ಸಿಡ್ನಿ: ಪ್ರತಿನಿತ್ಯ ಡಾರ್ಕ್ ಟೀ ಸೇವಿಸುವುದರಿಂದ ರಕ್ತದ ಸಕ್ಕರೆ ನಿಯಂತ್ರಣವಾಗುತ್ತದೆ ಮತ್ತು ಮಧುಮೇಹದ ಅಪಾಯವೂ ಕಡಿಮೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಡಾರ್ಕ್ ಟೀ ಎಂಬುದು ಜೈವಿಕ ಹುದುಗುವ ಚಹಾದ ವಿಧ. ಹುದುಗುವಿಕೆ ಅನೇಕ ತಿಂಗಳಿನಿಂದ ಹಲವು ವರ್ಷಗಳವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಚಹಾದ ಎಲೆಗಳನ್ನು ಇಟ್ಟಿಗೆಯಾಕಾರದಲ್ಲಿ ಒತ್ತೊತ್ತಾಗಿ ಇರಿಸಬೇಕಿರುತ್ತದೆ.
ಈ ಸಂಶೋಧನೆಯನ್ನು ಜರ್ಮನಿಯ ಹ್ಯಾಂಬರ್ಗ್ನ ಯುರೋಪಿಯನ್ ಅಸೋಸಿಯೇಷನ್ ಫಾರ್ ದ ಸ್ಟಡಿ ಆಫ್ ಡಯಾಬೀಟಿಸ್‌ನಲ್ಲಿ (ಇಎಎಸ್ಡಿ) ಪ್ರಕಟಿಸಲಾಗಿದೆ. ಪ್ರತಿನಿತ್ಯ ಡಾರ್ಕ್ ಟೀ ಸೇವನೆಯಿಂದ ಶೇ 53ರಷ್ಟು ಕಡಿಮೆ ಪೂರ್ವ ಮಧುಮೇಹ ಅಪಾಯ ಹೊಂದುವ ಜತೆಗೆ ಟೈಪ್ 2 ಡಯಾಬಿಟೀಸ್ ಅಪಾಯ ಶೇ 47ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ತೋರಿಸಿದೆ.
ಟೀ ಸೇವನೆಯು ಮೂತ್ರದ ಮೂಲಕ ಗ್ಲೂಕೋಸ್ ಹೊರಹಾಕುತ್ತದೆ. ಪ್ರತಿರೋಧ ಮತ್ತು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದೊಂದಿಗೆ ರಕ್ಷಣಾತ್ಮಕ ಪರಿಣಾಮ ಒದಗಿಸುತ್ತದೆ ಎಂದು ಸಹ ಲೇಖಕ ಮತ್ತು ಆಸ್ಟ್ರೇಲಿಯಾದ ಅಡೆಲೈಡ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಟೊಂಗ್ಝಿ ವು ಹೇಳುತ್ತಾರೆ.
ಚೀನಾದ ಸೌತ್ಈಸ್ಟ್ ಯುನಿವರ್ಸಿಟಿಯೊಂದಿಗೆ ಈ ತಂಡ ಸಂಶೋಧನೆ ನಡೆಸಿದ್ದು, 1,923 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 20 ರಿಂದ 80 ವರ್ಷ ವಯೋಮಾನದವರು ಭಾಗಿಯಾಗಿದ್ದು, 436 ಮಂದಿ ಮಧುಮೇಹ ಹೊಂದಿದ್ದರೆ, 352 ಮಂದಿ ಪೂರ್ವ ಮಧುಮೇಹ ಮತ್ತು 1,135 ಮಂದಿ ಸಾಮಾನ್ಯ ರಕ್ತದ ಗ್ಲುಕೋಸ್ ಮಟ್ಟ ಹೊಂದಿದ್ದಾರೆ.
ರಕ್ತದ ಸಕ್ಕರೆ ಮಟ್ಟ ಮತ್ತು ಟೀ ನಡುವಿನ ಸಂಬಂಧ: ಅಧ್ಯಯನದ ಭಾಗಿದಾರರಲ್ಲಿ ಟೀ ಸೇವನೆ ಅಭ್ಯಾಸ ಹೊಂದಿಲ್ಲದವರು ಮತ್ತು ಒಂದೇ ರೀತಿಯ ಟೀ ಸೇವನೆ ಮಾಡುವ ಅಭ್ಯಾಸ ಹೊಂದಿರುವವರಿದ್ದರು. ಇವರಿಗೆ ವಿವಿಧ ರೀತಿಯ ಟೀ ಕುಡಿಯುವಂತೆ ಕೇಳಲಾಗಿದೆ. ತಂಡವು ಟೀ ಸೇವನೆಯ ಫ್ರೀಕ್ವೆನ್ಸಿ ಮತ್ತು ಪ್ರಕಾರದೊಂದಿಗೆ ಮೂತ್ರದಲ್ಲಿನ ಗ್ಲೂಕೋಸ್ ವಿಸರ್ಜನೆ ಹಾಗೂ ಗ್ಲೈಸೆಮಿಕ್ ಸ್ಥಿತಿಯ ನಡುವಿನ ಸಂಬಂಧವನ್ನು ಪರಿಶೀಲಿಸಿದೆ.
ಈ ವೇಳೆ ಪ್ರತಿನಿತ್ಯ ಟೀ ಸೇವನೆ ಮಾಡುವುದರಿಂದ ಮೂತ್ರದಲ್ಲಿ ಗ್ಲೂಕೋಸ್ ವಿಸರ್ಜನೆ ಮತ್ತು ಇನ್ಸುಲಿನ್ ಪ್ರತಿರೋಧದಲ್ಲಿ ಕಡಿತದ ನಡುವಿನ ಸಂಬಂಧ ಹೆಚ್ಚಾಗಿರುವುದು ಪತ್ತೆಯಾಗಿದೆ. ಟೀ ಸೇವನೆ ಮಾಡದವರಿಗಿಂತ ಕಪ್ಪು ಟೀ ಸೇವನೆ ಮಾಡುವವರಲ್ಲಿ ಶೇ 15ರಷ್ಟು ಪೂರ್ವ ಮಧುಮೇಹದ ಅಪಾಯ ಮತ್ತು ಶೇ 28ರಷ್ಟು ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗಿದೆ.
ಭರವಸೆಯ ಫಲಿತಾಂಶದ ಹೊರತಾಗಿಯೂ ಪ್ರತಿದಿನ ಚಹಾ ಕುಡಿಯುವುದರಿಂದ ಮೂತ್ರದ ಗ್ಲೂಕೋಸ್ ವಿಸರ್ಜನೆ ಹೆಚ್ಚಿಸುವ ಮೂಲಕ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ ಸುಧಾರಿಸುತ್ತದೆ ಎಂದು ಸಂಶೋಧನೆ ತಿಳಿಸುವುದಿಲ್ಲ. ಆದರೆ, ಇದು ಸಕ್ಕರೆ ನಿಯಂತ್ರಣದಲ್ಲಿ ಕೊಡುಗೆ ನೀಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಟೈಪ್ 2 ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಕೊಂಬುಚಾ ಜ್ಯೂಸ್ ಸಹಕಾರಿ; ಅಧ್ಯಯನ