ಯಾದಗಿರಿ: ವರುಣನ ಅರ್ಭಟಕ್ಕೆ ಯಾದಗಿರಿ ಜಿಲ್ಲೆಯ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕಳೆದ ರಾತ್ರಿಯಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಧಾರಾಕಾರ ಮಳೆಯ ಪರಿಣಾಮ ಹಲೆವೆಡೆ ಸೇತುವೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಯಾದಗಿರಿ ತಾಲೂಕಿನ ಕೊಟಗೇರಾ ಗ್ರಾಮದ ಬಳಿ ಇರುವ ಸೇತುವೆ ಮೇಲೆಯೇ ಹಳ್ಳದ ನೀರು ಹರಿಯುತ್ತಿರುವುದರಿಂದ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಸಂಪರ್ಕ ಕಡಿತದಿಂದ ಯಾದಗಿರಿ ಕೇಂದ್ರದಿಂದ ಕೊಟಗೇರಾ, ಚಿಂತಗುಂಟಿ, ಕೆ ಹೊಸಹಳ್ಳಿ, ಹಂದರಕಿ ಗ್ರಾಮಗಳು ಸೇರಿದಂತೆ ಕಲಬುರ್ಗಿಯ ಸೇಡಂ ಪಟ್ಟಣಕ್ಕೆ ಹೋಗುವ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನೊಂದೆಡೆ ಈ ಭಾಗದ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗುರಮಿಠಕಲ್ ಕೊಟಗೇರಾ ರಸ್ತೆ ನಡುವೆ ಇರುವ ಮತ್ತೊಂದು ಸೇತುವೆ ಮುಳುಗಡೆಯಾಗಿದ್ದು, ಜನ ತಮ್ಮ ಗ್ರಾಮಗಳಿಗೆ ತೆರಳಲಾಗದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಗ್ಗು ಪ್ರದೇಶದಲ್ಲಿರುವ ಈ ಸೇತುವೆಗಳನ್ನ ಎತ್ತರಕ್ಕೇರಿಸಬೇಕು ಅಂತ ಈ ಹಿಂದೆಯೇ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ರು ಕೂಡ ಕ್ಯಾರೆ ಅನ್ನದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.