ಹೈದರಾಬಾದ್: ''ನಾನು ಹೆಚ್ಚು ಕುಡಿಯುವುದಿಲ್ಲ... ದಿನಕ್ಕೆ ಒಂದು ಪೆಗ್ ಅಷ್ಟೆ... ಅದೂ ಒಮ್ಮೊಮ್ಮೆ ಮಾತ್ರ... ದುಬಾರಿ ಬೆಲೆಯ ಮದ್ಯ ಸೇವಿಸುತ್ತೇನೆ... ಅದು ವಿದೇಶಿ ಸರಕು ಕುಡಿಯುತ್ತೇನೆ... ಕುಡಿತಾ ಕುಡಿತಾ ಉತ್ತಮ ಆಹಾರ ಸೇವಿಸುತ್ತೇನೆ.''...ಮದ್ಯಪಾನಿಗಳು ಹೀಗೆ ನಾನಾ ರೀತಿಯಲ್ಲಿ ಹೇಳಿಕೊಂಡು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದು ವಾಡಿಕೆ.
ಆದರೆ, ಇತ್ತೀಚೆಗೆ ಆಕ್ಸ್‌ಫರ್ಡ್ ಪಾಪ್ಯುಲೇಶನ್ ಹೆಲ್ತ್ ಮತ್ತು ಪೀಕಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಸುಮಾರು 5 ಲಕ್ಷ ಮದ್ಯಪಾನ ಮಾಡುವವರ ಮೇಲೆ ಸುದೀರ್ಘ ಸಂಶೋಧನೆ ನಡೆಸಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಆಲ್ಕೋಹಾಲ್ ಸೇವನೆ ಮಾಡುವುದರಿಂದ 28 ಅಪಾಯಕಾರಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ವರದಿ ಮಾಡಿತ್ತು.
ಆದರೆ, ಇತ್ತೀಚಿನ ಸಂಶೋಧನೆ ಹೇಳುವುದೇ ಬೇರೆ. ಮದ್ಯ ಸೇವನೆ ಮಾಡುವುದರಿಂದ ನೇರವಾಗಿ 61 ಅಪಾಯಕಾರಿ ಕಾಯಿಲೆಗಳಿಗೆ ಮತ್ತು 206 ಕಾಯಿಲೆಗಳಿಗೆ ಪರೋಕ್ಷವಾಗಿ ತುತ್ತಾಗಬೇಕಾಗುತ್ತದೆ ಎಂದು ಆಘಾತಕಾರಿ ವರದಿ ಬಿಡುಗಡೆ ಮಾಡಿದೆ. ನೀವು ಸ್ವಲ್ಪ ಕುಡಿದರೂ ಅಷ್ಟೇ, ಒಮ್ಮೊಮ್ಮೆ ಕುಡಿದರೂ ಅಷ್ಟೇ, ದೇಶ- ವಿದೇಶದ ಯಾವುದೇ ಸರಕು ಕುಡಿದರೂ ಅಷ್ಟೇ! ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದೇ ಇರದು ಎಂದು ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಬಹಿರಂಗಪಡಿಸಿದ್ದಾರೆ.
ಮದ್ಯ ಸೇವನೆಯಿಂದ ಪ್ರತಿ ವರ್ಷ 30 ಲಕ್ಷ ಜನರು ಅಸುನೀಗುತ್ತಿದ್ದಾರೆ. ಕೋಟಿಗಟ್ಟಲೆ ಅಂಗವಿಕಲರಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದನ್ನು ನೇಚರ್ ಮೆಡಿಸಿನ್ ಜರ್ನಲ್‌ನಲ್ಲಿಯೂ ಪ್ರಕಟಿಸಲಾಗಿದೆ. ಚೀನಾದಲ್ಲಿ ಮದ್ಯಪಾನ ಮಾಡುವ ವಿವಿಧ ವಯಸ್ಸಿನ 5,12,724 ಜನರ ಮೇಲೆ ಐದು ವರ್ಷಗಳ ಕಾಲ ಈ ಅಧ್ಯಯನ ನಡೆಸಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾದ ಒಂದು ಲಕ್ಷಕ್ಕೂ ಹೆಚ್ಚು ಮದ್ಯ ವ್ಯಸನಿಗಳ ಆರೋಗ್ಯ ಸಮಸ್ಯೆಗಳನ್ನು ಸಹ ಪರಿಶೀಲಿಸಲಾಗಿದೆ. ಅವರ ಜೀವನಶೈಲಿ, ನಡವಳಿಕೆ ಮತ್ತು ಮದ್ಯ ಸೇವನೆಗೆ ಕಾರಣ, ಮಾನಸಿಕ ಒತ್ತಡ ಮತ್ತು ಖಿನ್ನತೆ ಸೇರಿದಂತೆ ಎಲ್ಲ ಆಯಾಮಗಳಿಂದ ಸಂಪೂರ್ಣವಾಗಿ ಅಭ್ಯಾಸ ಮಾಡಲಾಗಿದೆ. ಮದ್ಯವ್ಯಸನಿಗಳ ಆರೋಗ್ಯದ ಮೇಲೆ ಉಂಟಾಗುವ ದುಶ್ಪರಿಣಾಮ ಸೇರಿದಂತೆ ಇತ್ಯಾದಿಗಳ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ.
ಸ್ನೇಹ, ಮನರಂಜನಾಕೂಟ ಸೇರಿದಂತೆ ನಿಯಮಿತ ಮತ್ತು ಸಾಂದರ್ಭಿಕವಾಗಿ ಮದ್ಯ ಸೇವನೆ ಮಾಡುವವರನ್ನು ಗುರುತಿಸಲಾಗಿದೆ. ಜೊತೆಗೆ ಭವಿಷ್ಯದಲ್ಲಿ ಅಂತವರು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಸುಮಾರು 12 ವರ್ಷಗಳ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು ಅದರ ಮೌಲ್ಯಮಾಪನ ಕೂಡ ನಡೆದಿದೆ. ಜೊತೆಗೆ ಜೆನೆಟಿಕ್ (ಆನುವಂಶಿಕ) ವಿಶ್ಲೇಷಣೆಯನ್ನು ಸಹ ಮಾಡಲಾಗಿದೆ. ಮದ್ಯ ಸೇವನೆಯಿಂದ ಆಸ್ಪತ್ರೆಗೆ ದಾಖಲಾದವರು, ಅಲ್ಲದೇ ಈ ಮದ್ಯ ಸೇವನೆಯಿಂದ ಮೃತಪಟ್ಟವರಲ್ಲಿ ಹೆಚ್ಚಾಗಿ 35 ರಿಂದ 84 ವರ್ಷದೊಳಗಿನವರು ಎಂದು ಈ ಸಂಶೋಧನೆ ಹೇಳುತ್ತದೆ.
ಮದ್ಯವೇ ಮೂಲ ಕಾರಣ: ''ಬದಲಾದ ಆಧುನಿಕ ಜೀವನಶೈಲಿಯಿಂದ ಪ್ರಪಂಚದಾದ್ಯಂತ ಮದ್ಯ ಸೇವನೆ ಮಾಡುವವ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರಲ್ಲಿ ಈ ಅಭ್ಯಾಸ ಹೆಚ್ಚಾಗಿದೆ ಅನ್ನೋದು ನೋವಿನ ಸಂಗತಿ. ಇದು ಉತ್ತಮ ಸಮಾಜದ ನಿರ್ಮಾಣಕ್ಕೂ ಕೊಡಲಿ ಪೆಟ್ಟು. ಮದ್ಯ ಸೇವನೆಯಿಂದ ಯಾವುದೇ ಪ್ರಯೋಜನವಿಲ್ಲ. ತುಸು ಕುಡಿದರೂ ಆರೋಗ್ಯಕ್ಕೆ ಹಾನಿಕರ. ಮದ್ಯಪಾನ ಮಾಡುವವರಲ್ಲಿ ರೋಗನಿರೋಧಕ ಶಕ್ತಿ ಬಹಳವಾಗಿ ಕಡಿಮೆಯಾಗುತ್ತದೆ. ಬಿಪಿ ಹೆಚ್ಚುತ್ತದೆ. ಹೃದಯದ ಉರಿಯೂತ ಸೇರಿದಂತೆ ಇತರ ಸಮಸ್ಯೆಗಳು ಹೃದಯಾಘಾತಕ್ಕೆ ಕಾರಣವಾಗಬಹುದು. ಹೊಟ್ಟೆಯಲ್ಲಿನ ಸೋಂಕಿನಿಂದ ಹುಣ್ಣುಗಳು ರೂಪುಗೊಳ್ಳುತ್ತವೆ. ನ್ಯುಮೋನಿಯಾ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳಬಹುದು. ಹಲವು ಕ್ಯಾನ್ಸರ್ ಉದ್ಬವವಾಗುವ ಸಾಧ್ಯತೆ ಇದೆ. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ವಿಸ್ಮೃತಿ ಕೂಡ ಉಂಟಾಗುತ್ತದೆ.
ಮದ್ಯಪಾನ ಮಾಡುವವರು ಕೆಲವೊಮ್ಮೆ ಕೋಮಾಕ್ಕೂ ಹೋಗಬಹುದು. ಕೆಲವರು ಹಿಂಸಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಹುದು. ಇದು ದೊಡ್ಡ ದೊಡ್ಡ ಅಪರಾಧಕ್ಕೂ ದಾರಿ ಮಾಡಿಕೊಡಬಲ್ಲದು. ಆಲ್ಕೋಹಾಲ್ ಮೂಳೆಗಳು ದುರ್ಬಲಗೊಳಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಉತ್ತಮ ನಿದ್ರೆ ಮತ್ತು ದೈಹಿಕ ಪರಿಶ್ರಮವನ್ನು ನಿವಾರಿಸಲು ಕುಡಿಯುತ್ತೇವೆಂದು ಕೆಲವರು ವಾದಿಸುತ್ತಾರೆ. ಇದು ತಪ್ಪು. ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಮುಕ್ತಿ ಪಡೆಯಲು ಮದ್ಯಪಾನ ಮಾಡುತ್ತಾರೆ. ಕೊನೆಗೆ ಮದ್ಯಪಾನ ವ್ಯಸನಿಗಳಾಗುತ್ತಾರೆ. ಸ್ನೇಹ, ಮನರಂಜನಾಕೂಟ ಮತ್ತು ಕೆಲವು ಸಮಾರಂಭಗಳಲ್ಲಿ ಮದ್ಯ ಸೇವಿಸುವ ಪ್ರವೃತ್ತಿ ಹೆಚ್ಚಾಗಿದೆ. ಮದ್ಯ ಸೇವನೆಯಿಂದ ಏನೆಲ್ಲ ಸಮಸ್ಯೆ ಕಾಣಿಸಿಕೊಳ್ಳುತ್ತವೆ ಅನ್ನೋದನ್ನು ಅರಿತಿದ್ದರೂ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಯಾರೇ ಆಗಲಿ, ಯಾವುದೇ ಸಂದರ್ಭಗಳಾಗಲಿ, ಕುಡಿತ ಒಳ್ಳೆಯದಲ್ಲ. ಇದಷ್ಟೇ ಅಲ್ಲ, ಮದ್ಯಪಾನದಿಂದ ಇನ್ನು ಹಲವು ಸಮಸ್ಯೆಗಳನ್ನು ಎದಿರಿಸಬೇಕಾಗುತ್ತದೆ. ಮದ್ಯಪಾನ ನಿಲ್ಲಿಸುವುದನ್ನು ಬಿಟ್ಟು ಇದಕ್ಕೆ ಅನ್ಯ ಪರಿಹಾರವಿಲ್ಲ''. - ಡಾ.ಎಂ.ವಿ.ರಾವ್, ಹಿರಿಯ ಸಲಹೆಗಾರ ಜನರಲ್ ವೈದ್ಯಾಧಿಕಾರಿ, ಯಶೋದಾ ಆಸ್ಪತ್ರೆ.
ಹಿಂದೆ ಗುರುತಿಸಲಾಗಿದ್ದ ರೋಗಗಳು: ಈ ಹಿಂದೆ, ಕ್ಯಾನ್ಸರ್, ಮಧುಮೇಹ, ಬಿಪಿ, ನ್ಯುಮೋನಿಯಾ, ಹೃದಯ ಮತ್ತು ಯಕೃತ್ತಿನ ಸಮಸ್ಯೆಗಳು, ಮುಖ್ಯವಾಗಿ ಲಿವರ್ ಸಿರೋಸಿಸ್ ಸೇರಿದಂತೆ 28 ರೀತಿಯ ಕಾಯಿಲೆಗಳಿಗೆ ಆಲ್ಕೋಹಾಲ್ ಕಾರಣ ಎಂದು ಗುರುತಿಸಲಾಗಿತ್ತು. ಆದರೆ, ಇತ್ತೀಚಿನ ಅಂತಾರಾಷ್ಟ್ರೀಯ ಸಂಶೋಧನೆಯಿಂದ ಮತ್ತಷ್ಟು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ.
ಹೆಚ್ಚು ಗಂಭೀರ ರೋಗಗಳು: ಈ ಹಿಂದೆ ಪಾಶ್ಚಿಮಾತ್ಯ ದೇಶಗಳ ಜನರ ಮೇಲೆ ಮಾತ್ರ ಸಂಶೋಧನೆ ಮಾಡಲಾಗಿತ್ತು. ಆದರೆ, ಇತ್ತೀಚಿನ ಸಂಶೋಧನೆಯನ್ನು ಏಷ್ಯಾ ಖಂಡದ ಜನರ ಮೇಲೆ ಮಾಡಲಾಗಿದೆ. ಆನುವಂಶಿಕ ವಿಶ್ಲೇಷಣೆಯು ಈ ಬಗ್ಗೆ ಖಚಿತಪಡಿಸಿದೆ. ನಿತ್ಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಅವರು ಹಲವು ರೋಗಗಳಿಗೂ ತುತ್ತಾಗುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಆಗಾಗ್ಗೆ ಆಸ್ಪತ್ರೆಗಳಿಗೆಯೇ ಅಲೆಯುತ್ತಿರುತ್ತಾರೆ. ಅಂತವರು ಯಕೃತ್ತು ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಎಂದೇ ಅರ್ಥ!
ಅತೀವ ಮದ್ಯಪಾನದಿಂದ ಮುಖ್ಯವಾಗಿ ತೊಂದರೆಗೊಳಗಾಗುವ ಅಂಗವೆಂದರೆ ಯಕೃತ್. ಕುಡಿತದಿಂದ ಭವಿಷ್ಯದಲ್ಲಿ ಭಯಾನಕ ಕಾಯಿಲೆಯನ್ನು ರೋಗಿಯು ಎದುರಿಸಬೇಕಾಗುತ್ತದೆ. ಅತೀವ ಮದ್ಯಸೇವನೆಯಾದರೆ ಸಾವು ಕಟ್ಟಿಟ್ಟಬುತ್ತಿ. ಕುಡಿತ ಅಷ್ಟೆಕ್ಕೇ ಬಿಟ್ಟರೆ ಒಳಿತು. ಮುಂದುವರೆದರೆ ಲಿವರ್ ಸಿರೋಸಿಸ್, ಗೌಟ್ ನಂತಹ ಕಾಯಿಲೆಗಳ ತೀವ್ರತೆ ದ್ವಿಗುಣಗೊಂಡು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಇದಷ್ಟೇ ಅಲ್ಲದೇ ಇನ್ನೂ ಭಯಾನಕ ಮತ್ತು ಜೀವಕ್ಕೆ ಕುತ್ತು ತರುವ ಅಪಾಯಕಾರಿ ರೋಗಗಳು ಉಂಟಾಗಬಹುದು ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿ