ಲಂಡನ್: ತಮ್ಮ ದೇಹದ ಆಕಾರ ಹೀಗೆಯೇ ಇರಬೇಕು ಎಂಬ ಬಗ್ಗೆ ಭಾರತೀಯರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಿರ್ದಿಷ್ಟ ಬಾಡಿ ಇಮೇಜ್ ಹೊಂದಿರಬೇಕು ಎಂಬ ಕಲ್ಪನೆಯನ್ನು ಭಾರತೀಯರು ಅಳವಡಿಸಿಕೊಳ್ಳುವುದು ಕಡಿಮೆಯಾಗಿದ್ದು, ಇದೇ ಜೀವನ ತೃಪ್ತಿಯ ಕೀಲಿ ಕೈ ಎಂದು ಅಂತರರಾಷ್ಟ್ರೀಯ ಸಂಶೋಧನೆ ತಿಳಿಸಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ 65 ದೇಶಗಳಲ್ಲಿ ನಡೆದ ಅಧ್ಯಯನ ಇದಾಗಿದ್ದು, ಜಗತ್ತಿನಾದ್ಯಂತ 250 ವಿಜ್ಞಾನಿಗಳು ಭಾಗಿಯಾಗಿದ್ದಾರೆ. ಆಂಗ್ಲಿಯಾ ರಸ್ಕಿನ್ ಯುನಿವರ್ಸಿಟಿಯ ತಂಡ ಅಧ್ಯಯನ ನಡೆಸಿದೆ. ತಮ್ಮ ದೇಹದ ಬಗ್ಗೆ ಸಕಾರಾತ್ಮಕ ಚಿಂತನೆ ಹೊಂದಿರುವವರಲ್ಲಿ ಮಾನಸಿಕ ಆರೋಗ್ಯ ಮತ್ತು ಜೀವನ ತೃಪ್ತಿ ಸಂಬಂಧ ಹೊಂದಿದೆ ಎಂದು ಅಧ್ಯಯನ ತೋರಿಸಿದೆ.
ಜರ್ನಲ್ ಬಾಡಿ ಇಮೇಜ್ನಲ್ಲಿ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಸಂಶೋಧನೆಯಲ್ಲಿ 56,968 ಜನರು ಭಾಗಿಯಾಗಿದ್ದಾರೆ. ದೇಹವನ್ನು ಹೇಗಿದೆಯೋ ಹಾಗೇ ಸ್ವೀಕರಿಸುವುದು, ಸಕಾರಾತ್ಮಕ ಅಭಿಪ್ರಾಯದಿಂದ ಮುನ್ನಡೆಯುವುದು ಮತ್ತು ಗೌರವಿಸುವುದನ್ನು ತೋರಿಸಿದೆ. ಇದೇ ವೇಳೆ ವ್ಯಕ್ತಿಯ ಸೌಂದರ್ಯವನ್ನು ಕೇವಲ ಮಾಧ್ಯಮ ಪ್ರಚಾರವಾಗಿ ತೋರಿಸುವುದನ್ನು ಭಾಗಿದಾರರು ತಿರಸ್ಕರಿಸಿದ್ದಾರೆ.
ದೇಹದ ಬಗ್ಗೆ ಹೊಂದಿರುವ ಮೆಚ್ಚುಗೆಯ ಕುರಿತು ವಿವಿಧ ದೇಶಗಳ ಭಾಗಿದಾರರನ್ನು ವಿಜ್ಞಾನಿಗಳು ಕೇಳಿದ್ದಾರೆ. ಇದರಲ್ಲಿ ತಮ್ಮ ದೇಹದ ಬಗ್ಗೆ ಹೊಂದಿರುವ ಗೌರವ ಮತ್ತು ದೇಹದ ವಿಶಿಷ್ಟ, ವಿಭಿನ್ನ ಗುಣಗಳ ಮೆಚ್ಚುಗೆ ಸೇರಿದಂತೆ 10 ಪ್ರಶ್ನಾವಳಿಗಳನ್ನು ಕೇಳಲಾಗಿದೆ. ಹಲವು ದೇಶಗಳಲ್ಲಿ ನಡೆದ ಈ ಅಧ್ಯಯನದಲ್ಲಿ ದೇಹದ ಬಗ್ಗೆ ಹೆಚ್ಚಿನ ಮೆಚ್ಚುಗೆ ಹೊಂದಿರುವವರಲ್ಲಿ ಉತ್ತಮ ಮಟ್ಟದ ಮಾನಸಿಕ ಆರೋಗ್ಯ ಮತ್ತು ಜೀವನ ತೃಪ್ತಿ ಕಂಡುಬಂದಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಅವಿವಾಹಿತ ವ್ಯಕ್ತಿಗಳು ತಮ್ಮ ದೇಹದ ಬಗ್ಗೆ ಹೆಚ್ಚು ತೃಪ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಯುಕೆಗೆ ಹೋಲಿಕೆಗೆ ಮಾಡಿದರೆ ಭಾರತೀಯರು ಮತ್ತು ಆಸ್ಟ್ರೇಲಿಯನ್ನರು ಮಾತ್ರ ದೇಹದ ಮೆಚ್ಚುಗೆ ಬಗ್ಗೆ ಕಡಿಮೆ ಅಂಕ ಹೊಂದಿದ್ದಾರೆ. ಮಾಲ್ಟ ಅತ್ಯಧಿಕ ಅಂಕ ಗಳಿಸಿದರೆ, ಇದರ ನಂತರದ ಸ್ಥಾನದಲ್ಲಿ ತೈವಾನ್ ಮತ್ತು ಬಾಂಗ್ಲಾದೇಶ ಇದೆ. ಹೆಚ್ಚಿನ ದೇಹದ ಮೆಚ್ಚುಗೆ ಉತ್ತಮ ಮಾನಸಿಕ ಆರೋಗ್ಯ ಹೊಂದಿರುವ ಜೊತೆಗೆ ಜಾಗತಿಕವಾಗಿ ದೇಹದ ಬಗ್ಗೆ ಸಕಾರಾತ್ಮಕತೆಯನ್ನು ಪ್ರೋತ್ಸಾಹಿಸುವ ಮಾರ್ಗ ಎಂದು ಅಧ್ಯಯನದ ಪ್ರಮುಖ ಲೇಖಕ ಪ್ರೊ. ವಿರೇನ್ ಸ್ವಾಮಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಂದಿ ನೈಸರ್ಗಿಕವಾಗಿ ಇರುವುದರ ಪ್ರಯೋಜನ ಹೊಂದಿದ್ದಾರೆ. ಹಿಂದಿನ ಅಧ್ಯಯನವು ಸಕಾರಾತ್ಮಕ ಬಾಡಿ ಇಮೇಜ್ ಕುರಿತು ತೋರಿಸಿದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ದೇಶದಲ್ಲಿ 10ರಲ್ಲಿ 6 ಮಂದಿ ಹದಿಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿದೆ ರಕ್ತಹೀನತೆ; ಅಧ್ಯಯನ