ಲಂಡನ್: ಜಗತ್ತನ್ನು ಕಾಡುತ್ತಿರುವ ಕ್ಯಾನ್ಸರ್ಗೆ ಅಂತ್ಯ ಹಾಡುವ ದಿನ ದೂರವಿಲ್ಲ. ಮುಂದಿನ ಎಂಟು ವರ್ಷಗಳ ಒಳಗೆ ಇದಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಪ್ರಸಿದ್ಧ ಔಷಧೀಯ ಸಂಶೋಧನಾ ಸಂಸ್ಥೆ 'ಬಯೋಎನ್‌ಟೆಕ್' ಸಂಸ್ಥಾಪಕರಾದ ಪ್ರೊ.ಓಜ್ಲೆಮ್ ತುರೇಸಿ ಮತ್ತು ಪ್ರೊ.ಉಗುರು ಸಾಹಿನ್ ಹೇಳಿದ್ದಾರೆ.
ಈ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ದಂಪತಿ,ಈ ಲಸಿಕೆಯ ಸಂಶೋಧನೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ತಂಡವು ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವಾಗ ನಡೆದ ಬೆಳವಣಿಗೆಗಳು ಕ್ಯಾನ್ಸರ್ ಲಸಿಕೆಯನ್ನು ವಿನ್ಯಾಸಗೊಳಿಸಲು ಕಾರಣವಾಯಿತು. ಇದನ್ನು mRNA ತಂತ್ರಜ್ಞಾನದಿಂದ ಕೂಡ ತಯಾರಿಸಲಾಗುತ್ತದೆ.
ಇದನ್ನೂ ಓದಿ: ಕ್ಯಾನ್ಸರ್ನಿಂದ ಮುಕ್ತಿ ಬೇಕೆ..? ಯೌವನದಲ್ಲೇ ಇವುಗಳ ಬಗ್ಗೆ ನಿಯಂತ್ರಣವಿರಲಿ
ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಈ ಲಸಿಕೆ, ಕ್ಯಾನ್ಸರ್ ಕೋಶಗಳ ಕುರುಹುಗಳನ್ನು ಗುರುತಿಸುವುದು ಮತ್ತು ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ಹಾಗೂ ರೋಗನಿರೋಧಕ ಶಕ್ತಿ ಒಂದೇ ಆಗಿರುವುದಿಲ್ಲ. ಹಾಗಾಗಿ ಈ ಲಸಿಕೆಯನ್ನು 'ವೈಯಕ್ತಿಕ ಆಧಾರ ಲಸಿಕೆ ವ್ಯವಸ್ಥೆ'ಯಲ್ಲಿ (Individual Aadhar Vaccine System) ವಿನ್ಯಾಸಗೊಳಿಸಲು ನಾವು ಯೋಚಿಸಿದ್ದೇವೆ ಎಂದಿದ್ದಾರೆ.
ಈ ಲಸಿಕೆಯು ಶಸ್ತ್ರಚಿಕಿತ್ಸೆ ನಂತರ ಕ್ಯಾನ್ಸರ್ ರೋಗಿಗಳಲ್ಲಿ ಉಳಿದಿರುವ ಯಾವುದೇ ರೀತಿಯ ಗೆಡ್ಡೆಯ ಕೋಶಗಳನ್ನು ನಾಶಮಾಡಲು ಟಿ-ಕೋಶಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಲಸಿಕೆಯ ಪರಿಣಾಮಕಾರಿತ್ವದಲ್ಲಿ ನಮಗೆ ಬಲವಾದ ವಿಶ್ವಾಸವಿದೆ. ಇದು 2030ರ ಹೊತ್ತಿಗೆ ಲಭ್ಯವಾಗಲಿದೆ ಎಂದು ತುರೇಸಿ ಮತ್ತು ಸಾಹಿನ್ ಹೇಳಿದ್ದಾರೆ.