ನವದೆಹಲಿ: ಕೋವಿಡ್ ಬಳಿಕ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ವೈದ್ಯರು, ಭಾರಿ ಮಟ್ಟದ ದೈಹಿಕ ಒತ್ತಡಕ್ಕೆ ಒಳಗಾದಂತೆ ಸೂಚನೆ ನೀಡಿದ್ದಾರೆ. ಅಧಿಕ ಪ್ರಮಾಣದ ವ್ಯಾಯಾಮ ಚಟುವಟಿಕೆಗಳು ಕೂಡ ಸೂಕ್ತ ಅಲ್ಲ ಎಂದಿದ್ದಾರೆ.
ಇತ್ತೀಚೆಗೆ ಗುಜರಾತ್ನಲ್ಲಿ ನವರಾತ್ರಿ ಸಮಯದಲ್ಲಿ 10 ಮಂದಿ ಹೃದಯಾಘಾತದಿಂದ ಕುಸಿದು ಸಾವಿಗೀಡಾದ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದು ವೈದ್ಯಕೀಯ ಕ್ಷೇತ್ರದಲ್ಲೂ ಆಘಾತ ಮೂಡಿಸಿದೆ. ಗಂಭೀರ ಕೋವಿಡ್ ಸೋಂಕಿನಿಂದ ಚೇತರಿಕೆ ಕಂಡವರು ಅಧಿಕ ದೈಹಿಕ ಒತ್ತಡಕ್ಕೆ ಒಳಗಾಗುವುದು ಸಂಪೂರ್ಣ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಫರೀದಾಬಾದ್ನ ಫೋರ್ಟಿಸ್ ಎಸ್ಕೋರ್ಟ್ಸ್ ಆಸ್ಪತ್ರೆಯ ಹೃದಯತಜ್ಞ ಡಾ.ಸಂಜಯ್ ಕುಮಾರ್ ತಿಳಿಸಿದ್ದಾರೆ.
ಭಾರಿ ವ್ಯಾಯಾಮ ಬೇಡ: ಸಾಮಾನ್ಯ ದೈಹಿಕ ಒತ್ತಡಗಳೂ ಒಳಗೊಂಡಂತೆ ಶ್ವಾಸಕೋಶದ ಸವಾಲು, ಉಸಿರಾಟದ ಸವಾಲುಗಳು, ಹೃದಯರಕ್ತನಾಳದ ಸಮಸ್ಯೆಗಳು, ಆಯಾಸ, ಸ್ನಾಯು ಮತ್ತು ಕೀಲು ನೋವು, ನರವೈಜ್ಞಾನಿಕ ಲಕ್ಷಣಗಳು, ಜಠರಗರುಳಿನ ಸಮಸ್ಯೆಗಳು ಭಾರಿ ಪ್ರಮಾಣದ ವ್ಯಾಯಾಮದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇತ್ತೀಚಿಗೆ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನೊಳಗೊಂಡ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನದಲ್ಲಿ ಗಂಭೀರ ಕೋವಿಡ್ನಿಂದ ಚೇತರಿಕೆ ಕಂಡವರು ಒಂದು ಅಥವಾ ಎರಡು ವರ್ಷಗಳ ಕಾಲ ಹೃದಯಾಘಾತ ಮತ್ತು ಹೃದಯ ಸ್ತಂಭನದ ಅಪಾಯ ತಪ್ಪಿಸಲು ಹೆಚ್ಚಿನ ವ್ಯಾಯಾಮ ಮಾಡದಂತೆ ಸಲಹೆ ನೀಡಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಹೃದಯ ರಕ್ತನಾಳ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ 17.9 ಆಗಿದ್ದು, ಭಾರತದ ಯುವ ಜನರ ಸಾವಿನ ಸಂಖ್ಯೆ 5ನೇ ಒಂದು ಭಾಗವಾಗಿದೆ.
ಗಂಭೀರ ಕೋವಿಡ್ ಅಪಾಯ: ಈ ಸಂಖ್ಯೆ ಕೋವಿಡ್ ಬಳಿಕ ಗಮನಾರ್ಹವಾಗಿ ಏರಿಕೆ ಕಂಡಿದೆ. ದೀರ್ಘ ಕೋವಿಡ್ ಪ್ರಕರಣಗಳು ಹೃದಯ ಸಮಸ್ಯೆಗಳಾದ ಎದೆ ನೋವು, ಉಸಿರಾಟ ಸಮಸ್ಯೆ, ಆಯಾಸದಂತಹ ಲಕ್ಷಣಗಳನ್ನು ಹೊಂದಿದೆ. ಗಂಭೀರ ಕೋವಿಡ್ ರೋಗಿಗಳಲ್ಲಿ ಸಾಮಾನ್ಯವಾಗಿ ಫೈಬ್ರೊಟಿಕ್ ಶ್ವಾಸಕೋಶದ ಅಂಶಗಳನ್ನು ಮತ್ತು ಶ್ವಾಸಕೋಶದ ಕಾರ್ಯದಲ್ಲಿ ದುರ್ಬಲತೆಯನ್ನು ಹೊಂದಿರುತ್ತಾರೆ. ಇದು ಶ್ವಾಸಕೋಶದ ಕಾರ್ಯಾಚರಣೆ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಶ್ವಾಸಕೋಶದ ದರ್ಬಲತೆಯನ್ನು ತಡೆಯಲು ದೀರ್ಘಕಾಲದವರೆಗೆ ಸ್ಟೀರಿಯಡ್ಸ್ ಮತ್ತು ಆ್ಯಂಟಿಫೈಬ್ರೊಟಿಕ್ಸ್ ನೀಡಲಾಗುವುದು. ಈ ರೋಗಿಗಳಲ್ಲಿ ಅಧಿಕ ವ್ಯಾಯಾಮದ ಚಟುವಟಿಕೆ ಬ್ರಾಂಕೋಸ್ಪಾಸ್ಮಗೆ ಕಾರಣವಾಗುತ್ತದೆ ಎಂದು ಗುರುಗ್ರಾಮದ ಸಿ.ಕೆ.ಬಿರ್ಲಾ ಆಸ್ಪತ್ರೆಯ ವೈದ್ಯ ಡಾ.ಕುಲ್ದೀಪ್ ಕುಮಾರ್ ಗ್ರೋವರ್ ಹೇಳುತ್ತಾರೆ. (ಐಎಎನ್ಎಸ್)
ಇದನ್ನೂ ಓದಿ: ಹೃದಯರಕ್ತನಾಳ ಸಂಬಂಧಿತ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಏನು?.. ಸಂಶೋಧನೆಗಳು ಹೇಳುವುದೇನು?