ಪಾಟ್ನಾ(ಬಿಹಾರ): 45 ವರ್ಷದ ವ್ಯಕ್ತಿಯೊಬ್ಬ ದವಡೆಗೆ ಅಳವಡಿಸಿದ್ದ ಆರ್ಟಿಫಿಷಿಯಲ್ ಹಲ್ಲಿನ ಸೆಟ್ ಆಕಸ್ಮಿಕವಾಗಿ ನುಂಗಿದ್ದರು. ಹೃದಯದಿಂದ ಹೊರಬರುವ ಮುಖ್ಯ ರಕ್ತನಾಳದಲ್ಲಿ ಸಿಲುಕಿಕೊಂಡಿದ್ದ ಆ ಆರ್ಟಿಫಿಷಿಯಲ್ ಹಲ್ಲಿನ ಸೆಟ್ ಅನ್ನು ಪಾಟ್ನಾದ ಪಾರಸ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿರುವ ಘಟನೆ ನಡೆದಿದೆ.
ಬೇಗುಸರಾಯ್ ನಿವಾಸಿ 45 ವರ್ಷದ ಸುರೇಂದ್ರ ಕುಮಾರ್ ರಕ್ತನಾಳದಲ್ಲಿ ಹಲ್ಲಿನ ಸೆಟ್ ಸಿಲುಕಿಕೊಂಡ ವ್ಯಕ್ತಿ. ಈ ವ್ಯಕ್ತಿಯ ಮೇಲಿನ ದವಡೆಗೆ ಆರ್ಟಿಫಿಷಿಯಲ್ ಹಲ್ಲಿನ ಸೆಟ್ ಅಳವಡಿಸಲಾಗಿತ್ತು. ಇವರು ಆಹಾರ ತಿನ್ನುವಾಗ ಹಲ್ಲಿನ ಸೆಟ್ ಕಳಚಿ ಬಂದಿದ್ದು, ಆಕಸ್ಮಿಕವಾಗಿ ನುಂಗಿದ್ದಾರೆ. ಹಲ್ಲಿನ ಸೆಟ್ಗೆ ಜೋಡಿಸಲಾಗಿದ್ದ ಲೋಹದ ತಂತಿಯಿಂದಾಗಿ ಸೆಟ್ ಕರುಳಿಗೆ ತಾಗಿ, ಇಡೀ ಸೆಟ್ ಶ್ವಾಸಕೋಶ ಮತ್ತು ಹೃದಯದ ನಡುವಿನ ಹೃದಯದಿಂದ ಹೊರಬರುವ ಮುಖ್ಯ ರಕ್ತನಾಳದಲ್ಲಿ ಸಿಲುಕಿಕೊಂಡಿವೆ.
ಇದಾದ ನಂತರ ವ್ಯಕ್ತಿಗೆ ಎದೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಸುರೇಂದ್ರ ಅವರನ್ನು ಬೇಗುಸರೈನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಎಂಡೋಸ್ಕೋಪಿ ಬಳಸಿ ದಂತವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ಜೀವಕ್ಕೆ ತೊಂದರೆಯಾಗುವ ಸೂಚನೆ ಕಂಡು ಬಂದ ಹಿನ್ನೆಲೆ, ತಕ್ಷಣವೇ ವೈದ್ಯರು ಅವರನ್ನು ಪಾಟ್ನಾದ ಪಾರಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿ ರೋಗಿಯನ್ನು ಕರೆದುಕೊಂಡು ಬಂದ ಸಂಬಂಧಿಕರು ಪಾರಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು ಎಂದು ಪಾರಸ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯ ತೀವ್ರತೆಯನ್ನು ವಿವರಿಸಿದ ವೈದ್ಯರು, ರೋಗಿಯ ಅನ್ನನಾಳ ದಂತಕ್ಕೆ ಅಳವಡಿಸಿದ್ದ ಲೋಹದ ತಂತಿಯಿಂದಾಗಿ 10 ಸೆಂ.ಮೀ ನಷ್ಟು ಹರಿದಿದೆ ಎಂದು ಹೇಳಿದ್ದರು.
ಪಾರಸ್ ಆಸ್ಪತ್ರೆಯಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ: ಪಾರಸ್ ಆಸ್ಪತ್ರೆಯ ವೈದ್ಯರು ಎಂಡೋಸ್ಕೋಪಿ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ರೋಗಿ ಚಿಂತಾಜನಕ ಸ್ಥಿತಿಯಲ್ಲಿರುವುದು ತಿಳಿದು ಬಂದಿದೆ. ದಂತ ಸೆಟ್ ಹೃದಯ ಮತ್ತು ಶ್ವಾಸಕೋಶದ ನಡುವಿನ ಮುಖ್ಯ ದ್ವಾರದಲ್ಲಿ ಅಂಟಿಕೊಂಡಿತ್ತು. ರಕ್ತನಾಳದಲ್ಲಿ ಸಂಪೂರ್ಣ ಹಲ್ಲಿನ ಸೆಟ್ ಸಿಲುಕಿಕೊಂಡಿರುವುದನ್ನು ಕಂಡ ವೈದ್ಯರು ಕೂಡ ಶಾಕ್ ಆಗಿದ್ದಾರೆ. ಯಾಕೆಂದರೆ ಬಿಹಾರದಲ್ಲಿ ಈ ರೀತಿಯ ಪ್ರಕರಣ ಬಂದಿರುವುದು ಇದೇ ಮೊದಲು.
ಅದಲ್ಲದೇ ಇಂತಹ ಶಸ್ತ್ರಚಿಕಿತ್ಸೆ ನಡೆದಿರುವುದು ಕೂಡ ಇದೇ ಮೊದಲು. ಅನ್ನನಾಳದ ಮೂಲಕ ಹಲ್ಲಿನ ಸೆಟ್ ಹೃದಯಕ್ಕೆ ಪ್ರವೇಶಿಸಿದ್ದ ಕಾರಣ ಎದೆಯ ಎಡಭಾಗದಲ್ಲಿ ಕೀವು ತುಂಬಿಕೊಂಡು ಇನ್ಫೆಕ್ಷನ್ ಜಾಸ್ತಿಯಾಗಿತ್ತು. ದಂತಕ್ಕೆ ಲೋಹದ ಕೊಕ್ಕೆ ಅಳವಡಿಸಿದ್ದರಿಂದ ಅದನ್ನು ಹೊರ ತೆಗೆಯುವುದೇ ದೊಡ್ಡ ಸವಾಲಾಗಿತ್ತು.
ಡೈರೆಕ್ಟರ್ ಜನರಲ್, ಶಸ್ತ್ರಚಿಕಿತ್ಸಾ ವಿಭಾಗದ ಡಾ. ಎಎ ಹೈ ನೇತೃತ್ವದಲ್ಲಿ ಏಳು ವೈದ್ಯರ ತಂಡವನ್ನು ರಚಿಸಿ, ಶಸ್ತ್ರಚಿಕಿತ್ಸೆ ಬ್ಲೂಪ್ರಿಂಟ್ ತಯಾರಿಸಲಾಗಿದೆ. ಮೊದಲನೆಯದಾಗಿ, ರೋಗಿಯ ಎದೆಯಲ್ಲಿ ಸಂಗ್ರಹವಾದ ಕೀವು ಹೊರತೆಗೆದು ಥೋರಾಕೋಸ್ಕೋಪಿ ವಿಧಾನದಿಂದ ಸ್ವಚ್ಛಗೊಳಿಸಲಾಯಿತು. ನಂತರ ರೋಗಿಯ ಎಡಭಾಗದಿಂದ ಕುತ್ತಿಗೆವರೆಗೆ ತೆರೆದು ಒಳಗೆ ತಲುಪಿ ಅಲ್ಲಿಂದ ಆ ದಂತವನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.
ಸುಮಾರು ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ರಕ್ತನಾಳದಲ್ಲಿ ಸಿಲುಕಿಕೊಂಡಿದ್ದ ಹಲ್ಲಿನ ಸೆಟ್ ಅನ್ನು ತಂಡ ಯಶಸ್ವಿಯಾಗಿ ಹೊರತೆಗೆದಿದೆ. ರೋಗಿಯು ಪ್ರಸ್ತುತ ಅಬ್ಸರ್ವೇಶನ್ನಲ್ಲಿದ್ದು, ರೋಗಿಯ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ. ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಆಡಳಿತವು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ತ್ರಿಪುರಾದ ವ್ಯಕ್ತಿಗೆ ಪಶ್ಚಿಮ ಬಂಗಾಳದಲ್ಲಿ ಯಶಸ್ವಿ ಹೃದಯ ಕಸಿ