ಆರೋಗ್ಯಕರ ಜೀವನ ಎಂದರೆ ಸಪ್ಪೆ ಊಟದ ಸೇವನೆಯ ಜೊತೆಗೆ ಹೆಚ್ಚು ತಿನ್ನದೇ ಹಸಿವಿನಿಂದ ಇರುವುದು ಎಂದು ತಿಳಿದಿದ್ದರೆ ಅದು ತಪ್ಪು ತಿಳುವಳಿಕೆ. ಕಡಿಮೆ ಕ್ಯಾಲೋರಿ ಹೊಂದಿರುವ ರುಚಿಕರ, ಪೌಷಕಾಂಶಯುಕ್ತ ಆಹಾರ ಸೇವನೆ ಡಯಟ್ನ ಪ್ರಮುಖ ಅಂಶವಾಗಿದೆ. ನೀವು ಆರೋಗ್ಯಕರ ಡಯಟ್ ಪಾಲಿಸಬೇಕು ಎಂದಿದ್ದರೆ, ನೀವು ಸೇವಿಸುವ ಕ್ಯಾಲೋರಿ ಬಗ್ಗೆ ಗಮನವಿರಲಿ.
ಪೌಷಕಾಂಶಯುಕ್ತ ಸ್ನಾಕ್ ಮತ್ತು ಊಟದ ಸೇವನೆ ನಿಮ್ಮನ್ನು ಹಸಿವೆಯಿಂದ ದೂರವಿಡುತ್ತದೆ. ಈ ನಿಟ್ಟಿನಲ್ಲಿ ನೀವು ಆಹಾರವನ್ನು ಬುದ್ದಿವಂತಿಕೆಯಿಂದ ಆಯ್ದುಕೊಳ್ಳಬೇಕು. ನೀವು ಮುಂದಿನ ಬಾರಿ ಶಾಪಿಂಗ್ಗೆ ಹೋದಾಗ ಕಡಿಮೆ ಕ್ಯಾಲೋರಿ ಹೊಂದಿರುವ ಈ ಆಹಾರಗಳನ್ನು ನಿಮ್ಮ ಡಯಟ್ ಲಿಸ್ಟ್ನಲ್ಲಿ ಸೇರಿಸಿ, ಖರೀದಿಸಬಹುದು.
ಬೆರ್ರಿ ಹಣ್ಣು: ಸಣ್ಣ, ಮೃದುವಾಗಿರುವ ಈ ಹಣ್ಣು ಕೆಂಪು, ನೀಲಿ ಮತ್ತು ನೇರಳೆ ಬಣ್ಣದಲ್ಲಿರುತ್ತದೆ. ಸಿಹಿ ಮತ್ತು ಹುಳಿ ಮಿಶ್ರಣ ಹೊಂದಿದೆ. ಜಾಮ್ ಮತ್ತು ಡೆಸಾರ್ಟ್ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಪಾಲಿಪೆನೊಸ್ ಪೋಷಕಾಂಶ ಗುಣವಿದೆ. ಇದನ್ನು ನಿಮ್ಮ ಡಯಟ್ನಲ್ಲಿ ಸೇರಿಸುವುದರಿಂದ ಅನೇಕ ದೀರ್ಘಕಾಲದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಬ್ರೊಕೊಲಿ: ಹೂಕೋಸಿನ ಮಾದರಿಯ ಈ ತರಕಾರಿಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ. ಇದರಲ್ಲಿ ಅತಿ ಹೆಚ್ಚು ವಿಟಮಿನ್, ಮಿನರಲ್ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದರಲ್ಲಿನ ಕ್ಯಾಲ್ಸಿಯಂ ಮತ್ತು ಕೊಲೆಜೆನ್ ಮೂಳೆಗಳನ್ನು ಬಲವಾಗಿಡುತ್ತದೆ. ಇದರಲ್ಲಿನ ವಿಟಮಿನ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕ್ಯಾನ್ಸರ್ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಜೊತೆಗೆ, ಅನಿಮಿಯಾದಂತಹ ಸಮಸ್ಯೆಗೆ ಇದು ಪರಿಣಾಮಕಾರಿ.
ನವಣೆ ಅಕ್ಕಿ: ಸಿರಿಧಾನ್ಯಗಳಲ್ಲಿ ಒಂದಾಗಿರುವ ನವಣೆ ಅಕ್ಕಿಯಲ್ಲಿ ಪ್ರೋಟಿನ್ ಹೆಚ್ಚಿದೆ. ಡಯಟ್ಗೆ ಅತ್ಯುತ್ತಮ ಆಯ್ಕೆಯಾಗಿರುವ ನವಣೆ ಅಕ್ಕಿ, ಸ್ನಾಯುಗಳ ಅಭಿವೃದ್ಧಿ ಸಹಕಾರಿ. ಇದರಲ್ಲಿನ ಫೈಬರ್ ಅಂಶ ಆರೋಗ್ಯಕರ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಇ, ಕಬ್ಬಿಣ, ಮೆಗ್ನಿಶಿಯಂ ಅಂಶಗಳು ರಕ್ತದೊತ್ತಡ, ಹೃದಯದ ಆರೋಗ್ಯ, ಟೈಪ್ 2 ಡಯಾಬಿಟಿಸ್, ಮೈಕ್ರೆನ್ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಮೊಟ್ಟೆ: ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿರುವ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್, ಪ್ರೋಟಿನ್, ವಿಟಮಿನ್ ಬಿ7, ವಿಟಮಿನ್ಎ. ಆ್ಯಂಟಿಆಕ್ಸಿಡೆಂಟ್, ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶ ಇದೆ. ವಿಟಮಿನ್, ಮಿನರಲ್ನಿಂದ ಕೂಡಿರುವ ಮೊಟ್ಟೆಗಳು ಸ್ನಾಯುಗಳ ಬೆಳವಣಿಗೆ, ಹೃದಯ ಆರೋಗ್ಯ, ಎಚ್ಡಿಎಲ್ ಮತ್ತು ಎಲ್ಡಿಎಲ್ನಲ್ಲಿ ಪರಿಣಾಮಕಾರಿಯಾಗಿದೆ.
ಅವಕಾಡೊ: ವಿಟಮಿನ್ ಸಿ, ಇ, ಕೆ ಮತ್ತು ಬಿ6ಜೊತೆಗೆ ಮೆಗ್ನಿಶಿಯಂ, ಪೊಟಾಶಿಯಂ, ಲೂಟಿನ್, ಒಮೆಗಾ 3 ಅಂತ ಸಮೃದ್ದ ಗುಣಗಳಿಂದಿರುವ ಅವಕಾಡೋ ಚರ್ಮದ ಆರೋಗ್ಯ ಮತ್ತು ಹೃದಯ, ದೃಷ್ಟಿ ಅಭಿವೃದ್ದಿ, ಆಸ್ಟಿಯೊಪೊರೋಸಿಸ್, ಕ್ಯಾನ್ಸರ್ ತಡೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಈ ಹಣ್ಣು ಸೇವನೆ ಖಿನ್ನತೆ ನಿವಾರಣೆಯಲ್ಲೂ ಪ್ರಮುಖ ಪಾತ್ರ ಹೊಂದಿದೆ.
ಇದನ್ನೂ ಓದಿ: ತುಪ್ಪ ಸೇವನೆಯಲ್ಲಿ ಸಂಕೋಚ ಬೇಡ: ಇದರಿಂದ ಆರೋಗ್ಯಕ್ಕೆ ಪ್ರಯೋಜನವೇ ಹೆಚ್ಚು