ವೃದ್ಧಾಪ್ಯದಲ್ಲಿ ಬೋಳು ಸಾಮಾನ್ಯ. ಆದರೆ, ವಯಸ್ಸು ಇರುವಾಗಲೇ ಕೂದಲಿಲ್ಲದೇ ಕಾಣುವುದು ಯಾರಿಗೂ ಇಷ್ಟವಿಲ್ಲ. ಕೆಲವರು ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಹಲವರು ನಕಾರಾತ್ಮಕವಾಗೇ ತೆಗೆದುಕೊಳ್ಳುತ್ತಾರೆ. ಹಾಗಿದ್ದರೆ ಈ ಸಮಸ್ಯೆಗೆ ಕಾರಣ ಏನು? ಪರಿಹಾರ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಕೂದಲು ಉದುರಲು ಪ್ರಮುಖ ಕಾರಣ ಬದಲಾಗುವ ಜೀವನಶೈಲಿ, ಆಹಾರದ ಅಸಮತೋಲನ, ಮಾನಸಿಕ ಒತ್ತಡ. ಪರಿಣಾಮ ಹಲವಾರು ಜನರು ಈ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಬೋಳು ಬರುವುದು ಹೇಗೆ? ಇಂತಹ ಪ್ರಶ್ನೆಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ.
ಕೂದಲು ಏಕೆ ಉದುರುತ್ತದೆ?: ಬೆಳವಣಿಗೆಯ ಹಂತ, ವಿಶ್ರಾಂತಿ ಹಂತ ಮತ್ತು ಉದುರುವ ಹಂತ ಎಂಬ ಮೂರು ಹಂತಗಳು ಸಾಮಾನ್ಯವಾಗಿ ನಮ್ಮ ಕೂದಲಿಗಿದೆ. ಪ್ರತಿದಿನ 100 ಕೂದಲು ಉದುರುತ್ತವೆ. ಈ ರೀತಿ ಕೂದಲು ಉದುರದಿದ್ದರೆ ಮತ್ತೇ ಕೂದಲು ಬೆಳೆಯಲು ಕಷ್ಟವಾಗುತ್ತದೆ, ಅವುಗಳನ್ನು ಪೋಷಿಸಲು ಸಹ ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ, ಕೂದಲನ್ನು ಬಾಚಿಕೊಂಡ ನಂತರ, ಸ್ನಾನ ಮಾಡಿದ ನಂತರ ಅಥವಾ ಮಲಗಿದ ನಂತರವೂ ಕೂದಲು ಉದುರಿದರೆ ಅದನ್ನು ಸಮಸ್ಯೆ ಎಂದು ಪರಿಗಣಿಸಬಹುದು. ಅದಕ್ಕೆ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಬೇಕು.
ಕಾರಣಗಳು?
- ಮಾನಸಿಕ ಒತ್ತಡ, ಬಿ12, ಕಬ್ಬಿಣದ ಕೊರತೆ ಹಾಗೂ 78 ರಷ್ಟು ಬೋಳು ತಂದೆಯಿಂದ ಆನುವಂಶಿಕವಾಗಿ ಬರುತ್ತದೆ. ಉಳಿದ 22 ಪ್ರತಿಶತವು ಅಜ್ಜ ಮತ್ತು ಮುತ್ತಜ್ಜರಿಂದ ಬರಬಹುದು.
- ಕೂದಲಿಗೆ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಕೂದಲು ಉದುರುವುದು. ಕೂದಲಿಗೆ ಬಣ್ಣ ಹಾಕುವುದು ಮತ್ತು ಕಸಿ ಮಾಡುವುದು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು.
- ಕೋವಿಡ್ ಲಸಿಕೆ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ. ಕೋವಿಡ್ ಸೋಂಕಿನಿಂದ ಹಾಗೂ ಗರ್ಭಿಣಿಯರಿಗೆ ಮಾನಸಿಕ ಒತ್ತಡದಿಂದ ಕೂದಲು ಉದುರುತ್ತದೆ.
- ವಯಸ್ಸಾದಂತೆ ಬೋಳು ಕಾಣಿಸಿಕೊಳ್ಳುತ್ತದೆ ಇದು ಸಾಮಾನ್ಯ. ಇದನ್ನು ಔಷಧಗಳು ಮತ್ತು ಎಣ್ಣೆಗಳಿಂದ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ.
- ಪ್ರದೇಶಗಳು ಬದಲಾದಂತೆ ನೀರು ಬದಲಾಗುತ್ತದೆ. ಇದು ಕೂದಲು ಉದುರುವಿಕೆಗೂ ಪ್ರಮುಖ ಕಾರಣವಾಗುತ್ತದೆ. ಹಾಗೆ ನಿದ್ರಾಹೀನತೆಯೂ ಒಂದು ಕಾರಣ. ಶಾಂಪೂಗಳ ಬದಲಾವಣೆಯು ಸೂಕ್ತವಲ್ಲ.
ಈ ರೀತಿ ಮಾಡಿ:
- ಕೂದಲು ಉದುರುವುದನ್ನು ತಡೆಯಲು ಕೆಲವು ಔಷಧಗಳಿವೆ. ವೈದ್ಯರ ಸಲಹೆಯಂತೆ ಅವುಗಳನ್ನು ಬಳಸಬೇಕು. ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು.
- ತಲೆಗೆ ಉಪ್ಪು ನೀರನ್ನು ಬಳಸಬೇಡಿ. ಒಳ್ಳೆಯ ಸೋಪು ಹಾಗೂ ಹೆಚ್ಚು ನೊರೆ ಬಾರದ ಶ್ಯಾಂಪೂಗಳನ್ನು ಬಳಸಿ.
- ಪ್ರಮುಖ ವಿಷಯ ಎಂದರೆ ಧೂಮಪಾನಿಗಳಿಗೆ ಬೇಗ ಬೋಳು ಬರುತ್ತದೆ. ಕೂದಲು ಕಸಿ ಮಾಡುವುದು ಬೋಳು ತಲೆಗೆ ಸಾಮಾನ್ಯ ಪರಿಹಾರವಾಗಿದೆ.