ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಗ್ರಾಮದ ಕ್ಯಾಂಪಿನ ಮನೆಯೊಂದರಲ್ಲಿ ಫೆ.25ರಂದು ನಡೆಯುತ್ತಿದ್ದ ಸೀಮಂತ ಕಾರ್ಯಕ್ರಮದ ವೇಳೆ ಸಿಲಿಂಡರ್ ಸ್ಫೋಟಗೊಂಡು ನಡೆದ ದುರಂತದಲ್ಲಿ, ಕಲಬುರಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19 ಗಾಯಾಳುಗಳ ಪೈಕಿ ಬುಧವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ ಈವರೆಗೆ ಮೂವರು ಮಕ್ಕಳು ಸೇರಿ ಒಟ್ಟು 7 ಜನರು ಜೀವ ಕಳೆದುಕೊಂಡಂತಾಗಿದೆ. ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಭೀಮರಾಯ (78) ಹಾಗೂ ವೀರಬಸಪ್ಪ (28) ಎನ್ನುವವರು ಸತತ ಐದು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಒಂದೂವರೆ ವರ್ಷದ ಮಹಾಂತೇಶ್, ಆದ್ಯ (3), ಶ್ವೇತಾ (6), ವೀರಬಸಪ್ಪ (28), ಗಂಗಮ್ಮ (45), ಭೀಮರಾಯ (78), ನಿಂಗಮ್ಮ (80) ಈ ದುರಂತದಲ್ಲಿ ಈವರೆಗೆ ಮೃತಪಟ್ಟಿದ್ದು, ಇವರೆಲ್ಲರೂ ದೋರನಹಳ್ಳಿ ಗ್ರಾಮಸ್ಥರಾಗಿದ್ದಾರೆ.
ಕಲಬುರಗಿ ಜಿಮ್ಸ್ ಹಾಗೂ ಬಸವೇಶ್ವರ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 17 ಜನರು ಚಿಕಿತ್ಸೆ ಪಡೆಯುತ್ತಿದ್ದು, ಮೂರ್ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪುತ್ರನ ಹತ್ಯೆಗೈದ ತಾಯಿ; ಮೂವರು ಆರೋಪಿಗಳ ಬಂಧನ
ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಹಾಗೂ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.