ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಣ್ಣಿನ ಸಮಸ್ಯೆಗಳಿಗೆ ಒಳಗಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಣ್ಣಿನ ಉರಿ, ಕೆರೆತ, ಅಲರ್ಜಿಯಂತಹ ಪ್ರಕರಣಗಳು ವಾಯು ಮಾಲಿನ್ಯದಿಂದ ಕಂಡುಬರುತ್ತಿವೆ ಎಂದು ನೇತ್ರತಜ್ಞರು ತಿಳಿಸಿದ್ದಾರೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆ ವರ್ಗದಲ್ಲಿದ್ದು, ಎಕ್ಯೂಐ 324 ಇದೆ. ವಾಯು ಗುಣಮಟ್ಟದ ತೀವ್ರತೆ ಮತ್ತು ದೆಹಲಿ- ಎನ್ಸಿಆರ್ನಲ್ಲಿ ಅಧಿಕ ಮಟ್ಟದ ಮಾಲಿನ್ಯದಿಂದಾಗಿ ಕಣ್ಣಿನ ಸಮಸ್ಯೆ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿದೆ. ಕಣ್ಣಿನಲ್ಲಿ ಕೆಂಪು, ಕೆರೆತ, ನೀರು ಸೋರುವಿಕೆಯಂತಹ ಸಮಸ್ಯೆಗಳನ್ನು ಕಾಣುತ್ತಿದ್ದೇವೆ ಎಂದು ದೆಹಲಿ ಐ ಸೆಂಟರ್ ನೇತ್ರ ತಜ್ಞ ಡಾ ಇಕೆಡಾ ಲಾಲ್ ತಿಳಿಸಿದ್ದಾರೆ.
ಮಾಲಿನ್ಯದಿಂದ ಹೆಚ್ಚಾದ ಸಮಸ್ಯೆ: ಈಗಾಗಲೇ ಒಣ ಕಣ್ಣಿನ ಸಮಸ್ಯೆ ಹೊಂದಿರವವರಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣ ಕಂಡಿದೆ. ನಾವು ಗಮನಿಸಿದಂತೆ ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಶೇ 40ರಷ್ಟು ಉಲ್ಬಣಗೊಂಡಿದೆ. ಮಾಲಿನ್ಯ ಮತ್ತು ಗಾಳಿಯಲ್ಲಿರುವ ಧೂಳು ಕಣ್ಣಿನ ಅಲರ್ಜಿ ಮತ್ತು ಇತರೆ ಕಣ್ಣಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ದೆಹಲಿಯಲ್ಲಿ ಎಕ್ಯೂಐ ಮಟ್ಟ ಹೆಚ್ಚಿದ್ದು, ಇದು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಭಾನುವಾರ ಕೊಂಚ ಸುಧಾರಣೆ ಕಂಡಿದ್ದ ದೆಹಲಿ ಎಕ್ಯೂಐ 348 ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ವಾಯು ಮಾಲಿನ್ಯಕ್ಕೆ ಕೊಡುಗೆ ನೀಡುವ ಕೆಲಸಗಳ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ನಗರದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಭಾರಿ ಟ್ರಕ್‌ಗಳ ಪ್ರವೇಶಕ್ಕೂ ಕೂಡ ಅನುಮತಿ ನೀಡಲಾಗಿದೆ. ಈ ನಡುವೆ ಸೋಮವಾರದಿಂದ ಶಾಲೆಗಳು ಪುನಾರಂಭವಾಗಿವೆ.
ಇನ್ನು, ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಐ ಡ್ರಾಪ್ ಮತ್ತು ಸನ್ ಗ್ಲಾಸ್ ಸಹಾಯಕವಾಗಬಲ್ಲದು. ಈ ಸಂದರ್ಭದಲ್ಲಿ ಕಾಂಟಾಕ್ಟ್ ಲೆನ್ಸ್ಗಳಿಂದ ದೂರ ಇರುವಂತೆ ಏಮ್ಸ್ನ ನೇತ್ರತಜ್ಞರಾದ ರಾಜೇಶ್ ಸಿನ್ಹಾ ಸಲಹೆ ನೀಡಿದ್ದಾರೆ.
ಇದೇ ವೇಳೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡವರು ಕಣ್ಣನ್ನು ಹೆಚ್ಚಾಗಿ ಉಜ್ಜಬಾರದು. ಕಿರಿಕಿರಿ ಉಂಟಾದಲ್ಲಿ ತಣ್ಣನೆ ಬಟ್ಟೆ, ಹತ್ತಿಯನ್ನು ಕಣ್ಣಿನ ಮೇಲೆ ಇಡುವಂತೆ ಸಲಹೆ ನೀಡಿದ್ದಾರೆ. ಜೊತೆಗೆ ಮನೆಯಿಂದ ಹೊರಗೆ ಇರುವಾಗ ಕನ್ನಡಕ, ಸನ್ಗ್ಲಾಸ್ ಬಳಕೆ ಅವಶ್ಯ ಎಂದಿರುವ ಅವರು, ದೀರ್ಘಾವಧಿ ಕಾಲ ವಾಯು ಮಾಲಿನ್ಯಕ್ಕೆ ಒಳಗಾಗದಂತೆ ಸೂಚನೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಕಳಪೆ ವರ್ಗದಲ್ಲೇ ಮುಂದುವರೆದ ದೆಹಲಿ ವಾಯು ಗುಣಮಟ್ಟ; ಇನ್ನೊಂದು ವಾರವೂ ಇದೇ ವಾತಾವರಣ