ಹೈದರಾಬಾದ್: ಇಂದಿನ ಯುವಕರು ಮತ್ತು ಮಕ್ಕಳಲ್ಲಿ ಗೊರಕೆಯು ಸಹಜ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಆತಂಕಕಾರಿ ವಿಚಾರವೆಂದರೆ ಪ್ರತಿ 100ರಲ್ಲಿ 30ರಿಂದ 40 ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದೇ ಹೋದಲ್ಲಿ ಸಮಸ್ಯೆ ಉಲ್ಬಣವಾಗಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯರ ತಂಡ ನಿದ್ರಾವಸ್ಥೆಯಲ್ಲಿ ಗೊರಕೆ ಸಮಸ್ಯೆ ಎದುರಿಸುತ್ತಿರುವವರ ಸಮೀಕ್ಷೆ ನಡೆಸಿದ್ದು, ಗಂಭೀರ ಸಂಗತಿಯನ್ನು ಅದು ದಾಖಲಿಸಿದೆ. ಪ್ರತಿ 100 ಜನರಲ್ಲಿ 40 ಜನರು ಉಸಿರಾಟ ತೊಂದರೆಗೆ ಒಳಗಾಗಿದ್ದಾರೆ. ಇದರಿಂದ ನಿದ್ರೆಯ ವೇಳೆ ಗೊರಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಉಲ್ಬಣಗೊಂಡು ಉಸಿರುಗಟ್ಟುವಿಕೆಯಂತಹ ಗಂಭೀರ ಸ್ಥಿತಿಯನ್ನು ತರಲಿದೆ ಎಂದು ತಿಳಿದು ಬಂದಿದೆ.
360ರಿಂದ 450 ಜನರು ಪ್ರತಿ ವರ್ಷ ಗೊರಕೆ ಸಮಸ್ಯೆಗೆಂದು ಚಿಕಿತ್ಸೆಗೆ ಇಲ್ಲಿ ದಾಖಲಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 20ರಷ್ಟು ಮಂದಿಗೆ ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಂತಹ ಗಂಭೀರ ಸಮಸ್ಯೆಗೆ ತುತ್ತಾಗಿದ್ದಾರೆ. ಶ್ವಾಸನಾಳಗಳು ಕಟ್ಟಿಕೊಂಡು, ಉಸಿರಾಡಲೂ ಕಷ್ಟಪಡುತ್ತಿದ್ದಾರೆ. ಶ್ವಾಸಕೋಶಗಳಿಗೆ ಆಮ್ಲಜನಕದ ಸರಬರಾಜು ಕೊರತೆ ಉಂಟಾಗಿ, ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ. ಇದು ರಕ್ತದಲ್ಲಿನ ಆಮ್ಲಜನಕವನ್ನೂ ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳಿದರು.
ಮದ್ಯ, ಧೂಮಪಾನ, ಸ್ಥೂಲಕಾಯವೇ ಕಾರಣ: ಚಿಕಿತ್ಸೆಗೆ ದಾಖಲಾದ ಹಲವು ಜನರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗೊರಕೆ ಸಮಸ್ಯೆಗೆ ತುತ್ತಾದ ಕಾರಣವು ಸರಳವಾಗಿದೆ. ಸ್ಥೂಲಕಾಯ, ಮದ್ಯಪಾನ ಮತ್ತು ಧೂಮಪಾನದಿಂದಾಗಿ ಜನರು ಇಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಉಲ್ಬಣಗೊಂಡು ಪ್ರತಿರೋಧಕ ನಿದ್ರಾ ಉಸಿರುಕಟ್ಟುವಿಕೆಗೆ (ಒಎಸ್ಎ) ಒಳಗಾಗಿ ಪರದಾಡುತ್ತಿದ್ದಾರೆ. ದೀರ್ಘಾವಧಿಯಲ್ಲಿ ಇದು ಅನೇಕ ರೀತಿಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಜೀವನಶೈಲಿಯ ಬದಲಾವಣೆಯು ಅಂತಿಮ ಪರಿಹಾರವಾಗಿದೆ ಎಂದು ಸಮೀಕ್ಷೆ ನಡೆಸಿದ ವೈದ್ಯರ ಸಲಹೆಯಾಗಿದೆ.
ಇದರ ಜೊತೆಗೆ ವಿಶೇಷವಾಗಿ ಮುಖ, ಕುತ್ತಿಗೆ, ಮತ್ತು ಎದೆಯ ಸುತ್ತಲೂ ಕೊಬ್ಬಿನ ಅತಿಯಾದ ಶೇಖರಣೆಯಾಗಿರುವುದು ಉಸಿರಾಟ ಕ್ರಿಯೆಗೆ ಭಾರೀ ಸಮಸ್ಯೆ ತಂದೊಡ್ಡುತ್ತದೆ. ಕೆಲವು ಮಕ್ಕಳಲ್ಲಿ ಟಾನ್ಸಿಲ್ಗಳು, ಅಡೆನಾಡ್ಸ್ಗಳು ಉತ್ಪತ್ತಿಯಾಗಿ ಅಲರ್ಜಿಯ ಜೊತೆಗೆ ಗೊರಕೆ ಮತ್ತು ಒಎಸ್ಎ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಕೆಲವರು ಮೂಗಿನ ಮೂಲಕ ಉಸಿರಾಡಲೂ ಕಷ್ಟಪಡುವಂತೆ ಮಾಡುತ್ತದೆ. ಕೆಲವು ಮಕ್ಕಳಲ್ಲಿ ಈ ಸಮಸ್ಯೆಯು ಹೈಪರ್ಆ್ಯಕ್ಟಿವಿಟಿಗೂ ಕಾರಣವಾಗುತ್ತದೆ ಎಂಬುದು ವೈದ್ಯರ ಹೇಳಿಕೆ.
ಸಮಸ್ಯೆ ಪರಿಹಾರಕ್ಕೆ ವೈದ್ಯರು ಹೇಳೋದೇನು?: ಕಾಂಟಿನೆಂಟಲ್ ಆಸ್ಪತ್ರೆಯ ಹಿರಿಯ ಶ್ವಾಸಕೋಶಶಾಸ್ತ್ರಜ್ಞೆ ಡಾ.ಎನ್.ನಳಿನಿ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಗೊರಕೆ ಸಮಸ್ಯೆಯನ್ನು ಜೀವನಶೈಲಿಯ ಬದಲಾವಣೆಯಿಂದ ಗುಣಪಡಿಸಬಹುದು. ನಿಮಗೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ(ಒಎಸ್ಎ) ಇದ್ದರೆ, ಅದರ ಮಟ್ಟವನ್ನು ನಿರ್ಧರಿಸಲು ನಿದ್ರಾ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ತೂಕ ಇಳಿಸಿಕೊಳ್ಳುವಿಕೆ, ಸ್ಥಾನಿಕ ಚಿಕಿತ್ಸೆ ಮತ್ತು ತಲೆಯನ್ನು ಸ್ವಲ್ಪ ಮೇಲಕ್ಕೆ ಇಟ್ಟುಕೊಳ್ಳುವ ಮೂಲಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಇದನ್ನು ತಪ್ಪಿಸಬಹುದು. ತೀವ್ರತರವಾದ ಪ್ರಕರಣಗಳಲ್ಲಿ ನಿದ್ರೆಯ ಸಮಯದಲ್ಲಿ ಸೀಪಾಪ್ ಮತ್ತು ಬೈಪಾಪ್ ಸಾಧನಗಳೊಂದಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಒಎಸ್ಎ ಸಮಸ್ಯೆಯನ್ನು ನಿರ್ಲಕ್ಷಿಸುವುದರಿಂದ ದೀರ್ಘ ದೈಹಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೋವಿಡ್ನಿಂದ ದಡಾರ, ಮೆದುಳಿನ ಅಸ್ವಸ್ಥತೆಯ ಅಪಾಯ ಹೆಚ್ಚು: ತಜ್ಞರು