ಕಣ್ಣು ಕೆಂಪಾಗುವಿಕೆ, ಊತ, ಕಣ್ಣೀರಿನ ಕೊರತೆ ಇವು ಕಣ್ಣಿನ ಶುಷ್ಕತೆಯ (ಡ್ರೈ ಐ) ಸಮಸ್ಯೆ ಲಕ್ಷಣಗಳು. ಕಣ್ಣಿನ ಸಮಸ್ಯೆಗಳನ್ನು ಆದಷ್ಟು ಮುಂಚೆಯೇ ಪತ್ತೆ ಮಾಡಿ, ಅದಕ್ಕೆ ಸರಿಯಾದ ಆರೈಕೆ ನಡೆಸುವುದು ಉತ್ತಮ ಎನ್ನುತ್ತಾರೆ ನೇತ್ರ ತಜ್ಞರು. ಇಲ್ಲದೇ ಹೋದಲ್ಲಿ ಇದು ಮತ್ತಷ್ಟು ಕಣ್ಣಿನ ದೀರ್ಘ ಸಮಸ್ಯೆಗೆ ಕಾರಣವಾಗುತ್ತದೆ.
ಡ್ರೈ ಐ ಸಮಸ್ಯೆ: ಕಣ್ಣು ಒಣಗಿದಂತೆ ನಿಸ್ತೇಜವಾಗಲು ಹಲವು ಕಾರಣಗಳಿವೆ. ವಿಟಮಿನ್ ಸಿ, ಹಾರ್ಮೋನ್ ಅಸಮತೋಲನ, ಥೈರಾಯ್ಡ್, ದೀರ್ಘ ಕಾಲ ಕಂಪ್ಯೂಟರ್, ಮೊಬೈಲ್ ಟಿವಿ ವೀಕ್ಷಣೆ, ಹಲವು ವಿಧದ ಅಲರ್ಜಿ, ವಯಸ್ಸಾಗುವಿಕೆ, ಧೂಳು ಮುಂತಾದವುಗಳು ಕಣ್ಣಿನ ಶುಷ್ಕತೆಗೆ ಪ್ರಮುಖ ಕಾರಣವಾಗಿವೆ. ಕಣ್ಣಿನ ಆರೋಗ್ಯದಲ್ಲಿ ಲ್ಯಾಕ್ರಿಮಲ್ ಗ್ರಂಥಿಗಳು ಪ್ರಮುಖ ಪಾತ್ರವಹಿಸುತ್ತದೆ. ಈ ಗ್ರಂಥಿಯು ಉತ್ಪಾದಿಸುವ ದ್ರವವೂ ಕಣ್ಣನ್ನು ಶುಚಿಗೊಳಿಸಿ, ರಕ್ಷಣೆ ಮಾಡುತ್ತದೆ. ಆದಾಗ್ಯೂ ಒಣ ಕಣ್ಣಿನ ಸಮಸ್ಯೆ ಅನೇಕರನ್ನು ಕಾಡುವುದರಿಂದ ಅವರ ಕಣ್ಣು ನಿರ್ಜಲೀಕರಣದಿಂದ ಬಳಲುತ್ತದೆ. ಇದರಿಂದ ಅನೇಕ ವೇಳೆ ಕಿರಿಕಿರಿ ಮತ್ತು ಕೆರೆತ ಕಾಡುತ್ತದೆ. ಅನೇಕ ಮಂದಿ ಕಣ್ಣಿನ ಮೇಕಪ್ ಅನ್ನು ತೆಗೆಯಲು ನಿರ್ಲಕ್ಷ್ಯ ವಹಿಸುತ್ತಾರೆ. ಇದು ಕೂಡ ಒಣ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ.
ಹಾಗಾದ್ರೆ ಇಂತಹ ಶುಷ್ಕ ಕಣ್ಣಿನ ಸಮಸ್ಯೆಯಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಪರಿಹಾರ!
- ಅನೇಕ ಮಂದಿ ಕಣ್ಣು ಮಿಟುಕಿಸದೆ, ಅತ್ತಿತ್ತ ದೃಷ್ಟಿ ಕದಲಿಸದೇ ತದೇಕ ಚಿತ್ತದಿಂದ ಕಂಪ್ಯೂಟರ್, ಮೊಬೈಲ್, ಟಿವಿಗಳನ್ನು ವೀಕ್ಷಣೆ ಮಾಡುತ್ತಾರೆ. ಇದರಿಂದ ಕಣ್ಣಲ್ಲಿ ಶುಷ್ಕತೆ ಕಾಡುವ ಜೊತೆಗೆ ಉರಿಯೂತಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಆಗ್ಗಿಂದಾಗ್ಗೆ ನಿಮ್ಮ ಕಣ್ಣು ರೆಪ್ಪೆಗಳನ್ನು ಮುಚ್ಚಬೇಕು
- ಎಲೆಕ್ಟ್ರಾನಿಕ್ ಗೆಜೆಟ್ಗಳನ್ನು ಬಳಕೆ ಮಾಡುವಾಗ ಮಧ್ಯೆ ಮಧ್ಯೆ ಸ್ಪಲ್ಪ ಕಣ್ಣಿಗೆ ವಿಶ್ರಾಂತಿಯನ್ನು ನೀಡಬೇಕಿದೆ
- ಕಣ್ಣನ್ನು ನಿಯಮಿತವಾಗಿ ಬೆಚ್ಚಗಿನ ನೀರಿನಲ್ಲಿ ಶುಚಿಗೊಳಿಸಬೇಕು. ಈ ನೀರು ತುಂಬ ತಣ್ಣಗೆ ಮತ್ತು ಅತಿಯಾದ ಬಿಸಿಯಾಗಿ ಇರಬಾರದು
- ಲ್ಯಾಕ್ರಿಮಲ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರೆ ಸಾಕಷ್ಟು ನೀರನ್ನು ಕುಡಿಯಬೆಕು. ಅದೇ ರೀತಿ ತರಕಾರಿ, ಕಲ್ಲಂಗಡಿ, ಸ್ಟ್ರಾಬೆರಿ ಮುಂತಾದ ನೀರಿನಿಂದ ಕೂಡಿದ ಆಹಾರಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸಬೇಕು.
- ಒಣ ಕಣ್ಣಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಒಮೆಗಾ-3 ಫ್ಯಾಟಿ ಆ್ಯಸಿಡ್ ಅನ್ನು ಚೆನ್ನಾಗಿ ಸೇವನೆ ಮಾಡಬೇಕು. ಇದರ ಜೊತೆಗೆ ವಾಲ್ನಾಟ್, ಬಾದಾಮಿ, ಬಾಳೆ ಹಣ್ಣು, ಒಣ ದ್ರಾಕ್ಷಿ ಮತ್ತು ಅವಕಾಡೊವನ್ನು ನಿಯಮಿತವಾಗಿ ಸೇವಿಸಿ
- ಏರ್ ಡ್ರೈಯರ್, ಎಸಿ, ಕೂಲರ್ ಮತ್ತು ಹೀಟರ್ಗಳು ನೇರವಾಗಿ ಕಣ್ಣಿಗೆ ಗಾಳಿಯನ್ನು ಹೊಡೆಯದಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ
- ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಡ್ರಾಪ್ಸ್, ಮೆಡಿಸಿನ್ ಮುಂತಾದವುಗಳನ್ನು ಬಳಕೆ ಮಾಡಬೇಕಿದೆ.
- ಕಂಪ್ಯೂಟರ್, ಮೊಬೈಲ್ ಸ್ಕ್ರೀನಿಂಗ್ ಮೇಲೆ ಬ್ಲೂ ಲೈಟ್ ಸುರಕ್ಷತೆಯನ್ನು ಅಳವಡಿಸಿಕೊಳ್ಳಬಹುದು. ಇದು ನಿಮ್ಮ ಕಣ್ಣಿಗೆ ನೇರವಾಗಿ ನೀಲಿ ಬೆಳಕು ಹಾದು ಹೋಗದಂತೆ ತಡೆಯುತ್ತದೆ.
- ದೀರ್ಘಕಾಲ ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರು ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡದಿರುವುದು ಉತ್ತಮ. ಕಾರಣ ಇದು ಕಣ್ಣು ಮತ್ತಷ್ಟು ಒಣಗಲು ಕಾರಣವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು
- ಕಣ್ಣಿನ ಮೇಕಪ್ ಅನ್ನು ಬಳಕೆ ಮಾಡುವವರು ತಪ್ಪದೇ ಕಣ್ಣು ರೆಪ್ಪೆ, ಹುಬ್ಬು ಮತ್ತು ಕಣ್ಣಿನ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧ ನೀರಿನಿಂದ ಶುಚಿಗೊಳಿಸಬೇಕು.
- ಹೊರಗೆ ಹೋಗುವಾಗ ತಪ್ಪದೇ ಸನ್ಗ್ಲಾಸ್ ಅನ್ನು ಹಾಕುವುದು ಉತ್ತಮ. ಇದು ನಿಮ್ಮ ಕಣ್ಣಿಗೆ ನೇರವಾಗಿ ಧೂಳು, ಮಾಲಿನ್ಯ ಸೇರದಂತೆ ತಡೆಯುತ್ತದೆ. ಜೊತೆಗೆ ಸೂರ್ಯನಿಂದ ಬರುವ ಅಪಾಯಕಾರಿ ನೇರಳಾತೀತ ಕಿರಣವೂ ಹಾನಿಯಾಗದಂತೆ ಮಾಡುತ್ತದೆ.
- ಕೆಫೆನ್ ಸಮೃದ್ಧ ಆಹಾರಗಳಾದ ಟೀ, ಕಾಫಿ ಮತ್ತು ಆಲ್ಕೋಹಾಲ್ಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಿ
- ಕತ್ತಲ ಕೋಣೆ, ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡುವ ಬದಲು, ಉತ್ತಮ ಗಾಳಿ ಮತ್ತು ಬೆಳಕಿರುವ ಪ್ರದೇಶಗಳನ್ನು ಆರಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ವಾಯು ಮಾಲಿನ್ಯ: ಈ ಮುನ್ನೆಚ್ಚರಿಕೆ ಕ್ರಮಗಳು ತಿಳಿದಿರಲಿ