ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಅಥವಾ ಮೂತ್ರಪಿಂಡ ವೈಫಲ್ಯವನ್ನು ಪತ್ತೆಹಚ್ಚುವುದು ಸ್ವಲ್ಪ ಕಷ್ಟವೇ ಸರಿ. ಆದಾಗ್ಯೂ, ಕಾಯಿಲೆಯ ಬಗ್ಗೆ ಅರಿವು ಹೆಚ್ಚಾದರೆ ರೋಗದ ಕುರಿತು ಗಮನ ಹರಿಸಲು, ಬೇಗನೆ ಪತ್ತೆ ಹಚ್ಚಲು ಹಾಗೂ ಚಿಕಿತ್ಸೆ ಒದಗಿಸಲು, ಚೆನ್ನಾಗಿ ಆರೈಕೆ ಮಾಡಲು ಮತ್ತು ತಡೆಗಟ್ಟುವ ಸಾಧ್ಯವಾಗುತ್ತದೆ. ನೀವು ಆರಂಭಿಕ ಹಂತಗಳಲ್ಲಿ ರೋಗಗಳನ್ನು ಕಂಡುಕೊಂಡರೆ, ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ತಜ್ಞರು ಸೂಚಿಸಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 850 ಮಿಲಿಯನ್ ವ್ಯಕ್ತಿಗಳು ಹಲವಾರು ಕಾರಣಗಳಿಂದ ಮೂತ್ರಪಿಂಡದ ಕಾಯಿಲೆಗಳನ್ನು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಮೂತ್ರಪಿಂಡ ವೈಫಲ್ಯಕ್ಕೆ ಎರಡು ಪ್ರಮುಖ ಕಾರಣಗಳೆಂದರೆ ಮಧುಮೇಹ ಮತ್ತು ರಕ್ತದೊತ್ತಡ.
ಮೂತ್ರಪಿಂಡ ಕಸಿ ಮತ್ತು ಮೂತ್ರಪಿಂಡದ ಡಯಾಲಿಸಿಸ್ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಎರಡು ಸಾಮಾನ್ಯ ಚಿಕಿತ್ಸೆಗಳಾಗಿದ್ದರೂ ಕೂಡ ಅವುಗಳು ತಮ್ಮದೇ ಆದ ಅಡ್ಡ ಪರಿಣಾಮಗಳನ್ನು ಹೊಂದಿವೆ. ಕಸಿ ಮಾಡುವ ಸಮಯದಲ್ಲಿ ಮೂತ್ರಪಿಂಡವನ್ನು ರೋಗಿಯ ದೇಹವು ತಿರಸ್ಕರಿಸಬಹುದು ಹಾಗೆಯೇ, ಡಯಾಲಿಸಿಸ್ ಸಮಯದಲ್ಲಿ ಸೋಂಕಿನ ಸಾಧ್ಯತೆಗಳು ದಟ್ಟವಾಗಿರುತ್ತವೆ. ಹಾಗಾಗಿ, ಮೂತ್ರಪಿಂಡದ ಕಾಯಿಲೆಗಳಿಗೆ ನೈಸರ್ಗಿಕ ಮತ್ತು ಸುರಕ್ಷಿತ ಚಿಕಿತ್ಸೆ ಅಂದ್ರೆ ಆಯುರ್ವೇದ ಒಂದು ರೀತಿಯಲ್ಲಿ ಉತ್ತಮ ಪರಿಹಾರ ಎನ್ನಬಹುದಾಗಿದೆ.
ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಮತ್ತು ಪುನರ್ಯೌವನಗೊಳಿಸುವುದರ ಜೊತೆಗೆ ಮೂತ್ರಪಿಂಡದ ವ್ಯವಸ್ಥೆಯನ್ನು ಬಲಪಡಿಸಲು ಕೆಲವು ಆಯುರ್ವೇದ ಸಲಹೆಗಳು ಇಲ್ಲಿವೆ:
ಹೈಡ್ರೇಟೆಡ್ ಆಗಿರಿ : ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸುವ ಮೂಲಕ ಮೂತ್ರಪಿಂಡದ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಏಕೆಂದರೆ, ದ್ರವ ಪದಾರ್ಥಗಳು ದೇಹದಿಂದ ಸೋಡಿಯಂ, ಯೂರಿಯಾ ಮತ್ತು ವಿಷವನ್ನು ತೆರವುಗೊಳಿಸಲು ಮೂತ್ರಪಿಂಡಗಳಿಗೆ ಸಹಾಯ ಮಾಡುತ್ತದೆ. ಅದರೂ ಅತಿಯಾದ ದ್ರವಗಳ ಸೇವನೆ ಅನಾರೋಗ್ಯಕರ. ದ್ರವಗಳ ಅತಿಯಾದ ಸೇವನೆ ದೇಹದ ಮೇಲೆ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು, ಹೆಚ್ಚುವರಿ ವಿಷವನ್ನು ಫಿಲ್ಟರ್ ಮಾಡುವ ಮೂಲಕ ಮೂತ್ರಪಿಂಡಗಳು ಅತಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ದಿನಕ್ಕೆ ಕನಿಷ್ಠ 1.5 ಲೀಟರ್ ನೀರಿನ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುವುದು ತಜ್ಞರ ಸಲಹೆ.
ಕಿಡ್ನಿ ಡಿಟಾಕ್ಸ್ : ಆಯುರ್ವೇದದ ಪ್ರಕಾರ, ಕೆಲವು ಶಕ್ತಿಶಾಲಿ ಆಯುರ್ವೇದ ಗಿಡಮೂಲಿಕೆಗಳ ಸಹಾಯದಿಂದ ಮೂತ್ರಪಿಂಡಗಳ ಆವರ್ತಕ ಶುದ್ಧೀಕರಣವನ್ನು ಮಾಡಬಹುದು. ಪಾರ್ಸ್ಲಿ, ಗೋಕ್ಷುರ, ವರುಣ, ಕೊಮ್ಮೆಗಿಡ ಅಥವಾ ಪುನರ್‌ನವ ಮತ್ತು ಸೆಲರಿಯಂತಹ ಮೂತ್ರವರ್ಧಕ ಗಿಡಮೂಲಿಕೆಗಳು ದೇಹದಲ್ಲಿನ ವಿಷದ ಮಟ್ಟವನ್ನು ಕಡಿಮೆ ಮಾಡಿ, ಮೂತ್ರಪಿಂಡಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಗಿಡಮೂಲಿಕೆಗಳನ್ನು 2 ಕಪ್ ನೀರಿನಲ್ಲಿ 15 ನಿಮಿಷಗಳ ಕಾಲ ಕುದಿಸಿ ಸೇವಿಸುವುದು ಉತ್ತಮ.
ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವನೆ : ನಿಮ್ಮ ಮೂತ್ರಪಿಂಡಗಳು ಉತ್ತಮ ಆರೋಗ್ಯ ಹೊಂದಲು ಮತ್ತು ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳಲು ನಾರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಹೆಚ್ಚಾಗಿ, ಸಂಸ್ಕರಿಸಿದ ಆಹಾರ ಮತ್ತು ಅತಿಯಾದ ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಒಳಿತು.
ಹೆಚ್ಚಿನ ಪ್ರೊಟೀನ್ ಆಹಾರದ ಬದಲಿಗೆ, ಕಡಿಮೆ ಕ್ಯಾಲೋರಿ ಆಹಾರವನ್ನು ಆರಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ. ಏಕೆಂದರೆ, ಹೆಚ್ಚಿನ ಪ್ರೊಟೀನ್ ಭರಿತ ಆಹಾರಗಳು ಮೊದಲನೆಯದಾಗಿ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಿಸುತ್ತವೆ. ದ್ರಾಕ್ಷಿಗಳು, ಸೇಬು, ಬೆರಿಹಣ್ಣು, ಬೆಳ್ಳುಳ್ಳಿ, ವಿಟಮಿನ್ ಸಿ ಹೊಂದಿರುವ ಹಣ್ಣುಗಳು ಮತ್ತು ಎಲೆಕೋಸುಗಳಂತಹ ಸೂಪರ್‌ಫುಡ್‌ಗಳನ್ನು ಸೇವಿಸುವುದು ಆರೋಗ್ಯಕರ.
ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಿ : ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಜೊತೆಗೆ ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಹಾನಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಹಾನಿಗೆ ಸಾಮಾನ್ಯ ಕಾರಣವಾಗಿದೆ. ಇದು ಹೆಚ್ಚಾಗಿ ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ ಸಂಬಂಧಿಸಿದೆ. ಹಾಗಾಗಿ, ನಿಮ್ಮ ಮೂತ್ರಪಿಂಡಗಳ ಸ್ಥಿತಿಯನ್ನು ತಿಳಿದುಕೊಳ್ಳಲು ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟದ ತಪಾಸಣೆ ನಡೆಸಿ, ಮೂತ್ರಪಿಂಡದ ಹಾನಿಯನ್ನು ನಿಯಂತ್ರಿಸಿಕೊಳ್ಳಬಹುದು.
ಇದನ್ನೂ ಓದಿ : ವಿಜ್ಞಾನಿಗಳಿಂದ ಕೃತಕ ಮೂತ್ರಪಿಂಡದ ವಿನ್ಯಾಸ; ಹೇಗಿದೆ ಇದರ ಕಾರ್ಯ ವೈಖರಿ?
ಆಯುರ್ವೇದವು ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸಲು ಅಸಾಧಾರಣ ಮಾರ್ಗವಾಗಿದೆ. ಉದಾಹರಣೆಗೆ, ಆಯುರ್ವೇದ ಗಿಡಮೂಲಿಕೆಗಳು ಮತ್ತು ಚಿಕಿತ್ಸೆಯು ದೇಹದಲ್ಲಿನ ಅಸಮತೋಲನವನ್ನು ಸರಿಪಡಿಸುತ್ತದೆ ಮತ್ತು ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿರುವ ಅಲೋಪತಿ ಔಷಧಿಗಳ ವಿರುದ್ಧ ಮೂತ್ರಪಿಂಡಗಳನ್ನು ನೈಸರ್ಗಿಕ ರೀತಿಯಲ್ಲಿ ಗುಣಪಡಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಆಯುರ್ವೇದ ಚಿಕಿತ್ಸೆಯು ಮೂತ್ರಪಿಂಡದ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಡಯಾಲಿಸಿಸ್ ಅನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.