ಯಾದಗಿರಿ: ಸೋನ್ನಾ ಬ್ಯಾರೇಜ್ ನಿಂದ ಭೀಮಾ ನದಿಗೆ ಹರಿಬಿಡಲಾಗುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರಿಗೆ ಮತ್ತೆ ಆತಂಕ ಶುರುವಾಗಿದೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೊನ್ನಾ ಬ್ಯಾರೇಜ್ನಿಂದ 3 ಲಕ್ಷದ 71 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡಲಾಗಿದೆ. ಒಟ್ಟು 2.28 ಟಿಎಂಸಿ ಸಾಮರ್ಥ್ಯ ಹೊಂದಿದ ಬ್ಯಾರೇಜ್ನಲ್ಲೀಗ 1.84 ಟಿಎಂಸಿ ನೀರು ಸಂಗ್ರಹವಾಗಿದೆ.
ಬ್ಯಾರೇಜ್ನ 31 ಗೇಟ್ಗಳನ್ನು ತೆರೆಯುವ ಮೂಲಕ ನೀರು ಹೊರಬಿಡಲಾಗಿದ್ದು, ಜಿಲ್ಲೆಯ ಶಹಪುರ ಮತ್ತು ವಡಗೇರಾ ತಾಲ್ಲೂಕಿನ ಪ್ರವಾಹ ಪೀಡಿತ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆಮಾಡಿದೆ.
ಈಗಾಗಲೇ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರವಾಹ ಆತಂಕದಲ್ಲಿರುವ ಗ್ರಾಮಸ್ಥರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಮೂಲಕ ನದಿ ತೀರದಲ್ಲಿ ಜನ ಜಾನುವಾರುಗಳು ತೆರಳದಂತೆ ಎಚ್ಚರಿಕೆ ನೀಡಿದೆ.