ವಾರಕ್ಕೆ ಐದು ಅಥವಾ ಐದಕ್ಕಿಂತ ಕಡಿಮೆ ಬಾರಿ ಮಾಂಸ ತಿನ್ನುವುದು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ ಎಂದು 'ಬಿಎಂಸಿ ಮೆಡಿಸಿನ್'ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳುತ್ತದೆ. ಯುನೈಟೆಡ್ ಕಿಂಗ್ಡಮ್ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಈ ಅಧ್ಯಯನ ನಡೆಸಿದೆ.
2006 ಮತ್ತು 2010 ರ ನಡುವೆ ಇಂಗ್ಲೆಂಡ್ನ ಬಯೋಬ್ಯಾಂಕ್‌ಗೆ ನೇಮಕಗೊಂಡ 40 ಮತ್ತು 70 ವರ್ಷ ವಯಸ್ಸಿನ 4,72,377 ಬ್ರಿಟಿಷ್ ಜನರನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದೆ.
ಅವರು ಎಷ್ಟು ಬಾರಿ ಮಾಂಸ ಮತ್ತು ಮೀನುಗಳನ್ನು ತಿನ್ನುತ್ತಾರೆ ಎಂಬ ಮಾಹಿತಿ ಹಾಗೂ ಆರೋಗ್ಯ ದಾಖಲೆಗಳನ್ನು ಬಳಸಿಕೊಂಡು 11 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ಹೊಸ ಕ್ಯಾನ್ಸರ್ಗಳ ಸಂಭವವನ್ನು ಲೆಕ್ಕ ಹಾಕಲಾಗಿದೆ. ಆಹಾರ ಮತ್ತು ಕ್ಯಾನ್ಸರ್ ಅಪಾಯದ ನಡುವಿನ ಸಂಬಂಧವನ್ನು ತನಿಖೆ ಮಾಡುವುದು ಸಂಶೋಧಕರ ಉದ್ದೇಶವಾಗಿತ್ತು.
ಅವರು ಮಧುಮೇಹದ ಸ್ಥಿತಿ ಮತ್ತು ಸಾಮಾಜಿಕ ಜನಸಂಖ್ಯಾಶಾಸ್ತ್ರ, ಸಾಮಾಜಿಕ ಆರ್ಥಿಕ ಮತ್ತು ಜೀವನಶೈಲಿಯ ಅಂಶಗಳನ್ನು ತಮ್ಮ ವಿಶ್ಲೇಷಣೆಯಲ್ಲಿ ಪರಿಗಣಿಸಿದ್ದಾರೆ. 4,72,377 ಮಂದಿಯಲ್ಲಿ 2,47,571 (ಶೇ.52) ಜನರು ವಾರಕ್ಕೆ ಐದಕ್ಕಿಂತ ಹೆಚ್ಚು ಭಾರಿ ಮಾಂಸ ಸೇವಿಸುವವರಾಗಿದ್ದರು. 2,05,382 (ಶೇ.44) ಮಂದಿ ವಾರಕ್ಕೆ ಐದು ಅಥವಾ ಐದಕ್ಕಿಂತ ಕಡಿಮೆ ಬಾರಿ ಮಾಂಸ ತಿನ್ನುತ್ತಿದ್ದರು. 10,696 (ಶೇ.2) ಮಂದಿ ಮೀನುಗಳನ್ನು ಮಾತ್ರ ತಿನ್ನುತ್ತಿದ್ದರು ಮತ್ತು 8,685 (ಶೇ.2 ) ಜನರು ಸಸ್ಯಾಹಾರಿಯಾಗಿದ್ದಾರೆ.
ಅಧ್ಯಯನದ ಅವಧಿಯಲ್ಲಿ 54,961 ಮಂದಿ (ಶೇ.12 ) ಕ್ಯಾನ್ಸರ್ನಿಂದ ಬಳಲುವುದು ಕಂಡು ಬಂದಿದೆ. ವಾರಕ್ಕೆ ಐದು ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಮಾಂಸವನ್ನು ಸೇವಿಸುವವರಲ್ಲಿ ಒಟ್ಟಾರೆ ಕ್ಯಾನ್ಸರ್ ಅಪಾಯವು ಶೇಕಡಾ 2 ರಷ್ಟು ಕಡಿಮೆಯಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ವಾರದಲ್ಲಿ ಐದಕ್ಕಿಂತ ಹೆಚ್ಚು ಬಾರಿ ಮಾಂಸ ತಿನ್ನುವವರಿಗೆ ಹೋಲಿಸಿಕೊಂಡರೆ ಮೀನನ್ನು ಮಾತ್ರ ತಿನ್ನುವವರಲ್ಲಿ ಶೇ.10ರಷ್ಟು ಕ್ಯಾನ್ಸರ್ ಅಪಾಯ ಕಡಿಮೆಯಿದ್ದು, ಸಸ್ಯಾಹಾರಿಗಳಲ್ಲಿ ಸೇ.14 ರಷ್ಟು ಕ್ಯಾನ್ಸರ್ ಅಪಾಯ ಕಡಿಮೆ ಇದೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಭಾರತದಲ್ಲಿ ಬಾಯಿಯ ಕ್ಯಾನ್ಸರ್ನಿಂದ ಪ್ರತಿ ಗಂಟೆಗೆ 5 ಜನ ಬಲಿ: ಇದಕ್ಕೆ ಕಾರಣ ಹೀಗಿದೆ..
ಇನ್ನು ವಿಧ ವಿಧದ ಕಾನ್ಸರ್ಗಳಿಗೆ ಹೋಲಿಕೆ ಮಾಡಿ ನೋಡಿದರೆ, ವಾರಕ್ಕೆ ಐದು ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಮಾಂಸವನ್ನು ಸೇವಿಸುವವರಿಗೆ ಕೊಲೊರೆಕ್ಟಲ್ ಕ್ಯಾನ್ಸರ್ನ ಅಪಾಯವು 9 ಪ್ರತಿಶತ ಕಡಿಮೆಯಾಗಿದೆ. ಮೀನನ್ನು ಮಾತ್ರ ತಿನ್ನುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಶೇ.20ರಷ್ಟು ಕಡಿಮೆ ಇದ್ದರೆ, ಸಸ್ಯಹಾರಿ ಪುರುಷರಲ್ಲಿ ಶೇ.31ರಷ್ಟು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆಯಿದೆ.
ಸಸ್ಯಾಹಾರಿ ಆಹಾರವನ್ನು ಅನುಸರಿಸಿದ ಮಹಿಳೆಯರು (ಋತುಬಂಧ ನಿಂತ ಮಹಿಳೆಯರು) ವಾರದಲ್ಲಿ ಐದಕ್ಕಿಂತ ಹೆಚ್ಚು ಬಾರಿ ಮಾಂಸ ತಿನ್ನುವವರಿಗಿಂತ ಶೇ.18ರಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯ ಹೊಂದಿದ್ದಾರೆ.