ಈಗ ಎಲ್ಲಾ ಕಡೆ, ಯಾವುದೇ ವಯಸ್ಸಿನ ಮಹಿಳೆಯರು ಅಥವಾ ಪುರುಷರಾಗಲಿ ಫಿಟ್ನೆಸ್ಗೆ ಒತ್ತು ನೀಡುತ್ತಾರೆ. ಇದಕ್ಕಾಗಿ ವ್ಯಾಯಾಮ ಅನುಸರಿಸುತ್ತಾರೆ. ಫಿಟ್ ಆಗಿ ಆರೋಗ್ಯದಿಂದಿರಲು ವ್ಯಾಯಾಮ ಸಹಾಯ ಮಾಡುತ್ತದೆ. ಆದರೆ, ನೀವು ಆರೋಗ್ಯವಾಗಿರಬೇಕು ಅಥವಾ ಶಕ್ತಿಶಾಲಿಯಾಗಿರಬೇಕು ಅಂದ್ರೆ ಕೇವಲ ವ್ಯಾಯಾಮ ಮಾಡಿದರೆ ಮಾತ್ರ ಸಾಲದು. ಇದಕ್ಕಾಗಿ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುವುದು ಅಗತ್ಯ. ವ್ಯಾಯಾಮದ ಜೊತೆಗೆ ಸೇವಿಸುವ ಆಹಾರದಿಂದ ಮಾತ್ರವೇ ಫಿಟ್ನೆಸ್ ನಿರ್ವಹಣೆ ಮಾಡಲು ಸಾಧ್ಯ. ಹಾಗಾದ್ರೆ ಇದಕ್ಕಾಗಿ ಯಾವ ಆಹಾರ ಉತ್ತಮ ಎಂಬ ಮಾಹಿತಿ ಇಲ್ಲಿದೆ.
ವ್ಯಾಯಾಮ ಮಾಡುವ ವ್ಯಕ್ತಿ ನೀವಾಗಿದ್ದರೆ, ಹಗುರ ಆಹಾರಕ್ಕೆ ನಿಮ್ಮ ಊಟವನ್ನು ನಿಲ್ಲಿಸಬೇಡಿ. ನಿಮ್ಮ ಆಹಾರ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ಗಳಿಂದ ಕೂಡಿರಲಿ. ಅದರಲ್ಲಿ ಒಂದೇ ಬಗೆಯ ಆಹಾರದ ಬದಲಾಗಿ ವಿವಿಧ ಆಹಾರಗಳಿಂದ ಇವು ಲಭ್ಯವಾಗುವಂತೆ ನೋಡಿಕೊಳ್ಳಿ. ಇಂದು, ನಾಳೆ ಎಂದು ಯೋಚಿಸುವ ಬದಲಾಗಿ, ಡಯಟ್ ಪ್ಲಾನ್ ಅನ್ನು ವಾರಗಳ ಕಾಲ ಅನುಸರಿಸುವುದು ಉತ್ತಮ. ಇಂತಹ ಡಯಟ್ ಪ್ಲಾನ್ ರೂಪಿಸಲು ಅನೇಕ ವೃತ್ತಿಪರರಿದ್ದು, ಅವರೊಂದಿಗೆ ಸಮಲೋಚಿಸುವುದು ಉತ್ತಮ. ಇದರಿಂದ ಯಾವ ರೀತಿ ಆಹಾರ ಅನುಸರಿಸಬೇಕು ಎಂಬುದು ತಿಳಿಯುತ್ತದೆ.
ವ್ಯಾಯಾಮವೇ ಆಗಲಿ, ಆಹಾರವೇ ಆಗಲಿ ಅಗತ್ಯವಿದ್ದಷ್ಟು ಮಾತ್ರ ಮಾಡಬೇಕು. ಅತಿಯಾದರೆ ಯಾವುದೂ ಒಳ್ಳೆಯದಲ್ಲ. ನೀವು ಪ್ರತಿನಿತ್ಯ ವ್ಯಾಯಾಮ ಮಾಡುತ್ತಿದ್ದೀರಾ ಎಂಬ ಮಾತ್ರಕ್ಕೆ ತೂಕ ಹೆಚ್ಚುವುದಿಲ್ಲ ಎಂದು ಮನಸ್ಸಿಗೆ ಬಂದ ಹಾಗೇ ತಿನ್ನುವುದಲ್ಲ. ಜೊತೆಗೆ ತೂಕ ಕಳೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಏನನ್ನು ತಿನ್ನದೇ ವ್ಯಾಯಾಮ ಮಾಡುವುದು ಸರಿಯಾದ ಮಾರ್ಗವಲ್ಲ. ಯಾವುದೇ ವರ್ಕ್ಔಟ್ ಮಾಡುವ ಮೊದಲು ಹೆಚ್ಚಿನ ಕಾರ್ಬೋಹೈಡ್ರೇಟ್ ಹೊಂದಿರುವ ಸ್ನಾಕ್ಸ್ ಸೇವನೆ ಮಾಡುವುದು ಉತ್ತಮ. ಈ ರೀತಿ ಮಾಡಿದಲ್ಲಿ ಮಾತ್ರ ಹುಮ್ಮಸ್ಸಿನಿಂದ ವ್ಯಾಯಾಮ ಮಾಡಬಹುದು.
ಕಾರ್ಡಿಯೋ (ಹೃದಯ) ತರಬೇತಿಗೆ ನೀವು ಮುಂದಾಗುತ್ತಿದ್ದರೆ, ನಿಮ್ಮ ಹೊಟ್ಟೆಯನ್ನು ಖಾಲಿಯಾಗಿರಿಸಿ. ಒಂದು ಕಪ್ ಟೀ ಮತ್ತು ಹಣ್ಣುಗಳನ್ನು ಸೇವಿಸಿದರೆ ಸಾಕು. ಈ ತರಬೇತಿ ಬಳಿಕ ಧಾನ್ಯಗಳಿಂದ ಕೂಡಿದ ಉಪ್ಪಿಟ್ಟು, ದೋಸಾ, ಕಡಿಮೆ ಕೊಬ್ಬಿನ ಹಾಲು, ಹಣ್ಣಿನ ಜ್ಯೂಸ್, ಮೊಸರು ಮುಂತಾದ ಆಹಾರಗಳ ಸೇವನೆ ಮಾಡುವುದು ಕೂಡ ಸ್ನಾಯುವಿನ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.
ಮಧ್ಯಾಹ್ನ ಅಥವಾ ರಾತ್ರಿ ಊಟದ ಬಳಿಕ ವ್ಯಾಯಾಮ ಮಾಡುತ್ತೇನೆ ಎಂದರೆ, ಕನಿಷ್ಠ ಮೂರ್ನಾಲ್ಕು ಗಂಟೆಯ ವಿರಾಮದ ಬಳಿಕ ಜಿಮ್ ಅಥವಾ ವ್ಯಾಯಾಮ ಮಾಡುವುದು ಉತ್ತಮ.
ಇದನ್ನೂ ಓದಿ: ತೂಕ ನಷ್ಟಕ್ಕೆ ಈ ಪಾನೀಯ ಸೇವಿಸಿ ಸಾಕು; ಆಮೇಲೆ ನೋಡಿ ಬದಲಾವಣೆ!