ಕರ್ನಾಟಕ ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿ ಡೆಂಘೀ ಪ್ರಕರಣಗಳು ದಾಖಲಾಗುತ್ತಿವೆ. ಸೊಳ್ಳೆಗಳಿಂದ ಹರಡುವ ಡೆಂಘೀಯಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಹೈದ್ರಾಬಾದ್ನ ಗಾಂಧಿ ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ.ಎಂ.ರಾಜಾ ರಾವ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಡೆಂಘೀ ಸೋಂಕಿನ ಪತ್ತೆ ಮತ್ತು ಯಾವಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು, ಪ್ಲೇಟ್ಲೆಟ್ ವರ್ಗಾವಣೆ ಸೇರಿದಂತೆ ಯಾವ ವೈದ್ಯಕೀಯ ಆರೈಕೆ ಪಡೆಯಬೇಕು ಎಂಬ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಯಾವಾಗ ಪ್ಲೇಟ್ಲೆಟ್ ವರ್ಗಾವಣೆ ಯಾವಾಗ ನಡೆಸಬೇಕು?: ಡೆಂಘೀ ಸೋಂಕಿಗೆ ಒಳಗಾಗುವವರಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆ ಆಗುವುದನ್ನು ಕಾಣುತ್ತೇವೆ. ಈ ಪ್ಲೇಟ್ಲೆಟ್ಗಳ ಸಂಖ್ಯೆ 50 ಸಾವಿರಕ್ಕೆ ಇಳಿದರೆ ರಕ್ತಸ್ರಾವ ಮುಂದುವರೆದರೆ ಪ್ಲೇಟ್ಲೆಟ್ ವರ್ಗಾವಣೆ ಮಾಡುವುದು ಉತ್ತಮ. ಒಂದು ವೇಳೆ ಈ ಪ್ಲೆಟ್ಲೆಟ್ ಸಂಖ್ಯೆ 20 ಸಾವಿರಕ್ಕೆ ಇಳಿದಾಗ ಮಿದುಳು ಮತ್ತು ದೇಹದ ಒಳಗಿನ ಅಂಗಾಂಗಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ.
ಡೆಂಘೀ ಲಕ್ಷಣಗಳು: ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳಿಂದ ಹರಡುವ ಈ ಡೆಂಘೀ ರೋಗದ ಲಕ್ಷಣ ನಾಲ್ಕರಿಂದ ಏಳು ದಿನವರೆಗೆ ಕಂಡುಬರುತ್ತದೆ. ಸಾಮಾನ್ಯ ಜ್ವರ, ಸ್ನಾಯು ಮತ್ತು ಬೆನ್ನು ನೋವು, ತೀವ್ರತರ ರೋಗ ಹೊಂದಿರುವವರಲ್ಲಿ ಡೆಂಗ್ಯೂ ಹೆಮರಾಜಿಕ್ ಅಥವಾ ಆಘಾತ ಸಿಂಡ್ರೋಮ್ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಡೆಂಘೀ ಪತ್ತೆಯ ಪರೀಕ್ಷೆ ಎನ್ಎಸ್1 ಅನ್ನು ಪಡೆಯಬಹುದು
ಇವರಿಗೆ ಅಪಾಯ: ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಡೆಂಘೀ ಅಪಾಯ ಹೊಂದಿರುತ್ತಾರೆ. ಗರ್ಭಿಣಿ ಮಹಿಳೆಯರು ಕೂಡ ಇದರ ಪರಿಣಾಮವನ್ನು ಹೊಂದಿರುತ್ತಾರೆ. ಮಧುಮೇಹ, ಹೃದಯ ಸಮಸ್ಯೆ ಮತ್ತು ಮೂತ್ರಪಿಂಡ ಸಮಸ್ಯೆ ಹೊಂದಿರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ.
ನೋವು ನಿವಾರಕಗಳ ದುರ್ಬಳಕೆ: ಡೆಂಘೀಯಿಂದ ಬಳಲುತ್ತಿರುವ ವ್ಯಕ್ತಿಯು ಯಾವುದೇ ವೈದ್ಯಕೀಯ ಮಾರ್ಗದರ್ಶನ ಇಲ್ಲದೇ, ನೋವು ನಿವಾರಕ ಬಳಕೆ ಮಾಡುವುದು ಕೂಡ ಅಪಾಯಕಾರಿ. ಇದರಿಂದ ತ್ವರಿತವಾಗಿ ಪ್ಲೇಟ್ಲೆಟ್ಗಳ ಸಂಖ್ಯೆ ಕ್ಷೀಣಿಸುತ್ತದೆ. ಇಂತಹ ಸಮಸ್ಯೆ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯುವುದು ಅವಶ್ಯ.
ತಡೆಗಟ್ಟುವ ಕ್ರಮ: ಸೊಳ್ಳೆ ನಿವಾರಕ ಮತ್ತು ನೆಟ್ಗಳ ಬಳಕೆಗೆ ಆದ್ಯತೆ ನೀಡಬೇಕಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪರಿಸರವನ್ನು ಶುದ್ದವಾಗಿಟ್ಟುಕೊಳ್ಳುವುದು ಅವಶ್ಯವಾಗಿದೆ. ಡೆಂಘೀ ರೋಗಕ್ಕೆ ಪ್ರಮುಖ ಕಾರಣ ಸೊಳ್ಳೆಗಳಾಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು. ಡೆಂಘೀ ಸೋಂಕಿನ ಚಿಕಿತ್ಸೆಗಳು ಸರಳವಾಗಿದ್ದು, ಜನರು ಹೆಚ್ಚಿನ ದ್ರವದ ಆಹಾರವನ್ನು ಸೇವಿಸುವುದು ಅವಶ್ಯವಾಗಿದೆ.
ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ.. ಆರೋಗ್ಯ ಇಲಾಖೆ ಸುತ್ತೋಲೆ