ಹೈದರಾಬಾದ್ : ಇಂದಿನ ಯಾಂತ್ರಿಕ ಬದುಕಿನಲ್ಲಿ ನಾವು ಹಲವು ಆರೋಗ್ಯಕರ ಸಂಗತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ದೈನಂದಿನ ಕೆಲಸ ಕಾರ್ಯಗಳು ನಮ್ಮ ಜೀವನದಲ್ಲಿ ಒತ್ತಡವನ್ನಲ್ಲದೇ ಇತರ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಜೊತೆಗೆ ನಮ್ಮ ಆರೋಗ್ಯಕರ ಜೀವನ ಶೈಲಿಗೆ ಬೇಕಾದ ನಿದ್ರೆಯನ್ನು ಜನ ಕಳೆದುಕೊಂಡಿದ್ದಾರೆ.
ಸಮತೋಲಿತ ನಿದ್ರೆಯಿಂದ ಹಲವು ಉಪಯೋಗಗಳಿವೆ. ಸರಿಯಾಗಿ ನಿದ್ರೆ ಮಾಡಲು ಅನುಸರಿಸಬೇಕಾದ ಕ್ರಮಗಳ ಕುರಿತು ನಮಗೆ ಖ್ಯಾತ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಸಲಹೆಗಳನ್ನು ನೀಡಿದ್ದಾರೆ.
ಒಂದು ಸುಖಕರ ನಿದ್ದೆ ಹೊಂದಲು ನಮ್ಮ ಮನಸ್ಸು, ಶರೀರ ಆಹ್ಲಾದಕರವಾಗಿರುತ್ತದೆ. ನಿದ್ದೆಯು ನಮ್ಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಆದರೆ ಇಂದು ನಮ್ಮ ಯಾಂತ್ರಿಕ ಜೀವನಶೈಲಿ ಮತ್ತು ಅತಿಯಾದ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದಾಗಿ ಅನೇಕರು ತಮ್ಮ ನೆಮ್ಮದಿಯ ನಿದ್ರೆಯನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ಪ್ರತಿದಿನ ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸಮಸ್ಯೆಗಳಿಂದ ಹೊರಬರಲು ನಾವು ವಿವಿಧ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ನಮ್ಮ ದೈನಂದಿನ ಕೆಲವು ಹವ್ಯಾಸಗಳನ್ನು ಬದಲಾಯಿಕೊಂಡರೆ ನಾವು ಉತ್ತಮ ನಿದ್ರೆ ಪಡೆಯಬಹುದು ಎಂದು ಖ್ಯಾತ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಹೇಳುತ್ತಾರೆ. ಈ ಅಭ್ಯಾಸಗಳು ಯಾವುವು ಎಂಬುದನ್ನು ತಿಳಿಯೋಣ..
ದಿನಚರಿಯಲ್ಲಿ ಬದಲಾವಣೆಗಳು : ಆಯುರ್ವೇದದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬರೂ ಸರಿಯಾದ ಸಮಯಪಾಲನೆ ರೂಢಿಸಿಕೊಂಡು ಆರೋಗ್ಯವಂತರಾಗಬಹುದು. ಆದರೆ, ಅನೇಕರು ವೃತ್ತಿ ಮತ್ತು ವ್ಯಾಪಾರದ ಜಂಜಾಟದಲ್ಲಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದರಿಂದಾಗಿಯೇ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಅನೇಕ ಸಮೀಕ್ಷೆಗಳು ಬಹಿರಂಗಪಡಿಸುತ್ತವೆ.
ಉತ್ತಮ ನಿದ್ರೆಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು. ನಿರ್ದಿಷ್ಟ ಸಮಯದಲ್ಲಿ ಉತ್ತಮ ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಅಷ್ಟೇ ಅಲ್ಲದೆ ವಯಸ್ಸಾಗುವ ಸಮಸ್ಯೆಯನ್ನು ತಪ್ಪಿಸಬಹುದು ಎಂದು ರುಜುತಾ ಹೇಳುತ್ತಾರೆ.
ಬಿಸಿ ನೀರು ಸ್ನಾನ : ಅನೇಕರು ಮಲಗುವ ಮುನ್ನ ಬಿಸಿ ನೀರು ಸ್ನಾನ ಮಾಡುತ್ತಾರೆ. ಈ ನೀರಿಗೆ ಬೇವು ಅಥವಾ ಜಾಯಿಕಾಯಿ ಹಾಕುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ಇದು ನಿಮಗೆ ಹೆಚ್ಚು ನಿದ್ರೆ ಹೊಂದುವಂತೆ ಮಾಡುತ್ತದೆ. ಇನ್ನು ಬೇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಇದನ್ನು ಸರ್ವರೋಗ ನಿವಾರಕ ಎಂದು ಕರೆದಿದ್ದಾರೆ.
ಪಾದಗಳಿಗೆ ತುಪ್ಪ ಸವರುವುದು : ಕೆಲವರು ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಾರೆ. ಇದರಿಂದಾಗಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹವರು ತಮ್ಮ ಪಾದಗಳನ್ನು ತುಪ್ಪದಿಂದ ಮಸಾಜ್ ಮಾಡಬೇಕು ಎಂದು ರುಜುತಾ ಹೇಳುತ್ತಾರೆ. ಹೀಗೆ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ನಿಮಗೆ ದಣಿವಾದಾಗ ಈ ರೀತಿ ಮಾಡುವುದರಿಂದ ತ್ವರಿತ ಆರಾಮವನ್ನು ಪಡೆಯಬಹುದು.
ಇತರೆ ಕ್ರಮಗಳು : ರಾತ್ರಿಯ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಇರುವಂತೆ ನೋಡಿಕೊಳ್ಳಬೇಕು. ಮಲಗುವ 60 ನಿಮಿಷಗಳ ಮೊದಲು ಮೊಬೈಲ್ ಇತ್ಯಾದಿ ಗ್ಯಾಜೆಟ್‌ಗಳಿಂದ ದೂರವಿರಬೇಕು. ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿಯಿರಿ. ಮಲಗುವ ಕೋಣೆ ಚೆನ್ನಾಗಿ ಗಾಳಿ ಆಡುವಂತೆ ಇರಲಿ ಮತ್ತು ಕತ್ತಲೆಯಿಂದ ಕೂಡಿರಲಿ. ಮಲಗುವ ಮುನ್ನ ಧ್ಯಾನ ಮಾಡುವುದು ಉತ್ತಮ.
ಇದನ್ನೂ ಓದಿ : ಬ್ರೈನ್ವೇವ್ ಚಕ್ರಕ್ಕೆ ತರಬೇತಿ ನೀಡುವ ಮೂಲಕ ಕಲಿಕೆ ಸಾಮರ್ಥ್ಯ ಹೆಚ್ಚಿಸಬಹುದು: ಅಧ್ಯಯನ