ಸುರಪುರ (ಯಾದಗಿರಿ): ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ನರಸಿಂಹ ನಾಯಕ ರಾಜುಗೌಡ ಚಾಲನೆ ನೀಡಿದರು. ನಗರದ ಕುಂಬಾರ ಪೇಟೆಯ ಕುರುಬರ ಗಲ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕ ಭವನ ಕಾಮಗಾರಿಯ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು 11 ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಯಿತು.
ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ, ಈ ಹಿಂದೆಯೇ ಕನಕ ಭವನ ಕಾಮಗಾರಿ 50 ಲಕ್ಷ ಅನುದಾನದಲ್ಲಿ ಆರಂಭಿಸಲಾಗಿದೆ, ಅದರಂತೆ ಕುಡಿಯುವ ನೀರಿನ ಕಾಮಗಾರಿಗೆ 9 ಕೋಟಿ, ಪಶುವೈದ್ಯ ಆಸ್ಪತ್ರೆ ಕಟ್ಟಡಕ್ಕೆ 42 ಲಕ್ಷ, ತಾಂತ್ರಿಕ ಕಾಲೇಜು ಬಾಲಕಿಯರ ವಸತಿ ನಿಲಯಕ್ಕೆ 3 ಕೋಟಿ 24 ಲಕ್ಷ, ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಕುಡಿಯುವ ನೀರು ಹಾಗೂ ಚರಂಡಿ ಕಾಮಗಾರಿಗೆ 2 ಕೋಟಿ 71 ಲಕ್ಷ ಮತ್ತು ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ 3 ಕೋಟಿ ಸೇರಿದಂತೆ ಒಟ್ಟು 18 ಕೋಟಿ 51 ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿ ನಡೆಸಲಾಗುವುದು ಎಂದರು.
ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿಕೊಡಬೇಕು. ಅಲ್ಲದೇ ಕಾಮಗಾರಿ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ. ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತ), ಎಪಿಎಂಸಿ ಸದಸ್ಯರಾದ ದುರ್ಗಪ್ಪ ಗೋಗಿಕೆರ, ಯಲ್ಲಪ್ಪ ಕುರಕುಂದಿ, ನಗರಸಭೆ ಸದಸ್ಯರಾದ ವೇಣು ಮಾಧವ ನಾಯಕ, ನರಸಿಂಹಕಾಂತ ಪಂಚಮಗಿರಿ, ಮಹೇಶ ಪಾಟೀಲ್, ಶಿವುಕುಮಾರ ಕಟ್ಟಿಮನಿ, ತಾಲೂಕು ಪಂಚಾಯಿತಿ ಸದಸ್ಯ ದೊಪ್ಪ ಕೊತಲೆಪ್ಪ, ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಭೀಮಣ್ಣ ಮಾಸ್ತರ, ಮುಖಂಡರಾದ ಅಮರಣ್ಣ ಹುಡೇದ, ಹೆಚ್.ಸಿ.ಪಾಟೀಲ, ಅಯ್ಯಪ್ಪ ಅಕ್ಕಿ ರಂಗನಗೌಡ ಪಾಟೀಲ್ ಉಪಸ್ಥಿತರಿದ್ದರು.