ಅಡಿಲೇಡ್ (ಆಸ್ಟ್ರೇಲಿಯಾ): ಮಾನವನ ಆರೋಗ್ಯಕ್ಕೆ ಪೌಷ್ಟಿಕ ಆಹಾರ ತುಂಬಾ ಅತ್ಯಗತ್ಯವಾಗಿದೆ. ಇದು ನಮ್ಮ ಜೀವಿತಾವಧಿಯ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಸರಿಯಾದ ರೀತಿಯ ಆಹಾರ ಪದ್ಧತಿ (ಡಯಟ್) ಬಗ್ಗೆ ಗಮನ ಹರಿಸುವುದು ಅವಶ್ಯಕವಾಗಿದೆ. ಇದಕ್ಕಾಗಿ ಕೀಟೋ ಡಯಟ್ ಮತ್ತು ಮೆಡಿಟೆರೇನಿಯನ್ ಡಯಟ್ ಎಂಬ ವಿವಿಧ ಆಹಾರ ವ್ಯವಸ್ಥೆ ಈಗಾಗಲೇ ವ್ಯಾಪಕವಾಗಿ ಜನಪ್ರಿಯವಾಗಿವೆ. ಇದೇ ವಿಧದಲ್ಲಿ ಸದ್ಯ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ‘ಲಾಂಗ್ವಿಟಿ ಡಯಟ್’.
ಏನಿದು ಲಾಂಗ್ವಿಟಿ ಡಯಟ್?: ವಾಲ್ಟರ್ ಲಾಂಗೋ ಎಂಬ ಜೀವರಸಾಯನಶಾಸ್ತ್ರಜ್ಞ 'ಲಾಂಗ್ವಿಟಿ ಡಯಟ್' ಅನ್ನು ಪರಿಚಯಿಸಿದ್ದಾರೆ. ಈ ಆಹಾರ ಪದ್ಧತಿಯು ಮನುಷ್ಯನ ಆಯುಷ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು? ಎಂಬುದರ ಬಗ್ಗೆ ಇದರಲ್ಲಿ ಹೇಳಲಾಗಿದೆ.
ವಂಶವಾಹಿಗಳ ಮೇಲೆ ಪೋಷಕಾಂಶಗಳ ಪರಿಣಾಮಗಳು ಮತ್ತು ಉಪವಾಸದ ಫಲಿತಾಂಶಗಳ ಕುರಿತು ಲಾಂಗೊ ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ದೀರ್ಘಾಯುಷ್ಯದ ಆಹಾರವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ 120 ವರ್ಷಗಳವರೆಗೆ ಬದುಕಲು ಲಾಂಗೋ ಯೋಜಿಸಿದ್ದಾರೆ.
ಯಾರಿಗಾಗಿ ಈ ಡಯಟ್?: ಈ ಆಹಾರವನ್ನು ಮುಖ್ಯವಾಗಿ ವಯಸ್ಸಾದವರಿಗಾಗಿ ತಯಾರಿಸಲಾಗಿದೆ. ಯುವಕರು ಕೂಡ ಇವರನ್ನು ಫಾಲೋ ಮಾಡಬಹುದು ಎನ್ನಲಾಗಿದೆ.
ಇದರಲ್ಲಿ ಏನಿದೆ?: ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು, ಬೀನ್ಸ್, ಬಾದಾಮಿ, ಆಲಿವ್ ಎಣ್ಣೆ ಮತ್ತು ಪಾದರಸದಲ್ಲಿ ಕಡಿಮೆ ಇರುವ ಸಮುದ್ರಾಹಾರ. ಸಸ್ಯ ಆಧಾರಿತ ಆಹಾರಗಳು ಜೀವಸತ್ವ, ಖನಿಜ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಲವಣಗಳು ಕಡಿಮೆ ಇರುತ್ತವೆ. ಈ ಆಹಾರದಲ್ಲಿ ಸಸ್ಯ ಆಧಾರಿತ ಆಹಾರವನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ಇದು ಮೆಡಿಟರೇನಿಯನ್ ಆಹಾರಕ್ಕೆ ಸಾಮಿಪ್ಯತೆ ಹೊಂದಿದೆ.
ಏನನ್ನು ತಿನ್ನಬಾರದು?: ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು (ಮೊಸರು ಹೊರತುಪಡಿಸಿ) ಅತಿಯಾಗಿ ಸೇವಿಸಬಾರದು. ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆ ಅಂಶ ಇರುವ ಆಹಾರವನ್ನು ಹೆಚ್ಚಾಗಿ ತಿನ್ನಬಾರದು. ಡೈರಿ ಉತ್ಪನ್ನಗಳನ್ನು ತಪ್ಪಿಸಲು ಸಾಧ್ಯವಾಗದವರು, ಹಸು/ಮೇಕೆ/ಕುರಿ ಹಾಲು ತೆಗೆದುಕೊಳ್ಳಬಹುದು.
ಎಷ್ಟು ದಿನ ಈ ಡಯಟ್ ಮಾಡಬೇಕು?: ನಿರ್ದಿಷ್ಟ ಅವಧಿಗೆ ಉಪವಾಸ ಮಾಡುವುದು ಈ ಆಹಾರದ ಪ್ರಮುಖ ಅಂಶವಾಗಿದೆ. ಒಂದು ದಿನದಲ್ಲಿ ನಾವು ತೆಗೆದುಕೊಳ್ಳುವ ಎಲ್ಲಾ ಆಹಾರವನ್ನು ಕೇವಲ 12 ಗಂಟೆಗಳ ಒಳಗೆ ತಿನ್ನಬೇಕು (ಉದಾಹರಣೆಗೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ). ಮಲಗುವ 3-4 ಗಂಟೆಗಳ ಮೊದಲು ಏನನ್ನೂ ತಿನ್ನಬಾರದು.
ಇನ್ನೊಂದು ವಿಧಾನವೆಂದರೆ ವಾರದಲ್ಲಿ ಎರಡು ದಿನಗಳವರೆಗೆ 2 ರಿಂದ 3 ಸಾವಿರ ಕಿಲೋಜೌಲ್‌ಗಳಿಗಿಂತ ಕಡಿಮೆ ತಿನ್ನುವುದು ಮತ್ತು ಇತರ 5 ದಿನಗಳವರೆಗೆ ಸಾಮಾನ್ಯವಾಗಿ ತಿನ್ನಬೇಕು. ಲಾಂಗೊ ಪ್ರಕಾರ ಡಯಟ್ ಮಾಡಿದರೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಕಾರಣವಾಗುತ್ತದೆ. ಟೈಪ್ -2 ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಪ್ರೋಟೀನ್ಯುಕ್ತ ಆಹಾರ ಸೇವಿಸಿ.. ಮಧುಮೇಹ ನಿಯಂತ್ರಣದ ಚಿಂತೆ ಬಿಡಿ
ಎಷ್ಟು ಪ್ರೋಟೀನ್ ತೆಗೆದುಕೊಳ್ಳಬೇಕು?: ಈ ವಿಧಾನದಲ್ಲಿ, ಪ್ರೋಟೀನ್ ಪ್ರಮಾಣವು ವ್ಯಕ್ತಿಯ ದೇಹದ ತೂಕವನ್ನು ಅವಲಂಬಿಸಿರುತ್ತದೆ. ದಿನಕ್ಕೆ ಪ್ರತಿ ಕೆಜಿಗೆ 0.68-0.80 ಗ್ರಾಂ ಪ್ರೋಟೀನ್ಗಿಂತ ಹೆಚ್ಚು ಸೇವಿಸಬೇಡಿ. ಉದಾಹರಣೆಗೆ, ಒಬ್ಬ ವ್ಯಕ್ತಿಯು 70 ಕೆಜಿ ತೂಕವನ್ನು ಹೊಂದಿದ್ದರೆ. ದಿನಕ್ಕೆ 47 ರಿಂದ 56 ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ಸೇವಿಸಬಾರದು.
ಅಡ್ಡ ಪರಿಣಾಮಗಳಿವೆಯೇ?: ಈ ಆಹಾರದಲ್ಲಿ ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಮಲ್ಟಿವಿಟಮಿನ್ಗಳು ಮತ್ತು ಖನಿಜಯುಕ್ತ ಪೂರಕಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದರೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಅವುಗಳನ್ನು ಸೇವಿಸುವುದು ಸೂಕ್ತವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಆ ಪೂರಕಗಳನ್ನು ಅತಿಯಾಗಿ ಸೇವಿಸಿದರೆ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗಬಹುದು ಎಂಬುದು ಅವರ ಆತಂಕ. ಈ ಆಹಾರದಲ್ಲಿ ವ್ಯಾಯಾಮವನ್ನು ಉಲ್ಲೇಖಿಸಲಾಗಿಲ್ಲ ಎಂಬುದು ಗಮನಾರ್ಹ.