ಮಿರ್ಜಾಪುರ: ಮಿರ್ಜಾಪುರ ಜಿಲ್ಲೆಯ ಜಮಾಲ್‌ಪುರ ಪ್ರದೇಶದ ಪಿಡ್ಕಿ ಗ್ರಾಮದ ನಿವಾಸಿ ಸಾಮ್ರಾಟ್ ಸಿಂಗ್ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. ಹೊಸದಾಗಿ ಆವಿಷ್ಕರಿಸಿದ ಮೈಕೆಲಿಸ್ ಸ್ವಯಂಚಾಲಿತ ಮೈಕ್ರೋಸ್ಕೋಪ್ ಸಾಧನವು 2027 ರ ವೇಳೆಗೆ ಮಲೇರಿಯಾ ಮುಕ್ತ ದೇಶ ಎಂಬ ಭಾರತ ಸರ್ಕಾರದ ಧ್ಯೇಯವನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆಯಂತೆ. 2030ರ ಹೊತ್ತಿಗೆ ಮಲೇರಿಯಅ ನಿರ್ಮೂಲನೆ ಆಗಲಿದೆ ಎಂಬುದು ಭಾರತ ಸರ್ಕಾರದ ಅಂದಾಜು.
ಇನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೋಗನಿರ್ಣಯ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಸಾಮ್ರಾಟ್ ಸಿಂಗ್ ಹೇಳ್ತಿದ್ದಾರೆ. ಪ್ರಪಂಚದ ಯಾವುದೇ ಸ್ಥಳದಿಂದ ರಿಮೋಟ್ ಸಹಾಯದಿಂದ ರೋಗ ನಿರ್ಣಯ ಮಾಡುವ ಈ ಸಾಧನವನ್ನು ನಿಯಂತ್ರಿಸಬಹುದು. ಈ ಹೊಸ ಸಾಧನದ ಆವಿಷ್ಕಾರದಿಂದ ಸರಿಯಾದ ಸಮಯದಲ್ಲಿ ರೋಗನಿರ್ಣಯ ಮಾಡುವ ಮೂಲಕ ಮಲೇರಿಯಾ ರೋಗವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸುಲಭವಾಗಿ ಪತ್ತೆಹಚ್ಚಬಹುದು ಮತ್ತು ಚಿಕಿತ್ಸೆ ನೀಡಬಹುದು ಅಂತಾರೆ ಸಾಮ್ರಾಟ್ ಸಿಂಗ್.
ಭಾರತ ಸರ್ಕಾರದ ಆಶಯ ಪೂರ್ಣಗೊಳಿಸುವ ಜವಾಬ್ದಾರಿ: ಭಾರತ ಸರ್ಕಾರ ಆಶಯವನ್ನು ಪೂರ್ಣಗೊಳಿಸುವ ಜವಾಬ್ದಾರಿ ಈಗ ಸಾಮ್ರಾಟ್ ಮತ್ತು ಅವರ ತಂಡದ ಮೇಲಿದೆ. ಭಾರತ ಸರ್ಕಾರದಿಂದ ತನ್ನ ಮೂರು ಸಾಧನಗಳಿಗೆ ಪೇಟೆಂಟ್ ಪಡೆದಿರುವ ಸಾಮ್ರಾಟ್, ತಾನು ತಯಾರಿಸಿದ ಸಾಧನವು ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ದಿಕ್ಕಿನಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ.
ಮಲೇರಿಯಾ ಈ ಹಿಂದೆ ಭಯಾನಕ ಕಾಯಿಲೆ ಎಂದೇ ಪ್ರತಿಬಿಂಬಿತವಾಗಿತ್ತು. ಹಾಗಾಗಿಯೇ ಇದು ಹೆಚ್ಚಿನ ಜನರಲ್ಲಿ ಆತಂಕಕ್ಕೂ ಕಾರಣವಾಗಿತ್ತು. ಆದರೆ ಈ ರೋಗಕ್ಕೆ ಚಿಕಿತ್ಸೆ ಕಂಡು ಹಿಡಿದ ಮೇಲೆ ಮಾನವ ತುಸು ನಿಟ್ಟುಸಿರು ಬಿಟ್ಟಿದ್ದ. ಇನ್ನು ಸರಿಯಾದ ರೋಗನಿರ್ಣಯದ ಸಹಾಯದಿಂದ ಮಲೇರಿಯಾಕ್ಕೆ ಬಹಳ ಸುಲಭವಾಗಿ ಚಿಕಿತ್ಸೆ ನೀಡಬಹುದು.
ಆದರೆ, ಈ ಕಾಯಿಲೆಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 6.2 ಲಕ್ಷ ಆಗಿರುವುದು ನಮ್ಮ ದೌರ್ಭಾಗ್ಯ. ಇದರಲ್ಲಿ ಭಾರತದ ಪಾಲೇ ಸುಮಾರು ಶೇ.1.2ರಷ್ಟಿದೆ. ಇದಲ್ಲದೆ, 241 ಮಿಲಿಯನ್ ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಮಲೇರಿಯಾವನ್ನು ನಿರ್ಮೂಲನೆ ಮಾಡಲು ಅನೇಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಇದರಲ್ಲಿ ಟಾಟಾ ಟ್ರಸ್ಟ್‌ನ ಇಂಡಿಯಾ ಹೆಲ್ತ್ ಫಂಡ್ ಸಂಸ್ಥೆಯು ಸಾಮ್ರಾಟ್‌ನ ಮೆಡ್‌ಪ್ರೈಮ್ ಟೆಕ್ನಾಲಜೀಸ್‌ಗೆ ಮಲೇರಿಯಾದಂತಹ ಗಂಭೀರ ಕಾಯಿಲೆಗಳ ನಿರ್ಮೂಲನೆಗಾಗಿ ನವೀನ ಪರಿಹಾರ ಮೈಕೆಲಿಸ್‌ಗೆ ಅನುದಾನವನ್ನು ನೀಡಿದೆ. ಸಾಮ್ರಾಟ್, ಐಐಟಿ ಬಾಂಬೆ ಮೂಲದ ಸ್ಟಾರ್ಟ್‌ಅಪ್‌ನ ಮೆಡ್‌ಪ್ರೈಮ್ ಟೆಕ್ನಾಲಜೀಸ್‌ನ ಸಿಇಒ ಆಗಿದ್ದಾರೆ. ಇದು ವಿಶ್ವದ ಅತ್ಯಂತ ಆಧುನಿಕ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಅನ್ನು ಆಧರಿಸಿ ಡಿಜಿಟಲ್ ಮೈಕ್ರೋಸ್ಕೋಪ್ ತಯಾರಿಸುವ ಸಂಸ್ಥೆಯಾಗಿ ಇದು ಹೆಸರುವಾಸಿಯಾಗಿದೆ. ಸಾಮ್ರಾಟ್ ಜೊತೆಗೆ ಐಐಟಿ ಬಾಂಬೆಯ ಮಹೇಶ್, ಗ್ರೀಷ್ಮಾ ಮತ್ತು ಬಿನಿಲ್ ಈ ಸಂಸ್ಥೆ ಪ್ರಾರಂಭಿಸಿದರು.
ಹೊಸ ಆವಿಷ್ಕಾರ ಹೇಗೆ ಕೆಲಸ ಮಾಡುತ್ತೆ: ಸಾಮ್ರಾಟ್ ಸಿಂಗ್ ಅವರ ಮೈಕೆಲಿಸ್ ಎಂಬುದು ಸ್ವಯಂಚಾಲಿತ ಸೂಕ್ಷ್ಮದರ್ಶಕ ಸಾಧನವಾಗಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೋಗಶಾಸ್ತ್ರಜ್ಞರಿಗೆ ರೋಗನಿರ್ಣಯ ಮಾಡಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ, ಈ ಸಾಧನದಲ್ಲಿ ಸ್ವಯಂಚಾಲಿತ ಮಲೇರಿಯಾ ರೋಗನಿರ್ಣಯದ ವೈಶಿಷ್ಟ್ಯಗಳನ್ನು ಸಹ ಸೇರಿಸಲಾಗಿದೆ.
ಮಲೇರಿಯಾ ರೋಗನಿರ್ಣಯಕ್ಕೆ ಮೈಕ್ರೊಸ್ಕೋಪಿಯನ್ನು ಮಾನದಂಡವಾಗಿ ಬಳಸಲಾಗುತ್ತದೆ. ಪ್ರಸ್ತುತ, ಈ ರೋಗನಿರ್ಣಯವನ್ನು ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಲ್ಯಾಬ್ ಸಹಾಯಕರು ಕೈಯಾರೆ ಮಾಡುತ್ತಾರೆ. ಇದರಲ್ಲಿ ಹಲವು ದೋಷಗಳಿವೆ ಮತ್ತು ರೋಗನಿರ್ಣಯವು ಸರಿಯಾಗಿಲ್ಲ. ಇದಲ್ಲದೇ, ದೂರದ ಪ್ರದೇಶಗಳಲ್ಲಿ ಸರಿಯಾದ ಸಮಯದಲ್ಲಿ ರೋಗನಿರ್ಣಯದ ಲಭ್ಯತೆಯಿಲ್ಲದ ಕಾರಣ ಚಿಕಿತ್ಸೆಯಲ್ಲಿ ವಿಳಂಬ ಆಗುವುದರಿಂದ ಅನೇಕ ಜನರ ಸಾವಿಗೆ ಕಾರಣವಾಗುತ್ತದೆ.
ಕೃತಕ ಬುದ್ಧಿಮತ್ತೆಯ ಏಕೀಕರಣವು ಮಲೇರಿಯಾ ರೋಗನಿರ್ಣಯವನ್ನು ದೋಷ-ಮುಕ್ತಗೊಳಿಸುತ್ತದೆ. ಇದರೊಂದಿಗೆ, ತಜ್ಞರ ಅನುಪಸ್ಥಿತಿಯಲ್ಲಿಯೂ ಇದು ಸರಿಯಾದ ರೋಗನಿರ್ಣಯವನ್ನು ನೀಡುತ್ತದೆ. ಮಲೇರಿಯಾವನ್ನು ಹೊರತುಪಡಿಸಿ, ಈ ಉಪಕರಣವು ಭವಿಷ್ಯದಲ್ಲಿ ಫೈಲೇರಿಯಾ, ಟಿಬಿ ಮತ್ತು ಕ್ಯಾನ್ಸರ್ ರೋಗನಿರ್ಣಯದಲ್ಲಿ ರೋಗಶಾಸ್ತ್ರಜ್ಞರಿಗೆ ಸಹಾಯ ಮಾಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ರೋಗನಿರ್ಣಯಕ್ಕಾಗಿ, ಲ್ಯಾಬ್ ತಂತ್ರಜ್ಞರು ರೋಗಿಯ ರಕ್ತವನ್ನು ಗಾಜಿನ ಸ್ಲೈಡ್‌ನಲ್ಲಿ ಇರಿಸುತ್ತಾರೆ ಮತ್ತು ಅದನ್ನು JSB ಅಥವಾ ಜಿಮ್ಸಾ ಡೈಯಿಂದ ಕಲೆ ಮಾಡುತ್ತಾರೆ. ನಂತರ ಅದನ್ನು ಸೂಕ್ಷ್ಮದರ್ಶಕದ ಹಂತದಲ್ಲಿ ಇರಿಸಲಾಗುತ್ತದೆ ಎಂದು ಸಾಮ್ರಾಟ್ ಹೇಳುತ್ತಾರೆ. ಸುಮಾರು 100 ರಿಂದ 500 ವಲಯಗಳನ್ನು ಪರಿಶೀಲಿಸುತ್ತದೆ. ಈ ವಿಧಾನವು ಸಮಯ ತೆಗೆದುಕೊಳ್ಳುತ್ತದೆ ಮತ್ತು ಲ್ಯಾಬ್ ತಂತ್ರಜ್ಞರ ತಾಳ್ಮೆ ಮತ್ತು ತಿಳಿವಳಿಕೆಯನ್ನು ಆಧರಿಸಿ, ರೋಗ ನಿರ್ಣಯ ಮಾಡಲಾಗುತ್ತದೆ.
ಅಗ್ಗದ ದರದಲ್ಲಿ ಪರೀಕ್ಷೆ: ಆದರೆ, ಸಾಮ್ರಾಟ್ ಮಾಡಿರುವ ಹೊಸ ಆವಿಷ್ಕಾರವಾದ ಮೈಕೆಲಿಸ್ ಆಟೋಮೇಟೆಡ್ ಮೈಕ್ರೋಸ್ಕೋಪ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಆಟೊಮೇಷನ್ ಸಹಾಯದಿಂದ ಈ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳುವ ಸಮಯ ಮತ್ತು ಮನುಷ್ಯರಿಂದ ಆಗುವ ದೋಷಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದರಲ್ಲಿ ತಂತ್ರಜ್ಞರು ಅದನ್ನು ಸ್ಲೈಡ್ ಸ್ಟೇಜ್‌ನಲ್ಲಿ ಇಡಬೇಕು ಮತ್ತು ಗುಂಡಿಯನ್ನು ಒತ್ತುವ ಮೂಲಕ ಅವರು ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. 2 ರಿಂದ 4 ನಿಮಿಷಗಳಲ್ಲಿ ರೋಗದ ಬಗ್ಗೆ ವರದಿ ಸಿಗುತ್ತದೆ. ರೋಗನಿರ್ಣಯದ ವೆಚ್ಚವು ಕೇವಲ 10 ರಿಂದ 20 ರೂಪಾಯಿಗಳ ನಡುವೆ ಇರುತ್ತದೆ.
ಕಡಿಮೆ ಸಮಯದಲ್ಲಿ ಮಲೇರಿಯಾ ರೋಗಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ರೀತಿಯಲ್ಲಿ ಮೈಕೆಲಿಸ್ ಸ್ವಯಂಚಾಲಿತ ಮೈಕ್ರೋಸ್ಕೋಪ್ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಾಮ್ರಾಟ್ ಸಿಂಗ್ ಹೇಳಿದ್ದಾರೆ. ಇದರ ಬೆಲೆ ಇತರರಿಗಿಂತ ತುಂಬಾ ಕಡಿಮೆ. ಪ್ರಪಂಚದ ಯಾವುದೇ ಮೂಲೆಯಿಂದ ಇದನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು. ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಈ ಸಾಧನವು ಪ್ರಮುಖವಾದುದು ಎಂದು ಸಾಬೀತುಪಡಿಸುತ್ತದೆ ಅಂತಾರೆ ಅವರು.
ಅಂಗವಿಕಲರಿಗಾಗಿ ಗಾಲಿಕುರ್ಚಿ: ಇದಕ್ಕೂ ಮುನ್ನ ಸಾಮ್ರಾಟ್, ಕೈ ಮತ್ತು ಕಾಲು ದಿವ್ಯಾಂಗಿಗಳಿಗೆ ನಾಲಿಗೆ ಚಾಲಿತ ಸ್ವಿಚಿಂಗ್ ಮಾಡ್ಯೂಲ್ ತಯಾರಿಸುವ ಮೂಲಕ ವಿಶ್ವ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಈ ಸಾಧನದ ಮೂಲಕ ಕೈಕಾಲು ಬದಲು ನಾಲಿಗೆಯಿಂದ ಗಾಲಿಕುರ್ಚಿ ಓಡಿಸುವುದಲ್ಲದೇ ಟಿವಿಯ ಚಾನೆಲ್ ಬದಲಿಸುವುದು, ಫ್ಯಾನ್ ಆನ್ ಮಾಡುವುದು, ಯಾರ ಸಹಾಯವೂ ಇಲ್ಲದೇ ಲೈಟ್ ನಂದಿಸುವುದು ಹೀಗೆ. ಚಾಲಿತ ಸ್ವಿಚಿಂಗ್ ಮಾಡ್ಯೂಲ್ ಸಂವೇದಕ ಆಧಾರಿತ ಸಾಧನವಾಗಿದ್ದು, ಅದರ ಸಂವೇದಕವು ನಾಲಿಗೆಯ ಧ್ವನಿಯನ್ನು ಪತ್ತೆಹಚ್ಚಲು ಸಾಕಷ್ಟು ಸೂಕ್ಷ್ಮವಾಗಿರುತ್ತದೆ. ಈ ಸಾಧನವನ್ನು ಹೆಲ್ಮೆಟ್‌ನಂತೆ ತಲೆಯ ಮೇಲೆ ಧರಿಸಬೇಕು. ಫೆಬ್ರವರಿ 16 ರಂದು ಭಾರತ ಸರ್ಕಾರವು ಸಾಮ್ರಾಟ್ ಅವರ ಈ ಸಾಧನಕ್ಕೆ ಪೇಟೆಂಟ್ ನೀಡಿದೆ.
ಇದನ್ನು ಓದಿ:ಬಹುನಿರೀಕ್ಷಿತ ಆ್ಯಪಲ್ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಅನಾವರಣ: ಅಬ್ಬಾ.. ಇದರ ಬೆಲೆ ಕೇಳಿದರೆ ನೀವೂ ದಂಗಾಗ್ತೀರಿ!