ನವದೆಹಲಿ: ದೆಹಲಿ ಏಮ್ಸ್‌ನಲ್ಲಿ ಪತ್ತೆಯಾಗಿರುವ ನ್ಯುಮೋನಿಯಾ ಪ್ರಕರಣಕ್ಕೂ ಮತ್ತು ಚೀನಾದಲ್ಲಿ ಹೆಚ್ಚಿರುವ ನ್ಯುಮೋನಿಯಾ ಪ್ರಕರಣಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ತಿಳಿಸಿದೆ. ಈ ಕುರಿತು ತಪ್ಪು ಮಾಹಿತಿ ಹರಡದಂತೆಯೂ ಎಚ್ಚರಿಕೆ ನೀಡಿದೆ.
ಏಮ್ಸ್‌ನಲ್ಲಿ ಏಳು ಬ್ಯಾಕ್ಟೀರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಇದು ಚೀನಾ ಬ್ಯಾಕ್ಟೀರಿಯಾದೊಂದಿಗೆ ಸಂಬಂಧ ಹೊಂದಿದೆ ಎಂದು ಇತ್ತೀಚೆಗೆ ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ, ಈ ವರದಿಯು ಸಂಪೂರ್ಣವಾಗಿ ತಪ್ಪು ಮಾಹಿತಿಯಿಂದ ಕೂಡಿದ್ದಾಗಿ ಸಚಿವಾಲಯ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಜಗತ್ತಿನ ಇತರೆ ಭಾಗಗಳ ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ದೆಹಲಿಯಲ್ಲಿ ಕಂಡುಬಂದಿರುವ ಪ್ರಕರಣಗಳಿಗೂ ಯಾವುದೇ ರೀತಿಯ ನಂಟಿಲ್ಲ. ದೆಹಲಿಯಲ್ಲಿ ಪತ್ತೆಯಾಗಿರುವ ನ್ಯೂಮೋನಿಯಾ ಪ್ರಕರಣ ಕಳೆದ ಆರು ತಿಂಗಳಿಂದ ಅಂದರೆ ಏಪ್ರಿಲ್‌ನಿಂದ ಸೆಪ್ಟೆಂಬರ್ 2023ರವರೆಗೆ ಕಾಣಿಸಿಕೊಂಡ ಪ್ರಕರಣವಾಗಿದೆ. ಹೀಗಾಗಿ ಚಿಂತೆಪಡುವ ಅಗತ್ಯವಿಲ್ಲ ಎಂದು ಆತಂಕ ದೂರ ಮಾಡಿದೆ.
ಜನವರಿ 2023ರಿಂದ ಇಲ್ಲಿಯವರೆಗೆ ಏಮ್ಸ್ ಮೈಕ್ರೋಬಯೋಲಾಜಿ ವಿಭಾಗ ಪರೀಕ್ಷೆ ಮಾಡಿರುವ 611 ಮಾದರಿಗಳಲ್ಲಿ ಯಾವುದೇ ಮೈಕೋಪ್ಲಾಸ್ಮಾ ನ್ಯುಮೋನಿಯಾ ಪ್ರಕರಣಗಳಿಲ್ಲ. ಮೈಕೋಪ್ಲಾಸ್ಮಾ ನ್ಯುಮೋನಿಯಾವು ಸಮುದಾಯ ಸ್ವಾಧೀನಪಡಿಸಿಕೊಂಡಿರುವ ನ್ಯುಮೋನಿಯಾದ ಸಾಮಾನ್ಯ ಬ್ಯಾಕ್ಟೀರಿಯಾದ ಕಾರಣವಾಗಿದೆ. ಇದು ಕೇವಲ ಶೇ 15 ರಿಂದ 30ರ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ರೀತಿಯ ಬ್ಯಾಕ್ಟೀರಿಯಾ ಭಾರತದ ಯಾವುದೇ ಭಾಗದಲ್ಲಿ ಹೆಚ್ಚಳಗೊಂಡಿಲ್ಲ. ಆದಾಗ್ಯೂ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರತಿದಿನ ಸೋಂಕು ಪರೀಕ್ಷೆ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಡ್ 19 ಬಳಿಕ ಚೀನಾದಲ್ಲಿ ಮಕ್ಕಳಲ್ಲಿ ಶ್ವಾಸಕೋಶ ಸಮಸ್ಯೆ ಕಂಡುಬರುತ್ತಿರುವ ಪ್ರಕರಣ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಕುರಿತು ಇತ್ತೀಚಿಗೆ ವರದಿ ಕೇಳಿತ್ತು.
ಇದನ್ನೂ ಓದಿ: ಚೀನಾ ನ್ಯೂಮೋನಿಯಾ ಪ್ರಕರಣ; ಭಾರತದಲ್ಲಿ ಕಣ್ಗಾವಲಿಗೆ ಕರೆ ನೀಡಿದ ವೈದ್ಯರು