ಯಾದಗಿರಿ: ಜಾನುವಾರುಗಳು ಲಂಪಿ ಚರ್ಮ ರೋಗದಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲಿ ಉಚಿತ ಜಾನುವಾರುಗಳ ಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ ಎಂದು ಪಶು ವೈದ್ಯಕೀಯ ಪರೀಕ್ಷಕ ಮಾಶಪ್ಪ ಹೇಳಿದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹುಲಕಲ್ (ಜೆ) ಗ್ರಾಮದಲ್ಲಿ ಹಮ್ಮಿಕೊಂಡ ಉಚಿತ ಪಶು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಇದು ಸಾಂಕ್ರಾಮಿಕ ಕಾಯಿಲೆ ಆಗಿದ್ದು, ಇದಕ್ಕೆ ಸಮರ್ಪಕ ಔಷಧಿ ಇಲ್ಲ. ಮೈಮೇಲೆ ಗುಳ್ಳೆ ಬಂದ, ನಿಶ್ಯಕ್ತವಾದ ಮತ್ತು ಆಹಾರ, ಮೇವು ಸೇವಿಸದ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಶೀಘ್ರ ಗುಣಮುಖ ಆಗುತ್ತವೆ. ರೈತರು ಭಯಪಡಬೇಕಿಲ್ಲ. ಜಾನುವಾರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವ ಔಷಧ ನೀಡಲಾಗುತ್ತಿದೆ. ರೈತರು ತಮ್ಮ ಜಾನುವಾರುಗಳ ಆರೋಗ್ಯ ಪರೀಕ್ಷಿಸಬೇಕು ಎಂದರು.
ಶಿಬಿರದಲ್ಲಿ ಚರ್ಮ ಕಾಯಿಲೆಯ 200 ಕ್ಕೂ ಹೆಚ್ಚು ಜಾನುವಾರುಗಳಿಗೆ ಖನಿಜಾಂಶ ಮಾತ್ರೆ, ಲಸಿಕೆ ನೀಡಲಾಯಿತು.
ಈ ವೇಳೆ ಡಾ.ವಿಶ್ವನಾಥ್ ಬಾಳೆ, ಬಾಲಮಣಿ, ಚಂದ್ರಕಾಂತ್ ದೋರನಹಳ್ಳಿ, ಆನಂದ್, ಮೆಹಬೂಬ್, ಶಿವು, ಕುಮಾರ, ವಿಠ್ಠಲ್, ಮಾನಪ್ಪ, ಸೇರಿದಂತೆ ಇನ್ನಿತರರು ಇದ್ದರು.