ಯಾದಗಿರಿ: ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಿನ್ನೆ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದ ಅವರು ಜಿಲ್ಲೆಯಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳ ಅನುಷ್ಠಾನಕ್ಕೆ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳು ಕಾಲಮಿತಿಯಲ್ಲಿ ಪ್ರಗತಿ ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಸುರಪುರ, ಕೆಂಭಾವಿ, ಕಕ್ಕೇರಾ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಸಂಬಂಧ ಅಂದಾಜು ಪತ್ರಿಕೆ ತಯಾರಿಕೆ ಹಂತದಲ್ಲಿದೆ. ಅದೇ ರೀತಿ ಬೇರೆ ಮತಕ್ಷೇತ್ರಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿಗಳನ್ನು ತಯಾರಿಸಲು ಮುಖ್ಯ ಇಂಜಿನಿಯರ್ ದಿನೇಶ್ ಅವರಿಗೆ ಸೂಚಿಸಿದರು. ನಗರೋತ್ಥಾನದಲ್ಲಿ ನೀರು ಸರಬರಾಜಿಗಾಗಿ 50 ಕೋಟಿ ರೂ. ಅನುಮೋದನೆ ಆಗಿದೆ. ಈ ಪೈಕಿ ಈಗಾಗಲೇ 20 ಕೋಟಿ ಬಿಡುಗಡೆಯಾಗಿದೆ. ಅಲ್ಲದೇ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 9 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ದಿನೇಶ್ ಮಾಹಿತಿ ನೀಡಿದರು.
ನಾಗರಿಕ ನಿವೇಶನ ಹೆಚ್ಚಿಸಿ:
ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಇನ್ನೂ ಹೆಚ್ಚಿನ ಬಡಾವಣೆಗಳನ್ನು ನಿರ್ಮಾಣ ಮಾಡುವ ಮುಖೇನ ನಾಗರಿಕ ನಿವೇಶನಗಳನ್ನು ಹೆಚ್ಚಿಸಬೇಕು. ನಗರಾಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಹೆಚ್ಚು ಆದಾಯವನ್ನು ಗಳಿಸಿ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಪನ್ಮೂಲವನ್ನು ಕ್ರೂಢೀಕರಿಸಬೇಕು ಎಂದು ಪ್ರಾಧಿಕಾರದ ಆಯುಕ್ತರಾದ ಚಂದ್ರಶೇಖರ ಬಂಕಲಗಿ ಅವರಿಗೆ ಸಚಿವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಯಾದಗಿರಿ ಕೆ. ಗ್ರಾಮದಲ್ಲಿರುವ ಸ. ನಂ. 431, 432, 433 ಮತ್ತು 434 ಗಳಲ್ಲಿಯ ಒಟ್ಟು 159 ಎಕರೆ 12 ಗುಂಟೆ ಪ್ರದೇಶದ ದೊಡ್ಡ ಕೆರೆಯನ್ನು ಅಭಿವೃದ್ಧಿಪಡಿಸುವ ಸಂಬಂಧ ಡಿ.ಪಿ.ಆರ್. ವಿಸ್ತೃತ ಯೋಜನಾ ವರದಿ ತಯಾರಿಸಲು ಟೆಂಡರ್ ಕರೆಯಲಾಗಿದೆ. ಕೆರೆ ಅಭಿವೃದ್ಧಿಗಾಗಿ ಪ್ರಾಧಿಕಾರದಲ್ಲಿರುವ 4 ಕೋಟಿ ರೂ. ಸಾಕಾಗುವುದಿಲ್ಲ. ಈ ಪ್ರಯುಕ್ತ ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಪಡಿಸುವುದಾಗಿ ಸಚಿವರ ಗಮನಕ್ಕೆ ತಂದರು.
ಈ ವೇಳೆ ಶಾಸಕರಾದ ವೆಂಕಟ ರೆಡ್ಡಿ ಗೌಡ ಮುದ್ನಾಳ, ರಾಜೂಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಉಪಸ್ಥಿತರಿದ್ದರು.