ಲೈಂಗಿಕ ಕ್ರಿಯೆ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸುವುದರಿಂದ ಭಾರತದಲ್ಲಿ ವೈವಾಹಿಕ ಅತ್ಯಾಚಾರವನ್ನು ಕಾನೂನುಬಾಹಿರ ಎಂದು ಪರಿಗಣಿಸುವುದಿಲ್ಲ. ಲೈಂಗಿಕ ಕ್ರಿಯೆ ಮದುವೆಯ ಒಂದು ಮುಖ್ಯ ಮತ್ತು ಅವಿಭಾಜ್ಯ ಅಂಗವಾಗಿರುವುದರಿಂದ ಅದನ್ನು ಅಪರಾಧ ಎಂದು ಹೇಳಿದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಇದನ್ನು ಕೋರ್ಟ್‌ನಲ್ಲಿ ಸಾಬೀತು ಮಾಡುವುದು ಕಷ್ಟ.
ಮನೋವೈದ್ಯ ಡಾ. ವೀಣಾ ಕೃಷ್ಣನ್ ಹೇಳುವ ಪ್ರಕಾರ, ನಮ್ಮ ಸಮಾಜದಲ್ಲಿ ದೈಹಿಕ ಅನ್ಯೋನ್ಯತೆ ಮತ್ತು ಆಸೆಗಳು ಹೆಚ್ಚಾಗಿ ಪುರುಷರೊಂದಿಗೆ ಸಂಬಂಧ ಹೊಂದಿವೆ. ವಿವಾಹ ನಂತರ ಪತ್ನಿಯ ಒಪ್ಪಿಗೆ ಸಹ ಬಹುಮುಖ್ಯ ಎಂಬುದನ್ನು ಹೆಚ್ಚಿನವರು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಪತ್ನಿಯ ಪ್ರತಿಕ್ರಿಯೆಗಳನ್ನು ಗೌರವಿಸುವುದಿಲ್ಲ. ಭಾರತದ ಹೆಚ್ಚಿನ ಮಹಿಳೆಯರು ತಾರತಮ್ಯದ ವಾತಾವರಣದಲ್ಲಿ ಬೆಳೆದಿರುವುದರಿಂದ ಪುರುಷರ ಕಿರುಕುಳ ಮತ್ತು ನಿಂದನೆಯನ್ನು ತಮ್ಮ ಜೀವನದ ಒಂದು ಭಾಗವಾಗಿ ಸ್ವೀಕರಿಸಿದ್ದಾರೆ. ವೈವಾಹಿಕ ಅತ್ಯಾಚಾರದಿಂದಾಗಿ ಕೆಲ ಮಹಿಳೆಯರು ಖಿನ್ನತೆ, ಆತಂಕ ಹಾಗೂ ಮಾನಸಿಕ ಅಸ್ವಸ್ಥತೆ ಒಳಗಾಗುತ್ತಾರೆ.
ವೈವಾಹಿಕ ಅತ್ಯಾಚಾರವೆಸಗುವ ಪುರುಷರು ಮಾನಸಿಕ ಅಸ್ವಸ್ಥರು: ಡಾ. ವೀಣಾ ಕೃಷ್ಣನ್ ಹೇಳುವಂತೆ ಹೆಂಡತಿಯ ಮೇಲೆ ಅತ್ಯಾಚಾರ ಮಾಡುವ ಗಂಡಂದಿರು ಮಾನಸಿಕವಾಗಿ ಅಸ್ವಸ್ಥರಾಗಿರುತ್ತಾರೆ. ಪುರುಷರು ವೈವಾಹಿಕ ಅತ್ಯಾಚಾರವನ್ನು ವಿವಾಹ ಜೀವನದ ಒಂದು ಭಾಗವೆಂದೇ ಪರಿಗಣಿಸಿರುತ್ತಾರೆಯೇ ಹೊರತು, ಅಪರಾಧ ಎಂದು ಭಾವಿಸುವುದಿಲ್ಲ. ಹೆಚ್ಚಿನ ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ತೀವ್ರವಾಗಿ ಅಸುರಕ್ಷಿತರಾಗಿರುತ್ತಾರೆ ಮತ್ತು ಕಡಿಮೆ ಸ್ವಾಭಿಮಾನ ಹೊಂದಿರುತ್ತಾರೆ. ಇಂತಹ ಪುರುಷರು ತಮ್ಮ ಪತ್ನಿಯು ಲೈಂಗಿಕ ಕ್ರಿಯೆಗೆ ನಿರಾಕರಿಸಿದಾಗ ಅವರ ವೈಯಕ್ತಿಕ ವೈಫಲ್ಯವೆಂದು ಪರಿಗಣಿಸುತ್ತಾರೆ. ಜೊತೆಗೆ ಮಹಿಳೆಯನ್ನು ಇನ್ನಷ್ಟು ನಿಂದಿಸುತ್ತಾರೆ.
ವೈವಾಹಿಕ ಅತ್ಯಾಚಾರದಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ: ಡಾ. ಕೃಷ್ಣನ್ ಅವರ ಪ್ರಕಾರ, ದೀರ್ಘಕಾಲದವರೆಗೆ ಅತ್ಯಾಚಾರ ಮತ್ತು ನಿಂದನೆಗೆ ಒಳಗಾಗುವುದರಿಂದ ಮಹಿಳೆಯರ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ತೀವ್ರವಾದ ಪೆಟ್ಟು ಬೀಳುತ್ತದೆ. ಇದರಿಂದಾಗಿ ಮಹಿಳೆಯರು ಮಾನಸಿಕ ಖಿನ್ನತೆ, ಆತಂಕಕ್ಕೆ ಒಳಗಾಗುವುದರ ಜೊತೆಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ನಿದ್ರಾಹೀನತೆ, ಹಾರ್ಮೋನುಗಳ ಅಸಮತೋಲನ ಮುಂತಾದ ವಿವಿಧ ದೈಹಿಕ ವೈಪರೀತ್ಯಗಳನ್ನು ಅನುಭವಿಸುತ್ತಾರೆ.
ವೈವಾಹಿಕ ಅತ್ಯಾಚಾರಕ್ಕೆ ಕಾರಣಗಳು:
- ಡಾ. ವೀಣಾ ಕೃಷ್ಣನ್ ಅವರ ಪ್ರಕಾರ, ಪತಿ-ಪತ್ನಿಯರಿಬ್ಬರ ನಡುವಿನ ಅಹಂ ಹಾಗೂ ಘರ್ಷಣೆಗಳು ವೈವಾಹಿಕ ಅತ್ಯಾಚಾರಕ್ಕೆ ಕಾರಣವಾಗುತ್ತವೆ. ಪತಿಯ ಅಹಂಕಾರಕ್ಕೆ ಪೆಟ್ಟು ಬಿದ್ದಾಗ ಪತ್ನಿಯನ್ನು ಲೈಂಗಿಕ ಶಿಕ್ಷೆಗೆ ಗುರಿಪಡಿಸುತ್ತಾನೆ.
- ಪುರುಷರು ಪದೇಪದೇ ಮಹಿಳೆಯರನ್ನು ನಿಂದಿಸುವುದರಿಂದ ಆಕೆಯಲ್ಲಿನ ಲೈಂಗಿಕ ಆಸೆಗಳು ಕುಂದಿ, ತನ್ನ ಗಂಡನಿಂದ ದೂರವಾಗುತ್ತಾಳೆ. ಮಹಿಳೆ ತನ್ನ ಗಂಡನೊಂದಿಗಿನ ದೈಹಿಕ ಅನ್ಯೋನ್ಯತೆಗೆ ಒಪ್ಪದಿದ್ದರೆ ಅವಳು ಮತ್ತೆ ಅತ್ಯಾಚಾರ ಮತ್ತು ನಿಂದನೆಗೆ ಒಳಗಾಗಬಹುದು.
- ಡಾ. ಕೃಷ್ಣನ್ ಅವರ ಪ್ರಕಾರ, ವೈವಾಹಿಕ ಅತ್ಯಾಚಾರ ದೈಹಿಕ ಶಕ್ತಿಯನ್ನು ಪ್ರತಿಪಾದಿಸುವುದಕ್ಕಿಂತ ಆಳವಾಗಿ ಹೋಗುತ್ತದೆ. ಪತಿ ತನ್ನ ಪತ್ನಿಯನ್ನು ಬೆದರಿಸಲು ಪ್ರಯತ್ನಿಸಬಹುದು. ಆಕೆಗೆ ಭೀಕರ ಪರಿಣಾಮಗಳ ಬೆದರಿಕೆ ಹಾಕಬಹುದು. ಆದ್ದರಿಂದ ಆಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಇದರಿಂದ ಅವರಿಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಡುತ್ತದೆ.