ನವದೆಹಲಿ: ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ರೋಗಿಗೆ ಅರವಳಿಕೆಯನ್ನು ನೀಡಲಾಗುತ್ತದೆ. ಕೆಲವು ಅಪರೂಪದ ಮೆದುಳು ಶಸ್ತ್ರಕ್ರಿಯೆಯಲ್ಲಿ ರೋಗಿಯು ಎಚ್ಚರವಿದ್ದು, ಸಂಗೀತದಂತಹ ಚಟುವಟಿಕೆಯಲ್ಲಿ ತೊಡಗಿದಾಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿರುವುದು ವರದಿಯಾಗಿದೆ. ಆದರೆ, ಇದೇ ಮೊದಲ ಬಾರಿಗೆ 5 ವರ್ಷದ ಪುಟ್ಟ ಕಂದ ಎಚ್ಚರ ಇರುವಾಗಲೇ ಮೆದುಳು ಸರ್ಜರಿಗೆ ಒಳಗಾಗಿ ದಾಖಲೆ ನಿರ್ಮಿಸಿರುವ ಘಟನೆ ನವದೆಹಲಿಯ ಏಮ್ಸ್ನಲ್ಲಿ ನಡೆದಿದೆ. ಜಗತ್ತಿನಲ್ಲೇ ಅತ್ಯಂತ ಕಿರಿಯ ರೋಗಿಯೊಬ್ಬರು ಎಚ್ಚರವಿದ್ದಾಗಲೇ ಮೆದುಳು ಸರ್ಜರಿಗೆ ಒಳಗಾದ ಪ್ರಕರಣ ಇದಾಗಿದೆ.
ಏನಿದು ಘಟನೆ: ಐದು ವರ್ಷದ ಬಾಲಕಿಯೊಬ್ಬಳು ಎಡ ಪೆರಿಸಿಲ್ವಿಯಲ್ ಇಂಟ್ರಾಕ್ಸಿಯಲ್ ಬ್ರೈನ್ ಟ್ಯೂಮರ್ಗೆ ಗುರಿಯಾಗಿದ್ದು, ಈಕೆಗೆ ಕಾನ್ಸ್ಶಿಯಸ್ ಸೆಡೇಶನ್ ಟೆಕ್ನಿಕ್ ಅಂದರೆ ಎಚ್ಚರದ ಕ್ರಾನಿಯೊಟಮಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಈ ಪ್ರಕ್ರಿಯೆ ಮೂಲಕ ಶಸ್ತ್ರ ಚಿಕಿತ್ಸೆಗೆ ಒಳಗಾದ ಅತ್ಯಂತ ಕಿರಿಯ ರೋಗಿ ಈಕೆಯಾಗಿದ್ದಾಳೆ. ಶಸ್ತ್ರ ಚಿಕಿತ್ಸೆಯಲ್ಲಿ ಯುವತಿ ಉತ್ತಮವಾಗಿ ಸ್ಪಂದಿಸಿದ್ದು, ಸರ್ಜರಿ ಮುಗಿಯುವವರೆಗೆ ಮತ್ತು ಮುಗಿದ ಬಳಿಕವೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾಳೆ.
ಇದೊಂದು ಅದ್ಬುತ ಟೀಮ್ ವರ್ಕ್ ಆಗಿದ್ದು, ನ್ಯೋ ಅನಸ್ತೇಶಿಯಾ ಮತ್ತು ನ್ಯೋರೋರಾಡಿಯಾಲಜಿ ತಂಡಗಳ ಉತ್ತಮ ಬೆಂಬಲ ನೀಡಿದೆ ಎಂದು ಏಮ್ಸ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಅವೇಕ್ ಕ್ರ್ಯಾನಿಯೊಟಮಿ ಎಂಬುದು ನರ ಶಸ್ತ್ರಚಿಕಿತ್ಸೆಯ ತಂತ್ರವಾಗಿದ್ದು, ಕ್ರೇನಿಯೊಟಮಿಯ ಪ್ರಕಾರವಾಗಿದೆ. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ರೋಗಿ ಎಚ್ಚರ ಇರುವಾಗಲೇ ಮೆದುಳಿಗೆ ಯಾವುದೇ ಹಾನಿಯಾಗದಂತೆ ಟ್ಯೂಮರ್ ಅನ್ನು ತೆಗೆಯಲಾಗುತ್ತದೆ. ಸರ್ಜರಿ ಸಮಯದಲ್ಲಿ ನರ ಶಸ್ತ್ರ ಚಿಕಿತ್ಸಕರು ಕಾರ್ಟಿಕಲ್ ಮ್ಯಾಪಿಂಗ್ ಮೂಲಕ ನಿರರ್ಗಳವಾಗಿ ಮೆದುಳಿನ ಪ್ರದೇಶದಲ್ಲಿನ ಶಸ್ತ್ರ ಚಿಕಿತ್ಸೆ ನಿರ್ವಹಿಸಿ, ಟ್ಯೂಮರ್ ಅನ್ನು ತೆಗೆದು ಹಾಕುತ್ತಾರೆ.
ಏನಿದು ಬ್ರೈನ್ ಟ್ಯೂಮರ್: ಬ್ರೈನ್ ಟ್ಯೂಮರ್ ಮೆದುಳಿನಲ್ಲಿ ಅಥವಾ ಸುತ್ತಮುತ್ತಲಿನ ಜೀವಕೋಶಗಳಲ್ಲಿ ಅಸಹಜ ಜೀವಕೋಶಗಳ ಬೆಳವಣಿಗೆಯಿಂದ ಎದುರಾಗುವ ಸಮಸ್ಯೆಯಾಗಿದೆ. ಇವುಗಳನ್ನು ಆರಂಭದಲ್ಲೇ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡುವುದರಿಂದ ರೋಗಿಯ ಪ್ರಾಣ ಉಳಿಸಬಹುದಾಗಿದೆ. ಈ ಬ್ರೈನ್ ಟ್ಯೂಮರ್ಗೆ ಕೌಟುಂಬಿಕ ಇತಿಹಾಸ ಅಥವಾ ವಂಶವಾಹಿನಿ ಕಾರಣವಾಗಬಹುದು. ಟ್ಯೂಮರ್ ಆರಂಭದಲ್ಲಿ ಕೆಲವು ಅನಾರೋಗ್ಯದ ಮುನ್ಸೂಚನೆ ನೀಡುತ್ತದೆ. ಈ ವೇಳೆ ರೆಡಿಯೇಷನ್ ಚಿಕಿತ್ಸೆಗೆ ಒಳಗಾಗುವ ಮೂಲಕ ಇದರ ಪತ್ತೆಯನ್ನು ಮಾಡಬಹುದಾಗಿದೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಕ್ಯಾನ್ಸರ್ನಿಂದ ದೇಶದಲ್ಲಿ 9 ಲಕ್ಷಕ್ಕೂ ಅಧಿಕ ಸಾವು; ಏಷ್ಯಾದಲ್ಲಿ ಭಾರತಕ್ಕೆ ಎರಡನೇ ಸ್ಥಾನ!