ಹಾಂಕಾಂಗ್: ಕೋವಿಡ್ ಸೋಂಕು ಕಂಡು ಬಂದು ಮೂರು ವರ್ಷದ ಬಳಿಕವೂ ಅದರ ಉಪತಳಿಗಳು ಮತ್ತು ರೂಪಾಂತರ ತಳಿಗಳು ಜಗತ್ತನ್ನು ಕಾಡುತ್ತಿದೆ. ಕೋವಿಡ್ ಬಳಿಕ ಕಂಡು ಬಂದಿದ್ದ ಅದರ ರೂಪಾಂತಾರ ಸೋಂಕು ಓಮ್ರಿಕಾನ್ ಬಲು ಬೇಗ ಹರಡುವ ಸಾಮರ್ಥ್ಯ ಹೊಂದಿತ್ತು. ಇದೇ ಹಿನ್ನೆಲೆ ಈ ಸೋಂಕಿನಿಂದ ರಕ್ಷಣೆಗೆ ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯದಂತಹ ನಿಯಮಗಳನ್ನು ಹಲವು ರಾಷ್ಟ್ರಗಳು ಕಡ್ಡಾಯ ಮಾಡಿದ್ದವು. ಅದರಲ್ಲಿ ಒಂದು ಹಾಂಕಾಂಗ್. 2020ರ ಜುಲೈ 15ರಿಂದ ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಈ ನಿಯಮವನ್ನು ಇದೀಗ ಸಡಿಲಗೊಳಿಸಲಾಗಿದೆ ಎಂದು ಇಲ್ಲಿನ ನಗರ ಸರ್ಕಾರ ತಿಳಿಸಿದೆ.
ಕಳೆದ ಒಂದೂವರೆ ವರ್ಷದಿಂದ ಜಾರಿಯಲ್ಲಿದ್ದ ನಿಯಮ: 959 ದಿನಗಳ ನಂತರ ಹಾಂಕಾಂಗ್ನಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಸರ್ಕಾರ ಜನರಿಗೆ ತಿಳಿಸಿದೆ. ಇಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನೀತಿ ಜಾರಿಗೆ ತಂದ ಸರ್ಕಾರ, ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ, 1000 ಡಾಲರ್ ದಂಡವನ್ನು ವಿಧಿಸುವುದಾಗಿ ತಿಳಿಸಿತ್ತು ಎಂದು ಸಿಎನ್ಎನ್ ವರದಿ ಮಾಡಿದೆ.
2020ರ ಜನವರಿಯಲ್ಲಿ ಇಲ್ಲಿ ಕೋವಿಡ್ ಸೋಂಕು ಆತಂಕ ಮೂಡಿಸಿತ್ತು. ಈ ಹಿನ್ನೆಲೆ ಸಾರ್ವಜನಿಕ ಸಾರಿಗೆ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸುವ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು. ಸೋಂಕಿನ ಹೆಚ್ಚಳದಿಂದಾಗಿ ಮಾಸ್ಕ್ ಕೊಳ್ಳುವಿಕೆ ಮತ್ತು ಅಭಾವ ಕೂಡ ಇಲ್ಲಿ ಹೆಚ್ಚಾಯಿತು ಎಂದು ವರದಿ ತಿಳಿಸಿದೆ. ಈ ಕಡ್ಡಾಯ ನಿಯಮವನ್ನು ಬುಧವಾರದಿಂದ ಸಡಿಲಗೊಳಿಸುತ್ತಿರುವುದಾಗಿ ಹಾಂಕಾಂಗ್ ಕಾರ್ಯ ನಿರ್ವಾಹಕ ಮುಖ್ಯಸ್ಥ ಜಾನ್ ಲೀ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾವು ಇದೀಗ ಸಾಮಾನ್ಯ ದಿನಕ್ಕೆ ಮರಳುತ್ತಿದ್ದೇವೆ. ಈ ಹಿನ್ನೆಲೆ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖ ನಿಯಮ ಕೈಬಿಟ್ಟ ಸರ್ಕಾರ: ಇಲ್ಲಿ ಜಾರಿಯಲ್ಲಿದ್ದ ಕೋವಿಡ್ ಕಟ್ಟು ನಿಟ್ಟಿನ ನಿಯಮ ಕೂಡ ನಿಧಾನವಾಗಿ ತೆಗೆದು ಹಾಕಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇದ್ದ ಕ್ವಾರಂಟೈನ್ ನಿಯಮ ಕೈ ಬಿಟ್ಟಿದ್ದು, ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮುಂದಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಗ್ಯ ಕಾರ್ಯದರ್ಶಿ ಲೊ ಮೊ ಚುಂಗ್, ಮಾಸ್ಕ್ ಕಡ್ಡಾಯ ನಿಯಮ ತೆಗೆದು ಹಾಕುವ ಮೂಲಕ ಎಲ್ಲ ಕೋವಿಡ್ ನಿಯಮಗಳನ್ನು ತೆಗೆದು ಹಾಕಲಾಗಿದೆ. ಇದೀಗ ಎಲ್ಲರ ಮುಖದಲ್ಲಿ ನಾನು ಮಂದಹಾಸ ಕಾಣಬಹುದಾಗಿದೆ ಎಂದ ಅವರು, ಹೆಚ್ಚು ಅಪಾಯ ಹೊಂದಿರುವ ಜನರು, ಮನೆ ಮತ್ತು ಆಸ್ಪತ್ರೆಗಳಲ್ಲಿ ಇರುವ ಹಿರಿಯ ನಾಗರಿಕರು ಮಾಸ್ಕ್ ಧರಿಸುವುದು ಉತ್ತಮ ಎಂದು ಸಲಹೆ ನೀಡಿದರು.
ದಕ್ಷಿಣ ಕೊರಿಯಾ, ಜಪಾನ್ ಮತ್ತು ತೈವಾನ್ ಸೇರಿದಂತೆ ಅನೇಕ ಏಷ್ಯಾ ದೇಶಗಳಲ್ಲಿ ಜಾರಿಯಲ್ಲಿದ್ದ ಸಂಪೂರ್ಣವಾಗಿ ಮತ್ತು ಭಾಗಶಃ ಮಾಸ್ಕ್ ಧರಿಸುವ ನಿಯಮವನ್ನು ತೆಗೆದು ಹಾಕಲಾಗಿದೆ.
ಇದನ್ನೂ ಓದಿ: ಕೋವಿಡ್ -19 ವೈರಸ್ ಪ್ರಯೋಗಾಲಯದಿಂದಲೇ ಹರಡಿದೆ: ಅಮೆರಿಕ ಇಂಧನ ಇಲಾಖೆ