ನವದೆಹಲಿ: ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಈ ಮಧ್ಯೆ ಹೊಸ ಓಮಿಕ್ರಾನ್ ಉಪ ರೂಪಾಂತರವು ದೇಶದಲ್ಲಿ ಹೊಸ ಆತಂಕ ಸೃಷ್ಟಿಸುತ್ತಿದೆ. ಕೆಲವು ವರದಿಗಳ ಪ್ರಕಾರ, ಓಮಿಕ್ರಾನ್ ಉಪ ರೂಪಾಂತರ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವು ಪತ್ತೆಹಚ್ಚಿದೆ. ಈ ಹೊಸ ಓಮಿಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗಿದ್ದು, ಬಹುಬೇಗ ಹರಡುತ್ತದೆ ಎನ್ನಲಾಗ್ತಿದೆ.
ಓಮಿಕ್ರಾನ್ ಉಪ ರೂಪಾಂತರಗಳಾದ BA.5.1.7 ಮತ್ತು BF.7 - ಚೀನಾದ ಮಂಗೋಲಿಯಾದ ಪ್ರದೇಶದಿಂದ ಬಂದಿದ್ದು, ಈಗ ಇತರ ಭಾಗಗಳಿಗೆ ಹರಡಿ ಹೊಸ ಬೆದರಿಕೆಗಳನ್ನು ಒಡ್ಡುತ್ತಿವೆ. ವರದಿಯ ಪ್ರಕಾರ, ಇತ್ತೀಚೆಗೆ ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಓಮಿಕ್ರಾನ್ ರೂಪಾಂತರಗಳಾದ BF.7 ಮತ್ತು BA.5.1.7 ಗಳೇ ಕಾರಣ ಎಂದು ಹೇಳಲಾಗ್ತಿದೆ. ಮುಂಬರುವ ಹಬ್ಬದ ಋತುವಿನಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಏತನ್ಮಧ್ಯೆ, ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಪ್ರಸ್ತುತ 26,834 ಆಗಿದೆ. ಇದು ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ 0.06 ಪ್ರತಿಶತವನ್ನು ಹೊಂದಿದೆ. ಭಾರತದ ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 1.86 ಎಂದು ವರದಿಯಾಗಿದೆ. ಆದರೆ ಸಾಪ್ತಾಹಿಕ ಪಾಸಿಟಿವಿಟಿ ರೇಟ್ ಪ್ರಸ್ತುತ ಸೋಮವಾರದಂದು ಶೇಕಡಾ 1.02 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,060 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಹಿಂದಿನ ದಿನ 2,401 ವರದಿಯಾಗಿದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಗ್ಗೆ ತಿಳಿಸಿದೆ.
ಇದನ್ನೂ ಓದಿ: ವ್ಯಾಕ್ಸಿನ್ ಪಡೆದು ಓಮಿಕ್ರಾನ್ ಸೋಂಕಿಗೊಳಗಾದವರಿಗೆ ಕೋವಿಡ್ನಿಂದ ನಾಲ್ಕು ಪಟ್ಟು ಹೆಚ್ಚು ರಕ್ಷಣೆ