ಸುರಪುರ: ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದರಿಂದ ಶಾಲಾ-ಕಾಲೇಜುಗಳ ತರಗತಿಗಳನ್ನು ರದ್ದುಗೊಳಿಸಲಾಗಿದೆ. ಆದರೆ ಕೊರಾನಾ ಭೀತಿಯ ನಡುವೆ ವಿದ್ಯಾರ್ಥಿಗಳ ಅಭ್ಯಾಸ ಹಾಳಾಗದಿರಲಿ ಎಂಬ ಕಾಳಜಿಯಿಂದ ಸುರಪುರ ತಾಲೂಕಿನ ಶಿಕ್ಷಕರ ವರ್ಗ ತಾಲೂಕಿನ ವಿವಿಧೆಡೆಗಳಲ್ಲಿ ವಠಾರ ಶಾಲೆಗಳನ್ನು ಆರಂಭಿಸಿ ಮಕ್ಕಳ ಕಲಿಕೆಯನ್ನು ಉತ್ತೇಜಿಸುತ್ತಿದ್ದಾರೆ.
ಒಟ್ಟು 57 ವಠಾರ ಶಾಲೆಗಳನ್ನು ಆರಂಭಿಸಿ ಕಲಿಯುವ ಆಸಕ್ತಿಯಿಂದ ಸ್ವಇಚ್ಛೆಯಿಂದ ಬರುವ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿ ಅಭ್ಯಾಸ ಮಾಡಿಸಲಾಗುತ್ತಿದೆ.
ಕಳೆದ ಒಂದು ವಾರದಿಂದ ಈ ಶಾಲೆಗಳು ಆರಂಭಗೊಂಡಿದ್ದು, ಇವುಗಳಲ್ಲಿ ಒಂದು ಶಾಲೆಯಲ್ಲಿನ ಮಗುವಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ಒಂದು ಶಾಲೆಯನ್ನು ರದ್ದುಗೊಳಿಸಲಾಗಿದೆ. ಇನ್ನುಳಿದಂತೆ ಸುರಪುರ ನಗರದ ತಿಮ್ಮಾಪುರದ ಮಾರ್ಕಂಡೇಯ ದೇವಸ್ಥಾನ ಆವರಣದಲ್ಲಿ ಸುಮಾರು 20 ಮಕ್ಕಳಿಗೆ ಅಭ್ಯಾಸ ಆರಂಭಿಸಲಾಗಿದೆ. ಇದರಂತೆ ಸದ್ಯ ಒಟ್ಟು 56 ವಠಾರ ಶಾಲೆಗಳು ಆರಂಭಗೊಂಡಿವೆ ಎಂದು ಯಾದಗಿರಿ ಡಯಟ್ ಉಪನ್ಯಾಸಕ ಎಂ.ಶೇಖರಪ್ಪ ತಿಳಿಸಿದ್ದಾರೆ.
ಈ ವಠಾರ ಶಾಲೆಗಳ ಆರಂಭಕ್ಕೆ ಬೆಂಬಲವಾಗಿ ನಿಂತಿರುವ ಪ್ರಭಾರಿ ಕ್ಷೇತ್ರ ಸಮನ್ವಯ ಅಧಿಕಾರಿ ಖಾದರ್ ಪಟೇಲ್ ಸೇರಿದಂತೆ ಎಲ್ಲಾ ಶಿಕ್ಷಕರ ಶ್ರಮಕ್ಕೆ ತಾಲೂಕಿನ ಪೋಷಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.