ಜ್ವರದ ಸೋಂಕುಗಳು ಪ್ರತಿಯೊಬ್ಬರನ್ನು ಕಾಡುವುದು ಸಾಮಾನ್ಯ. ಆದರೆ, ವಿಪರೀತವಾದ ಜ್ವರದ ಸೋಂಕುಗಳು ಹೃದಯಾಘಾತಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಜ್ವರ ಬರುವುದಕ್ಕೆ ಮುಂಚಿನ ಸಮಯಕ್ಕೆ ಹೋಲಿಕೆ ಮಾಡಿದರೆ, ಜ್ವರ ಬಂದ ಬಳಿಕ ಹೃದಯಾಘಾತದ ಅಪಾಯ ಆರು ಪಟ್ಟು ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ. ನೆದರ್ಲ್ಯಾಂಡ್ನ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಈ ಸಂಶೋಧನೆ ನಡೆಸಿದ್ದು, ಲಸಿಕೆ ಚುಚ್ಚುಮದ್ದಿಗೆ ಅಧ್ಯಯನ ಒತ್ತು ನೀಡುತ್ತದೆ.
ನಿರ್ಲಕ್ಷ್ಯ ಬೇಡ: ಲಸಿಕೆ ಸೇರಿದಂತೆ ಇನ್ಫ್ಲುಯಂಜಾ ಸೋಂಕು ತಡೆಗಟ್ಟುವ ತಂತ್ರವನ್ನು ಅಧ್ಯಯನ ಅನುಮೋದಿಸುತ್ತದೆ. ಜ್ವರ ಹೆಚ್ಚಾದ ಸಂದರ್ಭದಲ್ಲಿ ವ್ಯಕ್ತಿಯ ಆರೋಗ್ಯ ಲಕ್ಷಣಗಳಲ್ಲಿ ಹೃದಯಾಘಾತದ ಸಂಕೇತಗಳು ಕಾಣಬಹುದು. ಈ ಹಿನ್ನೆಲೆಯಲ್ಲಿ ಹೃದಯಾಘಾತದ ಲಕ್ಷಣಗಳ ಕುರಿತು ಜ್ವರದಿಂದ ಚೇತರಿಕೆ ಕಂಡ ರೋಗಿಗಳಲ್ಲಿ ಜಾಗೃತಿ ಮೂಡಿಸಲು ವೈದ್ಯರು ಮುಂದಾಗಬೇಕು. ಈ ಸಂಬಂಧ ಅವಧಿ ಪೂರ್ವವಾಗಿ ಸಲಹೆ ನೀಡಬೇಕು ಎಂದು ಅಧ್ಯಯನದಲ್ಲಿ ಭಾಗಿಯಾಗಿದ್ದ ಪ್ರಮುಖ ಲೇಖಕ ಡಾ.ಅನ್ನೆಮರ್ಜಿನ್ ಡೆ ಬೊರ್ ಹೇಳುತ್ತಾರೆ.
ಇನ್ನು ಕಡಿಮೆ ಪ್ರಮಾಣದ ಜ್ವರ ಕೂಡ ಹೃದಯಾಘಾತದೊಂದಿಗೆ ಸಂಬಂಧ ಹೊಂದಿದ್ದು, ಎಷ್ಟು ಅಪಾಯವಿದೆ ಎಂಬುದರ ಬಗ್ಗೆ ವರದಿ ಸ್ಪಷ್ಟವಾಗಿ ಹೇಳಿಲ್ಲ. ಹೆಚ್ಚು ಜ್ವರದಿಂದ ಬಳಲುತ್ತಿರುವಾಗ ಹೃದಯಕ್ಕೆ ರಕ್ತದ ಪೂರೈಕೆಯಲ್ಲಿ ವ್ಯತ್ಯಾಯವಾಗುವ ಹಿನ್ನೆಲೆಯಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು. ಭಾರತದಲ್ಲಿ ಎಚ್3ಎನ್2 ಸೋಂಕಿನಿಂದ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಶೇ. 35ರಷ್ಟು ಸಾವು: ಅಧ್ಯಯನಕ್ಕಾಗಿ 2008 ಮತ್ತು 2019ರ ನಡುವೆ ಇನ್ಫ್ಲುಯೆಂಜಾ 26,221 ಪ್ರಕರಣಗಳನ್ನು ತಂಡ ವಿಶ್ಲೇಷಿಸಿದೆ. ಜ್ವರಕ್ಕೆ ಮುನ್ನ ಮತ್ತು ನಂತರ 401 ರೋಗಿಗಳು ಹೃದಯಾಘಾತಕ್ಕೆ ಒಳಗಾಗಿದ್ದು, ಈ ಪೈಕಿ ಕೆಲವರು ಒಂದಕ್ಕಿಂತ ಹೆಚ್ಚು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇದರಲ್ಲಿ 419 ಮಂದಿಯಲ್ಲಿ ಹೃದಯಾಘಾತ ಪ್ರಕರಣಗಳನ್ನು ಗಮನಿಸಲಾಗಿದೆ. ಒಟ್ಟಾರೆ, ಹೃದಯಾಘಾತದಲ್ಲಿ ಶೇ 25 ರಷ್ಟು ಮಂದಿ ಮೊದಲ ಏಳು ವಾರದಲ್ಲಿ ಜ್ವರಕ್ಕೆ ಒಳಗಾಗಿದ್ದಾರೆ. 217 ಮಂದಿ ವರ್ಷದೊಳಗೆ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾದರೆ, 177 ಮಂದಿ ವರ್ಷದ ಬಳಿಕ ಈ ಸಮಸ್ಯೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಜ್ವರ ಸಂಬಂಧಿತ ಸಮಸ್ಯೆಯಿಂದ ಶೇ 35 ರಷ್ಟು ರೋಗಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ಉಲ್ಲೇಖಿಸಿದೆ.
ಈ ಹಿಂದೆ ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ಜ್ವರದ ಸೋಂಕುಗಳು ಫ್ಲೇಕ್ ಛಿದ್ರಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಹೃದಯಾಘಾತ ಉಂಟುಮಾಡುತ್ತದೆ. ಅನೇಕ ಬಾರಿ ವಿಪರೀತ ಜ್ವರದ ಹಿಂದೆ ಹೃದಯಾಘಾತದ ಪರಿಣಾಮ ಅಗೋಚರವಾಗಿರುತ್ತದೆ. ಇದು ರೋಗಿಯ ಅರಿವಿಗೂ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜ್ವರದಿಂದ ಬಳಲುವ ವ್ಯಕ್ತಿ ತಕ್ಷಣಕ್ಕೆ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಅಧ್ಯಯನ ಸಲಹೆ ನೀಡಿದೆ.
ಇದನ್ನೂ ಓದಿ: ಭಾರತೀಯರ ಹೃದಯ ಸಮಸ್ಯೆಗೆ ಅಶುದ್ಧ ಇಂಧನ, ಫಾಸ್ಟ್ ಫುಡ್ ಕಾರಣವಂತೆ