ನವದೆಹಲಿ: ಕಳೆದ ಮೂರು ವರ್ಷದಿಂದ ದೇಶದಲ್ಲಿ ಯುವ ಜನತೆಯಲ್ಲಿ ಹಠಾತ್ ಸಾವಿನ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಒಪ್ಪಿಕೊಂಡಿದ್ದಾರೆ. ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವರು, ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೃದಯಾಘಾತ ಪ್ರಕರಣಗಳ ಏರಿಕೆ ಹಿಂದಿರುವ ಅಂಶ ಏನು ಎಂದು ಮೂರು ವಿಭಿನ್ನ ಅಧ್ಯಯನ ನಡೆಸಿದೆ. ಆದರೆ ಈ ಸಾವಿಗೆ ನಿಖರ ಕಾರಣ ದೃಢಪಡಿಸಲು ಸಾಕಷ್ಟು ಆಧಾರಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ಧಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ 18-45 ವರ್ಷದ ಯುವ ಜನತೆಯಲ್ಲಿ ಸಂಭವಿಸುತ್ತಿರುವ ಸಾವಿನ ಅಂಶ, ಕೋವಿಡ್ ಲಸಿಕೆ ಪರಿಣಾಮ, ಹಠಾತ್ ಸಾವಿಗೆ ಕಾರಣ ಎಂಬ ಮೂರು ಅಂಶದ ಮೇಲೆ 40 ಆಸ್ಪತ್ರೆ/ ಸಂಶೋಧನಾ ಕೇಂದ್ರದಲ್ಲಿ ಮೂರು ವಿಭಿನ್ನ ಅಧ್ಯಯನಗಳನ್ನು ನಡೆಸಲಾಗಿದೆ ಎಂದು ಕೇಂದ್ರ ರಾಜ್ಯ ಖಾತೆ ಆರೋಗ್ಯ ಸಚಿವ ಸತ್ಯ ಪಾಲ್ ಸಿಂಗ್ ಬಘೇಲಾ ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಎನ್ಪಿ-ಎನ್ಸಿಡಿ ಅಡಿ ಅರಿವು: ಹೃದಯ ಸಮಸ್ಯೆಗೆ ಸಂಬಂಧಿಸಿದ ಆರೋಗ್ಯ ವಿಷಯ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್ಪಿ - ಎನ್ಸಿಡಿ ಅಡಿ ನೀಡಿದೆ. ಈ ಎನ್ಪಿ-ಎನ್ಸಿಡಿ ರಾಷ್ಟ್ರೀಯ ಆರೋಗ್ಯ ಯೋಜನೆ ಭಾಗವಾಗಿದೆ
ಎನ್ಪಿ- ಎನ್ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ) ಮೂಲ ಉದ್ದೇಶ ಮೂಲಸೌಕರ್ಯಗಳನ್ನು ಬಲಗೊಳಿಸುವುದು, ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ ಪ್ರೋತ್ಸಾಹ ಮತ್ತು ಅರಿವು, ಪೂರ್ವ ಪತ್ತೆ, ನಿರ್ವಹಣೆ ಮತ್ತು ಸೂಕ್ತ ಚಿಕಿತ್ಸೆ ಒದಗಿಸುವುದಾಗಿದೆ.
ಎನ್ಪಿ - ಎನ್ಸಿಡಿ ಅಡಿ, 743 ಜಿಲ್ಲಾ ಎನ್ಸಿಡಿ ಕ್ಲಿನಿಕ್, 219 ಜಿಲ್ಲಾ ಹೃದಯ ಆರೈಕೆ ಘಟಕ ಮತ್ತು 6237 ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ಅಧಿಕ ರಕ್ತ ದೊತ್ತಡ, ಹೃದಯ ರೋಗ, ಸಾಮಾನ್ಯ ಕ್ಯಾನ್ಸರ್ಗಳ ತಡೆ, ನಿಯಂತ್ರಣ ಮತ್ತು ಪತ್ತೆಗೆ ಜನಸಂಖ್ಯೆ ಆಧಾರಿತ ಕಾರ್ಯಕ್ರಮಕ್ಕೆ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಮುದಾಯ ಮಟ್ಟದಲ್ಲಿ ಕ್ರಮ: ಈ ಯೋಜನೆ ಅಡಿ 30 ವರ್ಷ ಮೀರಿದ ವ್ಯಕ್ತಿಗಳನ್ನು ಗುರಿಯಾಗಿಸಿ, ಎನ್ಸಿಡಿ ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತಿದೆ. ಈ ಸೌಲಭ್ಯವನ್ನು ಆಯುಷ್ಮಾನ್ ಆರೋಗ್ಯ ಮಂದಿರ ಯೋಜನೆ ಭಾಗವಾಗಿಸಲಾಗಿದೆ. ಹೃದಯ ಸಮಸ್ಯೆ ತಡೆಯುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಸೇವೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕಲ್ಯಾಣ ಕೇಂದ್ರ ಯೋಜನೆ ಅಡಿ ಬಲಗೊಳಿಸಲಾಗಿದೆ. ಇದರ ಮೂಲಕ ಸಮುದಾಯ ಮಟ್ಟದಲ್ಲಿ ಕ್ರಮಕ್ಕೆ ಮುಂದಾಗಲಾಗಿದೆ ಎಂದರು.
ಇದರ ಹೊರತಾಗಿ ಆರೋಗ್ಯಯುತ ಜೀವನಶೈಲಿಯ ಕುರಿತು ಮತ್ತು ಹೃದಯ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನದಂದು ನಡೆಸಲಾಗುತ್ತಿದೆ. ಇದಕ್ಕಾಗಿ ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯ ಜಾಗೃತಿ ಮೂಡಿಸಲಾಗುತ್ತಿದೆ.
ಭಾರತೀಯ ಆರೋಗ್ಯ ಸುರಕ್ಷಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಡಿ ಆರೋಗ್ಯಯುತ ತಿನ್ನುವ ಅಭ್ಯಾಸಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಯುವ ಮತ್ತು ಕ್ರೀಡಾ ಸಚಿವಾಲಯದಿಂದ ಫಿಟ್ ಇಂಡಿಯಾ ಮೂವ್ಮೆಂಟ್ಗಳನ್ನು ಜಾರಿಗೆ ತರಲಾಗಿದೆ. ಇದರ ಹೊರತಾಗಿ ಆಯುಷ್ ಇಲಾಖೆಯಿಂದ ಯೋಗ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: 2022ರಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಶೇ 12.5ರಷ್ಟು ಹೆಚ್ಚಳ: ಎನ್‌ಸಿಆರ್‌ಬಿ ವರದಿ