ಹೈದರಾಬಾದ್ (ತೆಲಂಗಾಣ): ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಜನರಲ್ಲಿ ವಿವಿಧ ರೀತಿಯ ಅಡ್ಡಪರಿಣಾಮಗಳು ಕಂಡು ಬರುತ್ತಿವೆ. ನೆನಪಿನ ಶಕ್ತಿ ನಷ್ಟದೊಂದಿಗೆ ತಾತ್ಕಾಲಿಕ ಬುದ್ಧಿಮಾಂದ್ಯತೆಯು ಈ ಪರಿಣಾಮಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವಯಸ್ಸಾದವರು ಚೇತರಿಸಿಕೊಂಡ ಒಂದು ವರ್ಷದ ನಂತರವೂ ಆಲ್ಝೈಮರ್ ಕಾಯಿಲೆಗೆ ಒಳಗಾಗುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ಬಹಿರಂಗಪಡಿಸಿದೆ.
ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಒಂದು ವರ್ಷದ ನಂತರವೂ ವಯಸ್ಸಾದವರಲ್ಲಿ ಅಲ್ಝೈಮರ್ ಕಾಯಿಲೆ ಹೆಚ್ಚಾಗುವ ಅಪಾಯವನ್ನು ಹೊಂದಿರಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಈ ಅಪಾಯವು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಇತ್ತೀಚೆಗೆ ಕೋವಿಡ್ ಮತ್ತು ಅಲ್ಝೈಮರ್ ಕಾಯಿಲೆ ಬಗ್ಗೆ ತಿಳಿಯಲು ಈ ಸಂಶೋಧನೆಯನ್ನು ಮಾಡಿದ್ದಾರೆ. ಕೋವಿಡ್ ಸೋಂಕು ಅಲ್ಝೈಮರ್‌ಗೆ ಕಾರಣವಾಗಬಹುದೇ ಅಥವಾ ಅಲ್ಝೈಮರ್‌ನಿಂದ ಬಳಲುತ್ತಿರುವವರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆಯೇ ಎಂಬುದರ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ, ಈ ಎರಡು ಕಾಯಿಲೆಗಳ ನಡುವೆ ಸಂಬಂಧವಿದೆ ಎಂದು ಈ ಸಂಶೋಧನೆಯು ಖಚಿತವಾಗಿ ದೃಢಪಡಿಸಿದೆ.
ಸಂಶೋಧನೆ ಏನು ಹೇಳುತ್ತದೆ?: ಜರ್ನಲ್ ಆಫ್ ಅಲ್ಝೈಮರ್ಸ್ ಡಿಸೀಸ್ನಲ್ಲಿ ಪ್ರಕಟವಾದ ಈ ಸಂಶೋಧನೆಯು ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವ ವೃದ್ಧರು ಅಲ್ಝೈಮರ್ ಕಾಯಿಲೆಗೆ ತುತ್ತಾಗುವ ಎರಡು ಪಟ್ಟು ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳುತ್ತದೆ. ಅಲ್ಝೈಮರ್ ಕಾಯಿಲೆಗೆ ಸಂಬಂಧಿಸಿದ ಅಂಶಗಳು ವ್ಯಕ್ತಿಯಲ್ಲಿ ಅರಿವಿನ ದುರ್ಬಲತೆ ಉಂಟುಮಾಡುತ್ತವೆ ಎಂದು ಸಂಶೋಧನಾ ಸಹ ಲೇಖಕಿ ಮತ್ತು ಪ್ರೊಫೆಸರ್ ಡಾ. ಪಮೇಲಾ ಡೇವಿಸ್ ಹೇಳಿದ್ದಾರೆ.
ತೀವ್ರವಾದ ಉರಿಯೂತ ಮತ್ತು ನರಮಂಡಲದ ಮತ್ತು ಮೆದುಳಿನ ಮೇಲೆ ಪರಿಣಾಮಗಳು ಅಲ್ಝೈಮರ್ ಅಪಾಯವನ್ನು ಹೆಚ್ಚಿಸಬಹುದು. ಈ ಅಧ್ಯಯನದಲ್ಲಿ ಇತರ ಕೆಲವು ಸಂಬಂಧಿತ ಸಂಶೋಧನೆಗಳ ಫಲಿತಾಂಶಗಳನ್ನು ಸಹ ವಿಶ್ಲೇಷಿಸಲಾಗಿದೆ. 2021ರಲ್ಲಿ ಮತ್ತೊಂದು ಸಂಶೋಧನೆಯ ಫಲಿತಾಂಶಗಳು ಪೂರ್ವ ಬುದ್ಧಿಮಾಂದ್ಯತೆ ಹೊಂದಿರುವ ಜನರು ಕೋವಿಡ್ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಅದರಿಂದ ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವಿನ ಅಪಾಯವಿದೆ ಎಂದು ತಿಳಿಸಿತ್ತು.
ಸಂಶೋಧನೆ ಹೇಗೆ ನಡೆಯಿತು?: ಈ ಅಧ್ಯಯನಕ್ಕಾಗಿ ಸಂಶೋಧಕರು ಟ್ರೈನೆಟ್‌ಎಕ್ಸ್ ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್ ಬಳಸಿದ್ದಾರೆ. ಇದರ ಅಡಿಯಲ್ಲಿ 50 ರಾಜ್ಯಗಳಲ್ಲಿ ಸುಮಾರು 70 ಆರೋಗ್ಯ ಸಂಸ್ಥೆಗಳಿಗೆ ಒಳರೋಗಿ ಮತ್ತು ಹೊರರೋಗಿ ವಿಭಾಗಕ್ಕೆ ಭೇಟಿ ಮಾಡಿದ 95 ಮಿಲಿಯನ್‌ಗಿಂತಲೂ ಹೆಚ್ಚು ಜನರ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳಿಂದ ಕ್ಲಿನಿಕಲ್ ಡೇಟಾವನ್ನು ಸಂಗ್ರಹಿಸಲಾಗಿದೆ ಮತ್ತು ಅದನ್ನು ವಿಶ್ಲೇಷಿಸಲಾಗಿದೆ.
ಸಂಶೋಧಕರ ಈ ವಿಶ್ಲೇಷಣೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 6.2 ಮಿಲಿಯನ್ ವಯಸ್ಕರನ್ನು ಒಳಪಟ್ಟಿದ್ದರು. ಅಲ್ಲದೇ, ಇದನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದರು. ಒಂದು ಗುಂಪಿನಲ್ಲಿ 2021ರ ಮೇ ತಿಂಗಳಿಂದ 2020ರ ಫೆಬ್ರವರಿ ನಡುವೆ ಸೋಂಕಿಗೆ ಒಳಗಾದ ಜನರು ಹಾಗೂ ಇನ್ನೊಂದು ಗುಂಪಿನಲ್ಲಿ ಇದೇ ಅವಧಿಯಲ್ಲಿ ಸೋಂಕಿಗೆ ಒಳಗಾಗದ ಜನರನ್ನು ಪರಿಗಣಿಸಲಾಗಿತ್ತು.
ಎರಡೂ ಗುಂಪುಗಳಲ್ಲಿ ಸೇರಿದ ರೋಗಿಗಳ ಮಾಹಿತಿ ವಯಸ್ಸಿನ ಆಧಾರ (65 ರಿಂದ 74, 75 ರಿಂದ 84 ಮತ್ತು 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು), ಲಿಂಗ ಮತ್ತು ಇತರ ಹಲವಾರು ಅಂಶಗಳಲ್ಲಿ ವಿಶ್ಲೇಷಿಸಲಾಗಿದೆ. ಇದರಲ್ಲಿ ಕೋವಿಡ್ ಸೋಂಕು ಹೊಂದಿರುವ ವಯಸ್ಸಾದವರಲ್ಲಿ ಇತರರಿಗಿಂತ ಶೇ.50ರಿಂದ 80ರಷ್ಟು ಅಲ್ಝೈಮರ್ ಕಾಯಿಲೆ ಹೆಚ್ಚಾಗಿರುವುದು ಎಂದು ಸಂಶೋಧನೆಯು ಕಂಡುಹಿಡಿದಿದೆ.
ಕೋವಿಡ್ನಿಂದ ಚೇತರಿಸಿಕೊಂಡ ಒಂದು ವರ್ಷದಲ್ಲಿ ಇದೇ ವಯಸ್ಸಾದವರಲ್ಲಿ ಅಲ್ಝೈಮರ್ ಕಾಯಿಲೆಯ ಅಪಾಯವು (ಶೇ0.35 ರಿಂದ 0.68ಕ್ಕೆ ಏರಿಕೆ) ದ್ವಿಗುಣಗೊಂಡಿದೆ. ಇದರಲ್ಲಿ 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲೇ ಈ ಅಪಾಯವು ಹೆಚ್ಚು ಎಂದು ಸಂಶೋಧನೆಯು ಬಹಿರಂಗಪಡಿಸಿದೆ.
ಕೋವಿಡ್ ಸೋಂಕು ಅಲ್ಝೈಮರ್ ಕಾಯಿಲೆಯ ಪರಿಣಾಮಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಯ ನಂತರವೂ ಹೇಳಲು ಕಷ್ಟವಾಗಿದ್ದರೂ, ಈ ಎರಡು ಪರಿಸ್ಥಿತಿಗಳು ಒಂದೇ ಎಂದು ನಿರಾಕರಿಸಲಾಗುವುದಿಲ್ಲ. ಆದ್ದರಿಂದ ಕೋವಿಡ್ ಮತ್ತು ಅಲ್ಝೈಮರ್ ಕಾಯಿಲೆ ನಡುವಿನ ಎಲ್ಲ ರೀತಿಯ ಅಂಶಗಳ ತಿಳಿಯಲು ಹೆಚ್ಚಿನ ಸಂಶೋಧನೆಗಳನ್ನು ಮಾಡಬೇಕಾಗಿದೆ ಎಂದು ಡಾ ಪಮೇಲಾ ಡೇವಿಸ್ ಹೇಳುತ್ತಾರೆ.
ಇದನ್ನೂ ಓದಿ: ಲಾಂಗ್ವಿಟಿ ಡಯಟ್ ಮನುಷ್ಯನ ಜೀವಿತಾವಧಿ ಹೆಚ್ಚಿಸಲು ಸಹಕಾರಿ: ಡಯಟ್ ಕ್ರಿಯೇಟರ್