ರೋಗಲಕ್ಷಣ ಸಹಿತ ಅಥವಾ ಲಕ್ಷಣರಹಿತವಾಗಿ SARS-CoV-2 ಸೋಂಕಿಗೆ ತುತ್ತಾದ ಒಂಬತ್ತು ತಿಂಗಳವರೆಗೆ ಪ್ರತಿಕಾಯದ ಮಟ್ಟವು ಅಧಿಕವಾಗಿರುತ್ತದೆ ಎಂದು ಇಟಾಲಿಯನ್ ಪಟ್ಟಣದ ಪರೀಕ್ಷೆಯೊಂದು ತೋರಿಸುತ್ತದೆ. ಪಡುವಾ ವಿಶ್ವವಿದ್ಯಾಲಯ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು 2020ರ ಫೆಬ್ರವರಿ / ಮಾರ್ಚ್‌ನಲ್ಲಿ ಇಟಲಿಯ ವೋ ಪಟ್ಟಣದ ನಿವಾಸಿಗಳಲ್ಲಿ 85 ಪ್ರತಿಶತಕ್ಕಿಂತಲೂ ಹೆಚ್ಚು ಜನರನ್ನು ಪರೀಕ್ಷಿಸಿದ್ದಾರೆ.
ಕೋವಿಡ್-19ಗೆ ಕಾರಣವಾಗುವ SARS-CoV-2 ವೈರಸ್ ಸೋಂಕು ತಗುಲಿದೆಯೇ ಎಂದು ಪರೀಕ್ಷಿಸಿ, ಬಳಿಕ ಮೇ ಮತ್ತು ನವೆಂಬರ್ 2020ರಲ್ಲಿ ವೈರಸ್ ವಿರುದ್ಧದ ಪ್ರತಿಕಾಯಗಳಿಗಾಗಿ ಮತ್ತೆ ಪರೀಕ್ಷೆ ನಡೆಸಿದ್ದಾರೆ.
ಫೆಬ್ರವರಿ / ಮಾರ್ಚ್‌ನಲ್ಲಿ ಸೋಂಕಿಗೆ ತುತ್ತಾದ 98.8 ಪ್ರತಿಶತದಷ್ಟು ಜನರು ನವೆಂಬರ್ನಲ್ಲಿ ಪತ್ತೆ ಹಚ್ಚಬಹುದಾದ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ತಂಡವು ಕಂಡು ಹಿಡಿದಿದೆ. ಕೋವಿಡ್-19ನ ರೋಗಲಕ್ಷಣಗಳನ್ನು ಅನುಭವಿಸಿದ ಜನರು ಮತ್ತು ರೋಗಲಕ್ಷಣವಿಲ್ಲದ ರೋಗಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಕೂಡಾ ತಿಳಿದು ಬಂದಿದೆ.
ಸೋಂಕುಗಳ ನಡುವಣ ಪ್ರತಿಕಾಯದ ಮಟ್ಟಗಳಲ್ಲಿ ಭಿನ್ನತೆ
"ರೋಗಲಕ್ಷಣ ಮತ್ತು ಲಕ್ಷಣರಹಿತ ಸೋಂಕುಗಳ ನಡುವಿನ ಪ್ರತಿಕಾಯದ ಮಟ್ಟಗಳು ಭಿನ್ನವಾಗಿವೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳಿಲ್ಲ. ಪ್ರತಿರಕ್ಷಣಾ ಪ್ರತಿಕ್ರಿಯೆಯ ಬಲವು ರೋಗಲಕ್ಷಣಗಳು ಮತ್ತು ಸೋಂಕಿನ ತೀವ್ರತೆಯನ್ನು ಅವಲಂಬಿಸಿರುವುದಿಲ್ಲ ಎಂದು ಸೂಚಿಸುತ್ತದೆ. ನಮ್ಮ ಪರೀಕ್ಷೆಯು ಪ್ರತಿಕಾಯದ ಮಟ್ಟಗಳು ಬದಲಾಗುತ್ತವೆ, ಕೆಲವೊಮ್ಮೆ ಬಳಸಿದ ಪರೀಕ್ಷೆಯನ್ನು ಅವಲಂಬಿಸಿರುತ್ತದೆ ಎಂದು ತೋರಿಸುತ್ತದೆ." ಎಂದು ಎಂಆರ್‌ಸಿಯ ಜಾಗತಿಕ ಸಾಂಕ್ರಾಮಿಕ ರೋಗ ವಿಶ್ಲೇಷಣೆ ಮತ್ತು ಇಂಪೀರಿಯಲ್ ಸೆಂಟರ್ನಲ್ಲಿರುವ ಪ್ರಮುಖ ಲೇಖಕ ಡಾ. ಇಲಾರಿಯಾ ದೋರಿಗಟ್ಟಿ ಹೇಳಿದ್ದಾರೆ.
ವೋ ಜನಸಂಖ್ಯೆಯ 3.5 ಶೇಕಡಾ ಜನರು ವೈರಸ್‌ಗೆ ತುತ್ತಾಗಿದ್ದರು ಮತ್ತು ಹೆಚ್ಚಿನ ಸಂಖ್ಯೆಯ ಜನರು ಲಕ್ಷಣರಹಿತ ಸೋಂಕು ಹೊಂದಿದ್ದರು. ಮನೆಯ ಇತರ ಸದಸ್ಯರಿಗೆ ಸೋಂಕಿತ ವ್ಯಕ್ತಿ ಸೋಂಕು ಹರಡುವ ಸಾಧ್ಯತೆ ಎಷ್ಟಿದೆ ಎಂದು ಅಂದಾಜು ಮಾಡಲು ತಂಡವು ಮನೆಯ ಸದಸ್ಯರ ಸೋಂಕಿನ ಸ್ಥಿತಿಯನ್ನು ಸಹ ತನಿಖೆ ಮಾಡಿತು. SARS-CoV-2 ಸೋಂಕಿತ ವ್ಯಕ್ತಿಯು ಕುಟುಂಬದ ಸದಸ್ಯರಿಗೆ ಸೋಂಕು ಹರಡಿಸುವ ಸಂಭವನೀಯತೆ 4ರಲ್ಲಿ 1 ಇದೆ ಎಂಬುದು ಅಧ್ಯಯನದ ವೇಳೆ ಕಂಡು ಬಂದಿದೆ.