ವಾಷಿಂಗ್ಟನ್: ರಕ್ತ ಪರೀಕ್ಷೆಯ ಮೂಲಕ ಸಕ್ಕರೆ ಕಾಯಿಲೆ, ಜ್ವರದ ವಿಧಗಳು ಸೇರಿ ಮತ್ತಿತರ ಕಾಯಿಲೆಗಳನ್ನು ಕಂಡು ಹಿಡೀತಾರೆ. ಈ ಪರೀಕ್ಷೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೆರಿಕದ ವಿಜ್ಞಾನಿಗಳು ಮಾರಕ ಕ್ಯಾನ್ಸರ್ ರೋಗವನ್ನೂ ಪತ್ತೆ ಮಾಡುವ ವಿಧಾನವನ್ನು ಕಂಡು ಕೊಂಡಿದ್ದಾರೆ.
ರಕ್ತಪರೀಕ್ಷೆ ನಡೆಸಿ ದೇಹದಲ್ಲಿ ಕ್ಯಾನ್ಸರ್ ಆಗಿದೆಯೋ, ಇಲ್ಲವೋ ಎಂಬುದನ್ನು ಸರಳವಾಗಿ ಪತ್ತೆ ಮಾಡುವ ವಿಧಾನವನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ 'ಮಲ್ಟಿ ಕ್ಯಾನ್ಸರ್ ಅರ್ಲಿ ಡಿಟೆಕ್ಷನ್' (ಎಂಸಿಇಡಿ) ಎಂದು ಹೆಸರಿಸಲಾಗಿದೆ. ಇದರಿಂದ ಕ್ಯಾನ್ಸರ್ಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣ ಇಲ್ಲದಿದ್ದರೂ ಅದರ ಜಾಡನ್ನು ಈ ಪರೀಕ್ಷೆ ಗ್ರಹಿಸುತ್ತದೆ.
ಈ ಪರೀಕ್ಷೆಯ ಸಂಶೋಧನೆಯ ಭಾಗವಾಗಿ 6,662 ಜನರ ಮೇಲೆ ಇದನ್ನು ಪ್ರಯೋಗಿಸಲಾಗಿದೆ. ಇವರೆಲ್ಲರೂ 50 ವರ್ಷ ಮೇಲ್ಪಟ್ಟವರಾಗಿದ್ದರು. ಇಷ್ಟು ಪ್ರಮಾಣದ ಜನರಲ್ಲಿ ಶೇಕಡಾ 1 ರಷ್ಟು ಮಂದಿಯಲ್ಲಿ ಕ್ಯಾನ್ಸರ್ ಇರುವುದನ್ನು ಈ ವಿಧಾನ ದೃಢಪಡಿಸಿದೆ.
ಯಾವೆಲ್ಲಾ ಕ್ಯಾನ್ಸರ್ ಪತ್ತೆ ಮಾಡುತ್ತೆ: ರಕ್ತಪರೀಕ್ಷೆ ಮೂಲಕ ಯಕೃತ್ತು, ಸಣ್ಣ ಕರುಳು, ಗರ್ಭಕೋಶದ ಹಂತ-1 ಕ್ಯಾನ್ಸರ್ ಮತ್ತು ಮೇದೋಜೀರಕ ಗ್ರಂಥಿ, ಮೂಳೆ ಮತ್ತು ಗಂಟಲಿನ 2ನೇ ಹಂತದ ಕ್ಯಾನ್ಸರ್ ಅನ್ನು ಇದು ಪತ್ತೆ ಮಾಡುತ್ತದೆ. ಇದರಿಂದ ರೋಗಿಗಳಿಗೆ ಬೇಗನೇ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂಬುದು ವಿಜ್ಞಾನಿಗಳ ಸ್ಪಷ್ಟನೆಯಾಗಿದೆ.
ಎಕ್ಸರೇಗಳು, ಸಿಟಿ ಸ್ಕ್ಯಾನಿಂಗ್, ಎಂಡೋಸ್ಕೋಪಿಗಳು ಪತ್ತೆ ಮಾಡದ ಮಾರಕ ಕ್ಯಾನ್ಸರ್ ಕಾಯಿಲೆಯನ್ನು ಈ ವಿಧಾನ ಕಂಡು ಹಿಡಿಯುತ್ತದಂತೆ. ವಿಜ್ಞಾನಿಗಳು ಇದನ್ನು ಪ್ರಮಾಣಿತ ಮೂಲ ಭೂತ ಪತ್ತೆ ವಿಧಾನಗಳೊಂದಿಗೆ ಹೋಲಿಸಿದ್ದಾರೆ. ರಕ್ತ ಪರೀಕ್ಷೆಯ ವಿಧಾನದಿಂದ ಇತ್ತೀಚಿಗೆ ನಡೆಸಿದ ಪರೀಕ್ಷೆಗಳಲ್ಲಿ ಕ್ಯಾನ್ಸರ್ ರೋಗಿಗಳನ್ನು ಅತಿ ಹೆಚ್ಚಾಗಿ ಪತ್ತೆ ಮಾಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಏನಿದು ಕ್ಯಾನ್ಸರ್ ರೋಗ: ವೈದ್ಯಕೀಯ ಪರಿಭಾಷೆಯಲ್ಲಿ ಮಾಲಿಗಂಟ್ (ಕೇಡು ತರುವ) ನಿಯೊಪ್ಲಾಸ್ಮ್ (ಊತದ ಗೆಡ್ಡೆ) ಎಂದು ಕರೆಯಲಾಗುವ ಅರ್ಬುದ ರೋಗವಾಗಿದೆ. ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತವಾಗಿ ಬೆಳವಣಿಗೆ ಹೊಂದುತ್ತವೆ. ಅಂದರೆ ಸಾಮಾನ್ಯಕ್ಕಿಂತಲೂ ಮಿತಿ ಮೀರಿದ ಕೋಶಗಳ ವಿಭಜನೆ, ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ. ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.
ಓದಿ: ಕೋವಿಡ್ ಸೋಂಕಿತ ವಯೋವೃದ್ಧರಿಗೆ ಮರೆವಿನ ಕಾಯಿಲೆ ಸಾಧ್ಯತೆ: ಅಧ್ಯಯನ