ವಿಶ್ವದ ಹಲವಾರು ದೇಶಗಳಲ್ಲಿರುವ ನೂರಾರು ಪುರಾತನ ಸ್ಮಾರಕಗಳನ್ನು ವಿಶ್ವದ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಮಾನವನ ನಾಗರಿಕತೆ ಬೆಳೆದು ಬಂದ ಗತವೈಭವವನ್ನು ಸಾರುವ ಇಂಥ ಸ್ಮಾರಕ ಹಾಗೂ ಸ್ಥಳಗಳ ಕುರಿತು ಇಂದಿನ ಪೀಳಿಗೆಗೆ ತಿಳಿಸಲು ಪ್ರತಿವರ್ಷ ಏ.18 ರಂದು ಜಗತ್ತಿನಾದ್ಯಂತ ವಿಶ್ವ ಪಾರಂಪರಿಕ ದಿನ ಆಚರಿಸಲಾಗುತ್ತದೆ.
ಭವ್ಯ ಪರಂಪರೆಯ ಸಂರಕ್ಷಣೆ ಹಾಗೂ ಪಾರಂಪರಿಕ ತಾಣಗಳ ಮಹತ್ವದ ಕುರಿತು ಜನತೆಯಲ್ಲಿ ಅರಿವು ಮೂಡಿಸುವುದು ಪಾರಂಪರಿಕ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಹಾಗೆಯೇ ಪ್ರತಿವರ್ಷ ನವೆಂಬರ್ 19 ರಿಂದ 25 ರವರೆಗೆ ವಿಶ್ವ ಪಾರಂಪರಿಕ ಸಪ್ತಾಹವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
2020ರ ವಿಶ್ವ ಪಾರಂಪರಿಕ ದಿನಾಚರಣೆಯ ಘೋಷವಾಕ್ಯ
“ಒಂದು ಸಂಸ್ಕೃತಿ, ಒಂದು ಪರಂಪರೆ, ಒಂದು ಜವಾಬ್ದಾರಿ” ಇದು ಈ ಬಾರಿಯ ವಿಶ್ವ ಪಾರಂಪರಿಕ ದಿನಾಚರಣೆಯ ಘೋಷವಾಕ್ಯವಾಗಿದೆ. ಜಗತ್ತಿನಲ್ಲಿ ಕೊರೊನಾ ಸಂಕಷ್ಟ ಆವರಿಸಿರುವ ಈ ಸಮಯದಲ್ಲಿ ನಾವೆಲ್ಲ ಒಂದು ಎಂಬುದನ್ನು ಬಿಂಬಿಸಲು ಈ ಘೋಷವಾಕ್ಯವನ್ನು ಆಯ್ಕೆ ಮಾಡಲಾಗಿದೆ.
ವಿಶ್ವ ಪಾರಂಪರಿಕ ದಿನಾಚರಣೆಯ ಇತಿಹಾಸ
ಪುರಾತನ ಸ್ಮಾರಕ ಹಾಗೂ ತಾಣಗಳ ಅಂತಾರಾಷ್ಟ್ರೀಯ ಮಂಡಳಿಯು (The International Council on Monuments and Sites - ICOMOS) 1982 ರಲ್ಲಿ ಏಪ್ರಿಲ್ 18ನೇ ದಿನಾಂಕವನ್ನು ವಿಶ್ವ ಪಾರಂಪರಿಕ ದಿನವನ್ನಾಗಿ ಘೋಷಣೆ ಮಾಡಿತು. ವಿಶ್ವದ ಸಾಂಸ್ಕೃತಿಕ ಶ್ರೀಮಂತಿಕೆ, ಪಾರಂಪರಿಕ ತಾಣಗಳನ್ನು ಸಂರಕ್ಷಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುನೆಸ್ಕೊ ಸಾಮಾನ್ಯ ಸಭೆಯು 1983 ರಲ್ಲಿ ವಿಶ್ವ ಪಾರಂಪರಿಕ ದಿನಾಚರಣೆಯನ್ನು ಅನುಮೋದಿಸಿತು.
ವಿಶ್ವ ಪಾರಂಪರಿಕ ತಾಣಗಳು
ಅಂತಾರಾಷ್ಟ್ರೀಯವಾಗಿ ಪ್ರಾಮುಖ್ಯತೆ ಪಡೆದಿರುವ ಪ್ರಕೃತಿ ಸಹಜವಾದ ಅಥವಾ ಮನುಷ್ಯನಿಂದ ನಿರ್ಮಿತವಾದ ಸ್ಥಳ ಅಥವಾ ಸ್ಮಾರಕ ವಿಶ್ವ ಪಾರಂಪರಿಕ ತಾಣವಾಗಿದೆ ಎಂದು ಯುನೆಸ್ಕೊ ಘೋಷಿಸಿದೆ.
ಪರಂಪರೆಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು
ಪುರಾತನ ಸ್ಮಾರಕ ಹಾಗೂ ತಾಣಗಳ ಅಂತಾರಾಷ್ಟ್ರೀಯ ಮಂಡಳಿ ಹಾಗೂ ಪರಂಪರೆಯ ಸಂರಕ್ಷಣೆಗಾಗಿ ಜಾಗತಿಕ ಒಕ್ಕೂಟ ಈ ಎರಡು ಸಂಸ್ಥೆಗಳು ಪಾರಂಪರಿಕ ತಾಣಗಳ ಬಗ್ಗೆ ಪರಿಶೀಲನೆ ನಡೆಸಿ ಅದರ ವರದಿಯನ್ನು ವಿಶ್ವ ಪರಂಪರೆ ಸಮಿತಿಗೆ ಸಲ್ಲಿಸುತ್ತವೆ. ವರ್ಷಕ್ಕೊಂದು ಬಾರಿ ನಡೆಯುವ ವಿಶ್ವ ಪರಂಪರೆ ಸಮಿತಿಯ ಸಭೆಯಲ್ಲಿ, ವರದಿಯಲ್ಲಿ ಉಲ್ಲೇಖಿಸಲಾದ ಪಾರಂಪರಿಕ ತಾಣವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಆಯ್ಕೆ ಮಾಡಲಾದ ವಿಶೇಷ ಅರಣ್ಯಗಳು, ಬೆಟ್ಟ ಗುಡ್ಡ, ಕೆರೆಗಳು, ಮರುಭೂಮಿ, ಸ್ಮಾರಕಗಳು, ಕಟ್ಟಡಗಳು ಅಥವಾ ನಗರ ಮುಂತಾದುವುಗಳ ಬಗ್ಗೆ ಯುನೆಸ್ಕೊ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ವಿಶ್ವ ಪಾರಂಪರಿಕ ತಾಣಗಳ ಸಮಿತಿ ಪರಿಶೀಲನೆ ಮಾಡುತ್ತದೆ.
1972 ರ ನವೆಂಬರ್ 16 ರಂದು ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ವಿಶ್ವದ ನೈಸರ್ಗಿಕ ಮತ್ತು ಪಾರಂಪರಿಕ ತಾಣಗಳ ಗೊತ್ತುವಳಿಯನ್ನು ಅನುಮೋದಿಸಲಾಯಿತು. ಇದಕ್ಕೂ ಮುನ್ನ 1968 ರಲ್ಲಿ ಪರಂಪರೆಯ ಸಂರಕ್ಷಣೆಗಾಗಿ ಜಾಗತಿಕ ಒಕ್ಕೂಟ ಹಾಗೂ ವಿಶ್ವಸಂಸ್ಥೆಯು 1972 ರಲ್ಲಿ ಸ್ವೀಡನ್ನ ಸ್ಟಾಕ್ಹೋಂನಲ್ಲಿ ಗೊತ್ತುವಳಿಯನ್ನು ಅಂಗೀಕರಿಸಿದ್ದವು. ನಂತರ ವಿಶ್ವ ಪಾರಂಪರಿಕ ಸಮಿತಿಯ ಸಭೆಗಳು 1977 ರಲ್ಲಿ ಆರಂಭವಾದವು.
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ
1983 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿನ ನಾಲ್ಕು ಐತಿಹಾಸಿಕ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಯುನೆಸ್ಕೊ ಅನುಮೋದನೆ ನೀಡಿತು. ಆಗ ತಾಜ್ ಮಹಲ್, ಆಗ್ರಾ ಕೋಟೆ, ಅಜಂತಾ ಮತ್ತು ಎಲ್ಲೋರಾ ಗುಹೆಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡವು. ಪ್ರಸ್ತುತ ಭಾರತದ 35 ಕ್ಕೂ ಹೆಚ್ಚು ತಾಣಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿವೆ. ಇವುಗಳ ಪೈಕಿ 27 ತಾಣಗಳು ಸಾಂಸ್ಕೃತಿಕ, 7 ನೈಸರ್ಗಿಕ ಹಾಗೂ ಒಂದು ಮಿಶ್ರ ತಾಣಗಳ ಪಟ್ಟಿಗೆ ಸೇರಿವೆ.
ಭಾರತದಲ್ಲಿರುವ ಜಗದ್ವಿಖ್ಯಾತ ಪಾರಂಪರಿಕ ತಾಣಗಳು
- ನಳಂದಾ ವಿಶ್ವವಿದ್ಯಾಲಯ (ಬಿಹಾರ)
- ಅಜಂತಾ-ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ)
- ಖಜುರಾಹೊ (ಮಧ್ಯ ಪ್ರದೇಶ)
- ಜಂತರ್ ಮಂತರ್ (ದೆಹಲಿ)
- ಝೂಲ್ತಾ ಮಿನಾರ್ (ಗುಜರಾತ)
- ಮಹಾಬತ್ ಮಕಬರಾ (ಗುಜರಾತ)
- ಕಾಜಿರಂಗಾ ನ್ಯಾಷನಲ್ ಪಾರ್ಕ್ (ಅಸ್ಸಾಂ)
- ಸುಂದರಬನ್ ನ್ಯಾಷನಲ್ ಪಾರ್ಕ್ (ಪಶ್ಚಿಮ ಹಿಮಾಲಯ)
- ನಂದಾ ದೇವಿ ಮತ್ತು ವ್ಯಾಲೀ ಆಫ್ ಫ್ಲವರ್ಸ್ ಪಾರ್ಕ್
- ಕೋನಾರ್ಕ್ ದೇವಾಲಯ (ಒರಿಸ್ಸಾ)
- ತಾಜ್ ಮಹಲ್ (ಆಗ್ರಾ)
- ಚೋಳ ದೇವಾಲಯ (ತಮಿಳು ನಾಡು)
- ಬೋಧ ಗಯಾ (ಬಿಹಾರ)
- ಕೆಂಪು ಕೋಟೆ (ದೆಹಲಿ)
- ಕುಂಭ ಮೇಳ (ಹರಿದ್ವಾರ, ಉಜ್ಜಯಿನಿ, ಪ್ರಯಾಗ್ ಮತ್ತು ನಾಸಿಕ್)
- ಚಾರ್ಮಿನಾರ್ (ಹೈದರಾಬಾದ್)
- ಕುತುಬ್ ಮಿನಾರ್ (ದೆಹಲಿ)
ಪುನರುಜ್ಜೀವನಗೊಳಿಸಲಾದ ಭಾರತದ ಕೆಲ ಪ್ರಮುಖ ಪಾರಂಪರಿಕ ತಾಣಗಳು
- ಶ್ರೀ ರಂಗನಾಥ ಸ್ವಾಮಿ ದೇವಾಲಯ (ತಮಿಳು ನಾಡು)
- ಬೈಕುಲ್ಲಾ ಕ್ರಿಸ್ತ ಚರ್ಚ್ (ಮಹಾರಾಷ್ಟ್ರ)
- ರಾಯಲ್ ಒಪೆರಾ ಹೌಸ್ (ಮಹಾರಾಷ್ಟ್ರ)
- ಬೊಮೊನ್ಜೀ ಹೊರ್ಮೊರ್ಜೀ ವಾಡಿಯಾ ಫೌಂಟೇನ್ ಮತ್ತು ಕ್ಲಾಕ್ ಟವರ್ (ಮುಂಬೈ)
- ಗೋಹಾಡ್ ಫೋರ್ಟ್ ಗೇಟ್ವೇ (ಮಧ್ಯ ಪ್ರದೇಶ)
- ವೆಲ್ಲಿಂಗ್ಟನ್ ಫೌಂಟೇನ್ (ಮುಂಬೈ)
ಯುನೆಸ್ಕೊದಿಂದ ಈವರೆಗೂ ಒಪ್ಪಿಗೆ ಸಿಗದ ಪಾರಂಪರಿಕ ತಾಣಗಳು
- ಸಾರನಾಥ (ಉತ್ತರ ಪ್ರದೇಶ)
- ಸ್ವರ್ಣ ಮಂದಿರ (ಅಮೃತಸರ, ಪಂಜಾಬ)
- ಮಿಥಿಲಾ ಅಥವಾ ಮಧುಬನಿ ಪೇಂಟಿಂಗ್ಸ್ (ಬಿಹಾರ)
- ಮೊಘಲ್ ಗಾರ್ಡನ್ (ಜಮ್ಮು ಮತ್ತು ಕಾಶ್ಮೀರ)
- ನಿಯೋರಾ ವ್ಯಾಲಿ ನ್ಯಾಷನಲ್ ಪಾರ್ಕ್ (ದಾರ್ಜಿಲಿಂಗ್, ಪಶ್ಚಿಮ ಬಂಗಾಳ)
ಸ್ಮಾರಕಗಳು ಹಾಗೂ ಪ್ರಾಚೀನ ವಸ್ತುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನ - 2007
ಪ್ರಾಚೀನ ಪಾರಂಪರಿಕ ಇತಿಹಾಸ ಮತ್ತು ದ್ವಿತೀಯ ಮೂಲಗಳಿಂದ ನಿರ್ಮಾಣವಾದ ಪಾರಂಪರಿಕ ತಾಣಗಳ ಬಗೆಗಿನ ಮಾಹಿತಿ ಸಂಗ್ರಹಿಸಿ ಒಂದೇ ಕಡೆ ಸಿಗುವಂತೆ ಮಾಡಲು 2007 ರಲ್ಲಿ ದೇಶದಲ್ಲಿ ಸ್ಮಾರಕಗಳು ಹಾಗೂ ಪ್ರಾಚೀನ ವಸ್ತುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನ ಆರಂಭಿಸಲಾಯಿತು.
ಪಾರಂಪರಿಕ ತಾಣದ ದತ್ತು ಯೋಜನೆ
2017ರ ಸೆಪ್ಟೆಂಬರ್ 27 ರಂದು ಆಚರಿಸಲಾದ ವಿಶ್ವ ಪ್ರವಾಸೋದ್ಯಮ ದಿನದಂದು ಪಾರಂಪರಿಕ ತಾಣದ ದತ್ತು ಯೋಜನೆಯನ್ನು ಘೋಷಿಸಲಾಯಿತು. ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ಪುರಾತತ್ವ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಪಾರಂಪರಿಕ ತಾಣಗಳು ಹಾಗೂ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು ಯೋಜನೆಯ ಗುರಿಯಾಗಿದೆ.
ಸಾರ್ವಜನಿಕರು, ಸಂಘ-ಸಂಸ್ಥೆಗಳು ಪಾರಂಪರಿಕ ತಾಣಗಳನ್ನು ದತ್ತು ಪಡೆದು ಅವುಗಳನ್ನು ಅಭಿವೃದ್ಧಿಪಡಿಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ. ದತ್ತು ಪಡೆದ ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳ ಹೆಸರಿನ ನಾಮಫಲಕವನ್ನು ಪಾರಂಪರಿಕ ತಾಣಗಳ ಸ್ಥಳದಲ್ಲಿ ಅಳವಡಿಸಲಾಗುತ್ತದೆ.
ಪ್ರೊಜೆಕ್ಟ್ ಮೌಸಮ್
ಪ್ರೊಜೆಕ್ಟ್ ಮೌಸಮ್ ಇದು ಸಂಸ್ಕೃತಿ ಸಚಿವಾಲಯದ ಯೋಜನೆಯಾಗಿದ್ದು, ಹೊಸದಿಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ ಜಾರಿಗೊಳಿಸಲಾಗುತ್ತಿದೆ. ಭಾರತೀಯ ಪ್ರಾಚ್ಯವಸ್ತು ಇಲಾಖೆಯು ಈ ಯೋಜನೆಗೆ ಸಹಯೋಗ ನೀಡುತ್ತಿದೆ. ರಾಷ್ಟ್ರೀಯ ಸಂಸ್ಕೃತಿಗಳನ್ನು ಪ್ರಾದೇಶಿಕ ನೆಲೆಗಟ್ಟಿನಲ್ಲಿ ಅರ್ಥೈಸುವುದೇ ಪ್ರೊಜೆಕ್ಟ್ ಮೌಸಮ್ನ ಗುರಿಯಾಗಿದೆ.
ಸಾಂಪ್ರದಾಯಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ
ಜುಲೈ 2018 ರಲ್ಲಿ ಆಗಿನ ಪ್ರವಾಸೋದ್ಯಮ ಸಚಿವರಾಗಿದ್ದ ಕೆ.ಜೆ. ಅಲ್ಫೋನ್ಸ್ ಅವರು ಸಾಂಪ್ರದಾಯಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಯನ್ನು ಪ್ರಕಟಿಸಿದ್ದರು. 2019-20 ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಪ್ರವಾಸಿ ತಾಣಗಳ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವ ತಾಣಗಳ ಪಟ್ಟಿಯನ್ನು ಪ್ರಕಟಿಸಿದರು. ಯೋಜನೆಯಡಿ ದೇಶದ 17 ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ವಿಶ್ವ ದರ್ಜೆಯ ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.
ಅಭಿವೃದ್ಧಿಗೊಳ್ಳಲಿರುವ ಸಾಂಪ್ರದಾಯಿಕ ಪ್ರವಾಸಿ ತಾಣಗಳ ಪಟ್ಟಿ: ಹುಮಾಯೂನ್ ಗೋರಿ ಮತ್ತು ಕುತುಬ್ ಮಿನಾರ್ (ದೆಹಲಿ), ತಾಜ್ ಮಹಲ್ ಮತ್ತು ಫತೇಪುರ್ ಸಿಕ್ರಿ (ಉತ್ತರ ಪ್ರದೇಶ), ಅಜಂತಾ ಮತ್ತು ಎಲ್ಲೋರಾ (ಮಹಾರಾಷ್ಟ್ರ), ಅಮೇರ್ ಕೋಟೆ (ರಾಜಸ್ಥಾನ), ಸೋಮನಾಥ ಮತ್ತು ಢೋಲವೀರಾ (ಗುಜರಾತ), ಖಜುರಾಹೊ (ಮಧ್ಯ ಪ್ರದೇಶ), ಹಂಪಿ (ಕರ್ನಾಟಕ), ಕೋಲ್ವಾ ಬೀಚ್ (ಗೋವಾ), ಮಹಾಬಲಿಪುರಂ (ತಮಿಳುನಾಡು), ಕಾಝಿರಂಗಾ (ಅಸ್ಸಾಂ), ಕುಮಾರಕೋಮ್ (ಕೇರಳ), ಮಹಾಬೋಧಿ (ಬಿಹಾರ).