ಯಾದಗಿರಿ: ಯಾದಗಿರಿ ಸಮೀಪದ ದೋರನಹಳ್ಳಿಯಿಂದ ಇಬ್ರಾಹಿಂಪುರ ಹಳಿ ಅಬ್ದುಲ್ ಭಾಷಾ ದರ್ಗಾದವರೆಗಿನ ಸುಮಾರು 6 ಕಿ.ಮೀವರೆಗೆ ಕೆಕೆಆರ್‌ಡಿಬಿ ವತಿಯಿಂದ ಮಾಡಿದ ರಸ್ತೆ ದುರಸ್ತಿ ಸಂಪೂರ್ಣ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಥಳೀಯರು ರಸ್ತೆ ದುರಸ್ತಿಗೆ ಮನವಿ ಮಾಡಿದ್ದರು. ಕೊನೆಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿದು ಹೋಗಿದೆ. ಆದ್ರೆ ಈ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ಮತ್ತೆ ದುರಸ್ತಿಗೆ ಬಂದಿದೆ.
ಕೆಕೆಆರ್ಡಿಬಿಯಿಂದ ರಸ್ತೆ ದುರಸ್ತಿಗಾಗಿ 1.8 ಕೋಟಿ ರೂ.ಗಳು ಮಂಜೂರಾಗಿದೆ. ಶಹಾಪುರ ಮೂಲದ ಗುತ್ತಿಗೆದಾರ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸಿಬಿಟ್ಟಿದ್ದಾರೆ. ಸುಮಾರು 4 ಕಿ.ಮೀನಷ್ಟು ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರನ ಜೊತೆ ಶಾಮೀಲಾಗಿದ್ದಕ್ಕೆ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕಾಮಗಾರಿ ಮುಗಿದ ಎರಡೇ ತಿಂಗಳಿಗೆ ರಸ್ತೆ ನಿರ್ಮಾಣಕ್ಕೆ ಹಾಕಿರುವ ಡಾಂಬರು ಕಿತ್ತುಕೊಂಡು ಬರುತ್ತಿದೆ. ದರ್ಗಾಕ್ಕೆ ಹೋಗುವ ರಸ್ತೆ ದುರಸ್ತಿಯಾಗುತ್ತದೆ ಅಂತ ಅಂದುಕೊಂಡಿದ್ದೆವು. ಆದರೆ, ಈ ರೀತಿ ಕಳಪೆ ಕಾಮಗಾರಿಯಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ:
ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಹಾಗೂ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ಮುಸ್ಲಿಂ ಮತ ಸೆಳೆಯಲು ಜಮೀರ್ ಅಹ್ಮದ್ ಖಾನ್ ಕ್ಯಾಂಪೇನ್?
ಜಮೀನು ಕೆಲಸಕ್ಕೆ ಹೋಗುವ ರೈತರು ರಸ್ತೆಯನ್ನು ನೋಡಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಮಳೆ ಬರುವ ಸಂದರ್ಭದಲ್ಲಿ ಗುತ್ತಿಗೆದಾರ ಕಾಮಗಾರಿಯನ್ನು ಕೈಗೊಂಡಿದ್ದು, ಡಾಂಬರು ಕಿತ್ತು ಬರಲು ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.