ಜೈಪುರ: ರಾಜಸ್ಥಾನದ ಬಿಕಾನೇರ್ನಲ್ಲಿ ಖಾಸಗಿ ಶಾಲೆಯಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ 12 ವರ್ಷದ ಯುವಕ ಕುಸಿದುಬಿದ್ದು, ಸಾವನ್ನಪ್ಪಿರುವ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಲಾ ನಿರ್ವಹಣೆ ಮಂಡಳಿ, ಓಟದ ಸ್ಪರ್ಧೆ ಹಿನ್ನೆಲೆ ವಿದ್ಯಾರ್ಥಿಗಳು ಸ್ಥಳೀಯ ಮೈದಾನದ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಓಡುತ್ತಿರುವಾಗ ಇಶಾನ್ ಎಂಬ ವಿದ್ಯಾರ್ಥಿ ಕುಸಿದುಬಿದ್ದ. ತಕ್ಷಣಕ್ಕೆ ಶಿಕ್ಷಕರು ಆತನನ್ನು ಪಿಬಿಎಂ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ವಿದ್ಯಾರ್ಥಿಗೆ ಹೃದಯಾಘಾತವಾಗಿದ್ದು, ಈ ಹಿನ್ನೆಲೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಬಾಲಕನ ತಂದೆ ಅಶೋಕ್ ಕುಮಾರ್ ಕತ್ರಿ ಸರ್ದರ್ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣವನ್ನು ದಾಖಲಿಸಿದರು.
ಪ್ರಕರಣ ಕುರಿತು ಮಾತನಾಡಿರುವ ಪೊಲೀಸರು, ಸರ್ದುಲ್ಗಂಜ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಇಶಾನ್ ಅಧ್ಯಯನ ಮಾಡುತ್ತಿದ್ದ. ಶಾಲೆಯ ಸಮೀಪದಲ್ಲಿ ಹಿರಿಯ ನಾಯಕರಿಗಾಗಿ ವಾಕಿಂಗ್ಗಾಗಿ ದಾರಿ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಸ್ಪರ್ಧೆಯನ್ನು ಏರ್ಪಡಿಸಿದ್ದರು. ಸ್ಪರ್ಧೆಯಲ್ಲಿ ಭಾಗಿಯಾದ ಬಳಿಕ ಇಶಾನ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಮಾಹಿತಿ ಪಡೆದ ಬಳಿಕ ಕುಟುಂಬ ಸದಸ್ಯರು ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ. ಶವ ಪರೀಕ್ಷೆ ಬಳಿಕ ವಿದ್ಯಾರ್ಥಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಘಟನೆಯಿಂದಾಗಿ ಶಾಲೇಯಲ್ಲಿ ಶೋಕದ ವಾತಾವರಣ ಏರ್ಪಟ್ಟಿದ್ದು, ವಿದ್ಯಾರ್ಥಿ ಅಕಾಲಿಕ ಸಾವಿಗೆ ಶಿಕ್ಷಕರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಓದು ಇತರೆ ಚಟುವಟಿಕೆಯಲ್ಲಿ ಇಶಾನ್ ತುಂಬಾ ಸಕ್ರಿಯವಾಗಿದ್ದ ಎಂದು ಶಿಕ್ಷಕರು ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಬಿಕಾನೇರ್ನ ವೈದ್ಯ ಮತ್ತು ಸಿಎಂಎಚ್ಒ ಡಾ ಅಬ್ರರ್ ಪವಾರ್, ಹೃದಯಾಘಾತ ಎಂದರೆ ಕೇವಲ ದೊಡ್ಡವರಿಗೆ ಮಾತ್ರ ಬರುವುದಿಲ್ಲ. ಮಕ್ಕಳು ಕೂಡ ಇದರಿಂದ ಬಳಲುತ್ತಾರೆ. ಹಲವು ವೇಳೆ ಈಗಾಗಲೇ ಹೃದಯ ಸಮಸ್ಯೆ ಹೊಂದಿರುವ ಮಕ್ಕಳಲ್ಲಿ ಹೆಚ್ಚಾಗಿ ಓಡಿದರೆ ಹೃದಯಾಘಾತ ಉಂಟಾಗುವ ಸಂಭವ ಇರುತ್ತದೆ ಎಂದು ತಿಳಿಸಿದ್ದಾರೆ.
9ನೇ ತರಗತಿ ವಿದ್ಯಾರ್ಥಿ ಸಾವು: ಕಳೆದ ತಿಂಗಳು ಸೆಪ್ಟೆಂಬರ್ನಲ್ಲಿ ಲಕ್ನೋದಲ್ಲಿ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೂಡ ವರದಿಯಾಗಿತ್ತು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಈ ರೀತಿಯ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇವು ಆತಂಕ ಮೂಡಿಸಿವೆ. ಜೀವನಶೈಲಿ ಬದಲಾವಣೆ, ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಇದಕ್ಕೆ ಕಾರಣವಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಆತಂಕ ಮೂಡಿಸುತ್ತಿರುವ ಹೃದಯಾಘಾತ ಪ್ರಕರಣ; ಒಂದೇ ದಿನದಲ್ಲಿ ನಾಲ್ವರು ಯುವಕರ ಸಾವು