ನಿತ್ಯ ಬಹಳಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅದಕ್ಕೆ ಮುಖ್ಯ ಕಾರಣ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುವ ಕೊಬ್ಬು. ಕೆಟ್ಟ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಹಾಗಾಗಿ, ಉತ್ತಮ ಆರೋಗ್ಯ ಹೊಂದಲು ಕೊಲೆಸ್ಟ್ರಾಲ್ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದಕ್ಕೆ ಆಯುರ್ವೇದಲ್ಲಿ ಕೆಲ ಸಲಹೆಗಳಿವೆ.
ಕೊಬ್ಬಿನಾಂಶ ಹೊಂದಿರುವ ಆಹಾರಗಳ ಅತಿಯಾದ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ. ಪೌಷ್ಟಿಕಾಂಶದ ಬದಲಿಗೆ ಅನಾರೋಗ್ಯಕರ ಜಂಕ್ ಫುಡ್ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಸಂಭವಿಸುವ ಅಪಾಯ ಅಧಿಕ. ಈ ಕೆಟ್ಟ ಬೊಜ್ಜು ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಕೊಬ್ಬು ಕಡಿಮೆ ಮಾಡಬಹುದು.
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ನಮ್ಮ ಸಾಂಪ್ರದಾಯಿಕ ಆಯುರ್ವೇದದಲ್ಲಿ ಕೆಲವು ಪರಿಹಾರಗಳಿವೆ. ನೀವು ಅವುಗಳನ್ನು ಅನುಸರಿಸಿದರೆ ಬೊಜ್ಜು ಕಡಿಮೆ ಮಾಡಿಕೊಳ್ಳುವುದಲ್ಲದೇ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ, ಆಯುರ್ವೇದದ ಸಲಹೆಗಳು ಯಾವುವು? ಎಂದು ನೋಡೋದಾದರೆ,
ಜೇನು ತುಪ್ಪ: ಕೊಲೆಸ್ಟ್ರಾಲ್ ಕಡಿತಕ್ಕೆ ಜೇನುತುಪ್ಪ ರಾಮಬಾಣ. ಜೇನು ತುಪ್ಪ ಬಳಕೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಿಗೆ ಪ್ರವೇಶಿಸದಂತೆ ತಡೆಯುತ್ತದೆ. ನಿತ್ಯ ಒಂದು ಚಮಚ ಜೇನುತುಪ್ಪ, ನಿಂಬೆ ರಸ ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಕಪ್ ಬಿಸಿ ನೀರಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.
ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉಪಕಾರಿ. ಆರರಿಂದ ಎಂಟು ಎಸಳು ಬೆಳ್ಳುಳ್ಳಿ ಪುಡಿಮಾಡಿ ಅದನ್ನು 50 ಮಿಲಿ ಹಾಲು ಮತ್ತು 200 ಮಿಲಿ ನೀರಿನೊಂದಿಗೆ ಸೇರಿಸಿ ಕುದಿಸಿ ಕುಡಿಯುವುದು ಉತ್ತಮ.
ಅರಿಶಿಣ : ಅರಿಶಿಣವು ನಮ್ಮ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಐರನ್, ಕ್ಯಾಲ್ಸಿಯಂ, ಡಯೆಟರಿ ಫೈಬರ್, ಸೋಡಿಯಂ, ಪ್ರೊಟೀನ್, ಸತು, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೆಂತ್ಯೆ : ಮೆಂತ್ಯೆ ಕಾಳುಗಳಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಮೆಂತ್ಯೆ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ : Bad cholesterol: ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತವೆ ಈ ಡ್ರೈ -ಫ್ರುಟ್ಸ್
ಸೇಬು : ಸೇಬುಹಣ್ಣು ನೈಸರ್ಗಿಕವಾಗಿ ರೋಗ ನಿರೋಧಕಗಳನ್ನು ಹೊಂದಿದೆ. ಜೊತೆಗೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ನಿತ್ಯ ಸೇಬು ಸೇವಿಸಿದರೆ, ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳು ಮತ್ತು ಹೃದಯವು ಆರೋಗ್ಯಕರವಾಗಿರುತ್ತದೆ. ಆ್ಯಪಲ್ ಅನ್ನು ಸಿಪ್ಪೆ ಸಮೇತ ತಿನ್ನಬೇಕು. ಏಕೆಂದರೆ ಇದು ಫೈಬರ್ ಅನ್ನು ಹೊಂದಿರುತ್ತದೆ.
ಬೀಟ್ರೂಟ್ ಮತ್ತು ಪಾಲಕ್ ಸೊಪ್ಪು : ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬೀಟ್ರೂಟ್ ಉಪಯುಕ್ತ. ಆರೋಗ್ಯವಾಗಿರಲು ಬೀಟ್ರೂಟ್ ಅನ್ನು ಜ್ಯೂಸ್ ಮಾಡಿ ಕುಡಿಯಿರಿ. ಹಾಗೆಯೇ, ಪಾಲಕ್ ಸೊಪ್ಪು ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆ ತಡೆಯುತ್ತದೆ. ಇದನ್ನು ಸಲಾಡ್‌ನಂತೆ ತೆಗೆದುಕೊಳ್ಳುವುದು ಉತ್ತಮ.
ಆ್ಯಪಲ್ ಸೈಡರ್ ವಿನೆಗರ್ : ಆ್ಯಪಲ್ ಸೈಡರ್ ವಿನೆಗರ್ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.
ಸೂಚನೆ: ( ಇದು ಸಾಮಾನ್ಯ ಮಾಹಿತಿಯಾಗಿದ್ದು, ಹೆಚ್ಚಿನ ವಿವರಗಳಿಗಾಗಿ ತಜ್ಞ ವೈದ್ಯರನ್ನ ಭೇಟಿ ಮಾಡಿ)