ಯಾದಗಿರಿ: ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನ ನಡೆಯುತ್ತಿದೆ. ಎಲ್ಲ ಜನತೆಗೆ ಕೊರೊನಾ ಚುಚ್ಚುಮದ್ದು ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ ಕೆಲವೆಡೆ ಜನರು ಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಕಂಚಗಾರಹಳ್ಳಿಯಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
ಕೋವಿಡ್ ಲಸಿಕೆ ಹಾಕಿಸಿಕಳ್ಳುವಂತೆ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರಿಗೆ ಎಷ್ಟೇ ಮನವೊಲಿಸಿದರು ಸಹ ಅದಕ್ಕೆ ಜನರು ಕ್ಯಾರೇ ಎನ್ನುತ್ತಿಲ್ಲ. ಸಿಬ್ಬಂದಿ ಲಸಿಕೆ ಹಾಕಲು ಬಂದಿದ್ದರೆ, ಗ್ರಾಮಸ್ಥರು ತಮ್ಮ ಮನೆಗಳಿಗೆ ಬೀಗ ಜಡಿದು ಊರನ್ನೇ ತೊರೆದು ಬೇರೆಡೆ ಹೋಗಿದ್ದಾರೆ. ಜನರ ಈ ವರ್ತನೆ ಕೋವಿಡ್ ಲಸಿಕೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಲಸಿಕೆ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿಂದು ಮಾಡಿದರು. ಮನೆ ಮನೆಗೆ ತೆರಳಿದ ಸಿಬ್ಬಂದಿ ಲಸಿಕೆ ಹಾಕಿಕೊಳ್ಳಲು ಮನವಿ ಮಾಡಿದರೆ, ಹಿಂದೇಟು ಹಾಕಿದ ಕೆಲ ಗ್ರಾಮಸ್ಥರು ತಮ್ಮ ಮನೆಗಳಿಗೆ ಬೀಗ ಹಾಕಿ ಪರಾರಿಯಾಗುತ್ತಿದ್ದಾರೆ. ಇನ್ನೂ ಕೆಲವರು ಮನೆಯೊಳಗೆ ಇದ್ದರೂ ಕೂಡ ಬಾಗಿಲು ಹಾಕಿಕೊಂಡು ಒಳಗೆ ಕುಳಿತಿದ್ದಾರೆ.
ಸಹಾಯಕ ಆಯುಕ್ತ ಪ್ರಶಾಂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ, ಮನೆಯಲ್ಲಿದ್ದವರನ್ನು ಹುಡುಕಿ ಲಸಿಕೆ ಕುರಿತು ಅರಿವು ಮೂಡಿಸುವುದರ ಮೂಲಕ ಲಸಿಕೆ ಹಾಕಿಸಲು ಪ್ರಯತ್ನಿಸುತ್ತಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಗ್ರಾಮಸ್ಥರು ಮಾತ್ರ ಲಸಿಕೆ ಪಡೆದ್ರೆ, ಬಹುತೇಕ ಗ್ರಾಮಸ್ಥರು ಲಸಿಕೆ ಪಡೆಯದೇ ನಿಷ್ಕಾಳಜಿ ತೊರುತ್ತಿದ್ದಾರೆ. ಇದರಿಂದಾಗಿ ಲಸಿಕೆ ಹಾಕಿಸಲು ಅಧಿಕಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮಸ್ಥರಲ್ಲಿ ಮೂಡಿದ ತಪ್ಪು ಕಲ್ಪನೆ ಹಾಗೂ ಜಾಗೃತಿ ಕೊರತೆಯಿಂದ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಡೆಲ್ಟಾ ಆಯ್ತು, ಇದೀಗ 'ಡೆಲ್ಟಾ ಪ್ಲಸ್' ವೈರಸ್ ಪತ್ತೆ!