ಯಾದಗಿರಿ: ಜಿಲ್ಲಾಡಳಿತ ಭವನದಲ್ಲಿ ಒಂದು ಕಡೆ ಕೊರೊನಾ ರುದ್ರ ನರ್ತನವಾಡುತ್ತಿದ್ದರೆ, ಮತ್ತೊಂದೆಡೆ ಅದೇ ಭವನದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆ ಮತ್ತು ಅಧಿಕಾರ ಸ್ವೀಕಾರ ಸಮಾರಂಭ ಮಾಡುವ ಮೂಲಕ ಜಿಲ್ಲಾಡಳಿತ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಜು.10ರಂದು ಯಾದಗಿರಿ ನಗರದ ಜಿಲ್ಲಾಡಳಿತ ಭವನದ 24 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲಾಡಳಿತ ಭವನಕ್ಕೆ ಸಾರ್ವಜನಿಕರ ಪ್ರವೇಶ ರದ್ದು ಮಾಡಲಾಗಿದೆ. ಆದ್ರೆ ಸಾರ್ವಜನಿಕರ ಪ್ರವೇಶ ರದ್ದು ಮಾಡಿದಂತಹ ಜಿಲ್ಲಾಡಳಿತ, ಕೊರೊನಾ ನಡುವೆಯೇ ಚುನಾವಣೆ ನಡೆಸಿದ್ದು, ಇದೀಗ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲಾಗಿದ್ದು, ಸಿಬ್ಬಂದಿಗೆ ಕೊರೊನಾ ದೃಢಪಟ್ಟರೂ ಅದೇ ಭವನದಲ್ಲಿ ಸಾಮಾಜಿಕ ಅಂತರ ಇಲ್ಲದೇ ಚುನಾವಣೆ ನಡೆಸಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಜಿಲ್ಲಾಡಳಿತ ಭವನಕ್ಕೆ ಯಾರೊಬ್ಬರೂ ಹೋಗದಂತೆ ಜು.10 ರಿಮದ 3 ದಿನಗಳ ಕಾಲ ನಿಷೇಧ ಹೇರಲಾಗಿತ್ತು. ಆದರೆ, ಸಾರ್ವಜನಿಕರಿಗೆ ಹೇರಲಾದ ನಿಯಮವನ್ನು ನೀವು ಬ್ರೇಕ್ ಮಾಡಿ ಹೋಗಿರೊದು ಸರಿನಾ ಎಂದು ಜಿಲ್ಲಾಡಳಿತದ ವಿರುದ್ಧ ಜನ ಛೀಮಾರಿ ಹಾಕುತಿದ್ದಾರೆ. ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ ಭವನಕ್ಕೆ ತರಾತುರಿಯಲ್ಲಿ ಸ್ಯಾನಿಟೈಸರ್, ಮಾಡಿ ಮಧ್ಯಾಹ್ನ ಎಲೆಕ್ಷನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದೇ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಿದ್ದು ಖಂಡನಿಯವಾಗಿದೆ. ಚುನಾವಣೆಯಲ್ಲಿ ಸುರಪುರದ ಬಿಜೆಪಿ ಶಾಸಕ ರಾಜುಗೌಡ, ಯಾದಗಿರಿಯ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನ ಹಲವು ನಾಯಕರುಗಳು ಪಾಲ್ಗೊಂಡಿದ್ದರು.