ಬೆಂಗಳೂರು: ಮಳೆಗಾಲದಲ್ಲಿ ಜ್ವರ, ಡೆಂಗ್ಯೂ ಸೇರಿದಂತೆ ಕಣ್ಣಿನ ಸೋಂಕಿನ ಸಮಸ್ಯೆ ಕೂಡ ಹೆಚ್ಚು. ಭಾರಿ ಮಳೆ ಮತ್ತು ಪ್ರವಾಹ ವಾತಾವರಣಗಳು ಇದಕ್ಕೆ ಪ್ರಮುಖ ಕಾರಣಗಳು. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲವಾಗುವ ಪರಿಸ್ಥಿತಿ, ಹವಾಮಾನ ಬದಲಾವಣೆ ಮತ್ತು ಪ್ರವಾಹ, ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚುತ್ತದೆ.
ರಸ್ತೆಯಲ್ಲಿ ಮಳೆಯ ಕೊಳಚೆ ನೀರುಗಳ ಮೇಲೆ ವಾಹನಗಳು ಸವಾರಿ ಮಾಡಿದಾಗ ಅದರಿಂದ ಮೈಕ್ರೋಡ್ರಾಪ್ಸ್ ಮೂಲಕ ಸೋಂಕುಗಳು ಪರಿಸರದಲ್ಲಿ ಹರಡುವುದರಿಂದ ಅದೂ ಕೂಡ ಕಣ್ಣಿನ ಸಮಸ್ಯೆ ತಂದಿಡುತ್ತದೆ. ಇದರಿಂದ ಕಣ್ಣಿನ ಊತ, ಕೆರೆತ, ನೀರು ಬರುವಿಕೆ, ಪಿಸುರು, ಕಣ್ಣು ರೆಪ್ಪೆ ಊದಿಕೊಳ್ಳುವುದು, ಕೆಂಪಾಗುವುದು ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರ ಭೇಟಿ ಅವಶ್ಯಕ.
ಪ್ರವಾಹ, ಅಧಿಕ ಮಳೆಯಲ್ಲಿ ಅನೇಕ ಬಾರಿ ಮಕ್ಕಳು ಕೊಳಚೆ ನೀರು ಮುಟ್ಟಿ ಕಣ್ಣೊರೆಸಿಕೊಳ್ಳುತ್ತಾರೆ. ಅನೇಕ ಬಾರಿ ಶುಚಿತ್ವವನ್ನು ನಿರ್ವಹಣೆ ಮಾಡುವುದು ಕೂಡ ಸವಾಲೇ. ಇದರ ಹೊರತಾಗಿ ಮಾನ್ಸೂನ್ನಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯುವ ಪ್ರಮಾಣ ಜಾಸ್ತಿಯಾಗಿದ್ದು, ಸೋಂಕು ತಗಲುತ್ತದೆ.
ಕಾಂಜೆಕ್ಟಿವಿಟಿ/ ಗುಲಾಬಿ ಕಣ್ಣು: ಕಣ್ಣಿನ ಬಿಳಿ ಕೆಂಪಾಗುವುದು, ಉರಿ ಅಥವಾ ನೋವು, ಕಣ್ಣಿನಲ್ಲಿ ನಿರಂತರ ನೀರು ಹೊರಬರುವುದು,ಕಣ್ಣು ಊದಿಕೊಳ್ಳುವುದು ಗುಲಾಬಿ ಕಣ್ಣಿನ ಲಕ್ಷಣಗಳು. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತಿದೆ. ಜೊತೆಗೆ, ಪ್ರದೂಷಣೆಯೂ ಕೂಡ ನಿಮ್ಮ ಕಣ್ಣಿನಲ್ಲಿ ಸೋಂಕು ಮೂಡಲು ಕಾರಣವಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಕಣ್ಣೀನ ರಕ್ಷಣೆಗೆ ಆದ್ಯತೆ ನೀಡಿ
![ಮುನ್ನೆಚ್ಚರಿಕೆವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ](https://etvbharatimages.akamaized.net/etvbharat/prod-images/27-07-2023/eye-monsoon_2707newsroom_1690445776_323.jpeg)
ಸ್ಟೈ: ಕಣ್ಣಿನ ರೆಪ್ಪೆ ಬುಡದಲ್ಲಿ ಸಣ್ಣ ಗ್ರಂಥಿಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳುತ್ತದೆ. ಮದ್ರಾಸ್ ಕಣ್ಣಿನಂತೆ ಊತ ಸಂಭವಿಸುತ್ತದೆ. ಭರಿಸಲಾಗದ ನೋವು, ಊತ ಉಂಟಾಗುತ್ತದೆ.
ಡ್ರೈ ಕಣ್ಣು: ಮಳೆಗಾಲದಲ್ಲಿ ಸಾಮಾನ್ಯವಾಗಿ ಕಣ್ಣಿನ ಶುಷ್ಕತೆ ಹೆಚ್ಚಾಗಿ ಕಾಡುತ್ತದೆ. ಮಾಶ್ಚರೈಸರ್ ಕೊರತೆ ಮತ್ತು ಕಣ್ಣೀರಿನ ಕೊರತೆಯಿಂದ ಇದು ಎದುರಾಗುತ್ತದೆ. ಈ ಪರಿಸ್ಥಿತಿಯೂ ಮಳೆಗಾಲದಲ್ಲಿ ಸಾಮಾನ್ಯ.
ಕಾರ್ನಿಯಲ್ ಯುಕ್ಲೆರ್: ಕಾರ್ನಿಯಾದ ಮೇಲೆ ಗಾಯಗಳಾಗುತ್ತದೆ. ಇದು ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಅಥವಾ ಪರಾವಲಂಬಿಗಳಿಂದ ಆಗಬಹುದು. ಈ ಪರಿಸ್ಥಿತಿಯಲ್ಲೂ ಕಣ್ಣಿನ ನೋವು ಕಾಣಿಸುವ ಜೊತೆಗೆ ಕೆಂಪಾಗುವಂತೆ ಮಾಡುತ್ತದೆ.
ಕೆರೆಟೈಟಿಸ್: ಕಾರ್ನಿಯಾದ ಈ ಸೋಂಕು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ಗಳ ಅನೈರ್ಮಲ್ಯದಿಂದಾಗಿ ಹೆಚ್ಚು. ಲೆನ್ಸ್ ಬಳಕೆ ಮಾಡುವವರಲ್ಲಿ ಈ ಸೋಂಕು ಬಾಧಿಸುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಹೋದಲ್ಲಿ ಅಂಧತ್ವಕ್ಕೂ ಕಾರಣವಾಗಬಹುದು.
ಮುನ್ನೆಚ್ಚರಿಕೆ ಹೇಗೆ?: ಜನನಿಬಿಡ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು. ಸೋಪ್ನಲ್ಲಿ ಆಗಾಗ್ಗೆ ಕೈಗಳನ್ನು ತೊಳೆಯಬೇಕು. ಪ್ರತ್ಯೇಕ ಟವೆಲ್, ತಲೆ ದಿಂಬುಗಳನ್ನು ಬಳಕೆ ಮಾಡುವುದು ಸೂಕ್ತ.
ಪ್ರತಿನಿತ್ಯ ಸುರಿಯುತ್ತಿರುವ ಮಳೆಯಲ್ಲಿ ನೆನೆಯುವುದನ್ನು ನಿಯಂತ್ರಿಸಿ, ಸಾಧ್ಯವಾದಷ್ಟು, ಶುದ್ಧವಾದ ಬಟ್ಟೆಗಳಿಂದಲೇ ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಿ, ಬೆಚ್ಚಗಿನ ವಾತಾವರಣದಲ್ಲಿ ಇರಲು ಪ್ರಯತ್ನಿಸಿ, ಕಾಂಟಾಕ್ಟ್ ಲೆಸ್ ಬಳಸಲು ಪ್ರಾರಂಭಿಸಿ, ಇದರಿಂದ ಕಣ್ಣಿನ ಸೋಂಕು ಬರುವುದನ್ನು ತಡೆಯಬಹುದು. ಮುಖ್ಯವಾಗಿ, ಧೂಳಿಗೆ ಕಣ್ಣನ್ನು ಒಡ್ಡದಿರಿ. ಇದರಿಂದ ಕಣ್ಣಿನ ಸೋಂಕು ಸುಲಭವಾಗಿ ಬರಬಹುದು. ಮಕ್ಕಳಿಗೂ ಸಹ ಹೆಚ್ಚು ಸ್ವಚ್ಛವಾಗಿರಲು ಸೂಚಿಸಿ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆ ನೇತ್ರ ತಜ್ಞೆ ಡಾ. ರೇಖಾ ಬಿ. ಪಾಟೀಲ್.
ಇದನ್ನೂ ಓದಿ: Pink Eye: ಮಳೆಗಾಲದಲ್ಲಿ ಹೆಚ್ಚಾಗ್ತಿದೆ ಗುಲಾಬಿ ಕಣ್ಣಿನ ಸಮಸ್ಯೆ; ಏನಿದರ ಲಕ್ಷಣ? ಪರಿಹಾರ ಹೇಗೆ?