ವಾಷಿಂಗ್ಟನ್: ಅಮೆರಿಕದಾದ್ಯಂತ ಕೋವಿಡ್ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಒಂದೇ ವಾರದಲ್ಲಿ ಶೇ 19ರಷ್ಟು ಹೆಚ್ಚಿದ್ದು, ಸಾವಿನ ಪ್ರಮಾಣ ಶೇ 21ರಷ್ಟಿದೆ. ಬೇಸಿಗೆ ಅವಧಿ ಬಳಿಕ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಇತ್ತೀಚಿನ ದತ್ತಾಂಶದ ಪ್ರಕಾರ ಕೋವಿಡ್ನಿಂದ ವಾರದಲ್ಲಿ ಆಸ್ಪತ್ರೆಗೆ ದಾಖಲಾದವರ ಪ್ರಮಾಣ 10,000ಕ್ಕೂ ಹೆಚ್ಚಿದೆ ಎಂದು ಎನ್ಪಿಆರ್ ವರದಿ ಮಾಡಿದೆ.
ಕೋವಿಡ್ ಪ್ರಕರಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಶಾಲೆ, ಆಸ್ಪತ್ರೆ ಮತ್ತು ಉದ್ಯಮ ಸ್ಥಳ ಸೇರಿದಂತೆ ಅಗತ್ಯ ಪ್ರದೇಶಗಳಲ್ಲಿ ಜನರಿಗೆ ಮತ್ತೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.
ಸಿಡಿಸಿ ನಿರ್ದೇಶಕ ಮಂಡಿ ಕೊಹೆನ್, ಲಸಿಕೆ ಪಡೆಯದವರಿಗೆ ಕೋವಿಡ್ ಇಂದಿಗೂ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದವರಲ್ಲಿ ಶೇ 70ರಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ನ ಎರಡು ಉಪತಳಿಗಳಾದ ಓಮಿಕ್ರಾನ್ ರೂಪಾಂತರ EG.5 (ಎರಿಸ್) ಅಮೆರಿಕದಲ್ಲಿ ಸಾಕಷ್ಟು ಪ್ರಬಲವಾಗಿದ್ದು, BA.2.86 ಇದೀಗ ಹರಡಲು ಶುರುವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದು, ಇದೆರಡರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ವಾರ ಸಿಡಿಸಿ ಕೂಡ BA.2.86 ಸೋಂಕು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಚ್ಚರಿಸಿತು. ಇದೀಗ ದೇಶಾದ್ಯಂತ ಕೆಲವು ಸಂಸ್ಥೆಗಳು ತಾತ್ಕಾಲಿಕವಾಗಿ ಮಾಸ್ಕ್ ಧರಿಸುವ ಆದೇಶವನ್ನು ಮತ್ತೆ ಜಾರಿಗೆ ತರಲು ಮುಂದಾಗಿವೆ ಎಂದು ವರದಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಹೆಸರಿಸಿದ EG.5 ಅಥವಾ ಎರಿಸ್ ಪ್ರಕರಣಗಳು ಜಾಗತಿಕವಾಗಿ ಹೆಚ್ಚಿವೆ. EG.5 ರೂಪಾಂತರ XBB.1.9.2. ವಂಶವಾಹಿನಿಗೆ ಸೇರಿದ್ದು XBB.1.5 ನಂತೆಯೇ ಅದೇ ಸ್ಪೈಕ್ ಅಮಿನೋ ಆಸಿಡ್ ಪ್ರೊಫೈಲ್ ಅನ್ನು ಹೊಂದಿದ್ದು, ಫೆಬ್ರವರಿ 17, 2023ರಂದು ಮೊದಲ ಬಾರಿಗೆ ವರದಿ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಹೆಚ್ಚಿನ EG.5 ಸಿಕ್ವೆನ್ಸ್ಗಳು ಚೀನಾದಲ್ಲಿ ಹೆಚ್ಚಿದೆ. ಆದಾಗ್ಯೂ ರೂಪಾಂತರಗಳು ಹೆಚ್ಚಿನ ಅಪಾಯದ ಪರಿಣಾಮವನ್ನು ಹೊಂದಿಲ್ಲ ಎಂದು ನಂಬಲಾಗಿದೆ. ಪ್ರಸ್ತುತ ಸೋಂಕಿನ ಕಣ್ಗಾವಲು ನಡೆಸುವ ಮೂಲಕ ಸೋಂಕಿನ ನಿಯಂತ್ರಣ ಕಡಿಮೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮಕ್ಕಳಲ್ಲಿನ ಹಠಾತ್ ನಡವಳಿಕೆಯನ್ನು ಕಡಿಮೆ ಮಾಡುತ್ತದೆ ನಿದ್ದೆ; ಅಧ್ಯಯನ