗಳ ಸಾಮಾನ್ಯ ಕಾರ್ಯ ನಿರ್ವಹಣೆ ಸಾಧ್ಯವಾಗುವುದಿಲ್ಲ. ರಕ್ತ ಹೀನತೆ ಹಲವು ಕಾರಣಗಳಿಂದ ಉಂಟಾಗುವ ಸಾಧ್ಯತೆ ಇದೆ. ಅದರಲ್ಲಿ ಪ್ರಮುಖ ಅಂಶವೆಂದರೆ ಕಬ್ಬಿಣಾಂಶದ ಕೊರತೆ. ಹೀಗಾಗಿ ಪ್ರತಿಯೊಬ್ಬರು ದೇಹದಲ್ಲಿ ಸಾಕಷ್ಟು ಕಬ್ಬಿಣಾಂಶ ಇರುವಂತೆ ನೋಡಿಕೊಳ್ಳುವುದು ಅವಶ್ಯಕ.
ಅನುವಂಶಿಕವಾಗಿ ರಕ್ತದ ಕ್ಯಾನ್ಸರ್ ಬರಲಿದೆಯೇ?: ಸಾಮಾನ್ಯವಾಗಿ ರಕ್ತದ ಕ್ಯಾನ್ಸರ್ ಅನುವಂಶಿಯವಾಗಿ ಬರುವುದಿಲ್ಲ. ಆದರೆ, ಕೆಲವು ಪ್ರಕರಣಗಳಲ್ಲಿ ಲಿಂಚ್ ಸಿಂಡ್ರೋಮ್ ಅಥವಾ BRCA1/2 ರೂಪಾಂತರಗಳಿಂದ ಅನುವಂಶಿಕವಾಗಿಯೂ ರಕ್ತದ ಕ್ಯಾನ್ಸರ್ ಬರಬಹುದು. ಒಂದು ವೇಳೆ ಕುಟುಂಬದಲ್ಲಿ ರಕ್ತದ ಕ್ಯಾನ್ಸರ್‌ನ ಇತಿಹಾಸವಿದ್ದರೆ, ಕನಿಷ್ಠ 6 ತಿಂಗಳಿಗೊಮ್ಮೆ ರಕ್ತದ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯವಶ್ಯ.
ರಕ್ತದ ಕ್ಯಾನ್ಸರ್ ಮಾರಣಾಂತಿಕವೇ?: ಹಿಂದೆಲ್ಲಾ ರಕ್ತದ ಕ್ಯಾನ್ಸರ್ ಬಂತೆಂದರೆ ಸಾವು ಖಚಿತ ಎನ್ನುವ ನಂಬಿಕೆ ಇತ್ತು. ಆದರೀಗ, ಪರಿಸ್ಥಿತಿ ಬದಲಾಗಿದೆ, ಅತ್ಯಾಧುನಿಕ ತಂತ್ರಜ್ಞಾನ, ಚಿಕಿತ್ಸಾ ವಿಧಾನಗಳಲ್ಲಿ ಬದಲಾವಣೆ ಆಗಿದೆ. ಕೀಮೋಥೆರಪಿ, ವಿಕಿರಣ, ಉದ್ದೇಶಿತ ಚಿಕಿತ್ಸೆ/ಜೈವಿಕಶಾಸ್ತ್ರ, ಮೂಳೆ ಮಜ್ಜೆಯ ಕಸಿ ಮತ್ತು ಇಮ್ಯುನೊಥೆರಪಿ ಅಂಥಹ ಚಿಕಿತ್ಸೆಗಳಿಂದ ಗುಣಪಡಿಸಬಹುದಾಗಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ಅನ್ನು ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭ. ಹೀಗಾಗಿ ರಕ್ತದ ಕ್ಯಾನ್ಸರ್ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ ಎನ್ನುತ್ತಾರೆ-ಡಾ. ನಿತಿ ರೈಜಾಡಾ.
(ಓದಿ: ಕ್ಯಾನ್ಸರ್ ತಡೆಗೆ ನೀಡುವ ಹೆಚ್‌ಪಿವಿ ಲಸಿಕೆ ಅಭಿಯಾನ ಕೋವಿಡ್‌ನಿಂದಾಗಿ ಸ್ಥಗಿತ..!)