ಯಾದಗಿರಿ: ಟಂಟಂ ವಾಹನಗಳೇ ಈ ಜಿಲ್ಲೆಯ ಜನರ ಪಾಲಿಗೆ ಪ್ರಯಾಣ ಮಾಡಲು ಇರುವ ಪ್ರಮುಖ ವಾಹನಗಳು.. ಆದ್ರೆ ಈ ವಾಹನಗಳು ಎಷ್ಟು ಡೇಂಜರ್ ಅನ್ನೋದು ಈ ಜನರಿಗೆ ಇನ್ನೂ ಮನದಟ್ಟಾದಂತೆ ಕಾಣ್ತಿಲ್ಲ. ಹೀಗಾಗಿಯೇ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ ಟಂಟಂ ವಾಹನಗಳು ಸಾವಿನ ಸವಾರಿ ನಡೆಸುತ್ತಿವೆ.
ಹೌದು ಯಾದಗಿರಿ ಜಿಲ್ಲೆಯ ಜನರಿಗೆ ಟಂಟಂ ವಾಹನಗಳೇ ಸಾರಿಗೆ ವ್ಯವಸ್ಥೆಯಾಗಿವೆ. ಜಿಲ್ಲಾದ್ಯಂತ ಇನ್ಶೂರೆನ್ಸ್ ಹಾಗೂ ಲೈಸೆನ್ಸ್ ಇಲ್ಲದೆ ಟಂಟಂ ವಾಹನಗಳು ಓಡಾಡುತ್ತಿದ್ದು, ಜಿಲ್ಲೆಯಲ್ಲಿ ಈ ವಾಹನಗಳ ಹಾವಳಿ ಹೆಚ್ಚಾಗಿದೆ. ಇವುಗಳಲ್ಲಿ ಪ್ರಯಾಣಿಸುವ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಹತ್ತಿ ಮತ್ತು ಭತ್ತದ ಜಮೀನಲ್ಲಿ ಕೆಲಸ ಮಾಡಲು ಯಾದಗಿರಿ ನಗರ ಪ್ರದೇಶದಿಂದ ಹೆಚ್ಚಿನ ಕೂಲಿ ಕಾರ್ಮಿಕರನ್ನ ಒಂದೇ ಟಂಟಂ ವಾಹನದಲ್ಲೇ ಕರೆದೊಯ್ಯಲಾಗುತ್ತಿದೆ. ಹೀಗಾಗಿ ಒಂದು ವೇಳೆ ಅಪಘಾತ ಸಂಭವಿಸಿದ್ರೆ ಯಾರು ಹೊಣೆ ಅಂತ ಕೇಳ್ತಿದ್ದಾರೆ ಸಾಮಾಜಿಕ ಕಾರ್ಯಕರ್ತರು.
ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಟಂಟಂ ವಾಹನಗಳಿದ್ದು, ಅರ್ಧಕ್ಕೂ ಹೆಚ್ಚು ಟಂಟಂ ವಾಹನಗಳು ಕಾನೂನು ಬಾಹಿರವಾಗಿ ಸಂಚರಿಸುತ್ತಿವೆ. ಯಾಕಂದ್ರೆ ಟಂಟಂಗಳ ವಿಮೆ ಅವಧಿ ಮುಗಿದ್ರು ಸಹ ಹಾಗೆ ಓಡಿಸುತ್ತಿದ್ದಾರೆ. ಇನ್ನು ಕೆಲವು ಚಾಲಕರ ಬಳಿ ಪರವಾನಿಗೆ ಸಹ ಇಲ್ಲ. ಜಿಲ್ಲೆಯಲ್ಲಿ ಸಾರಿಗೆ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಅಧಿಕಾರಿಗಳು ನಾಮಕಾವಸ್ತೆಗೆ ಎಂಬಂತೆ ಎಲ್ಲಾದ್ರು ಒಂದು ಕಡೆ ನಿಂತು ಫೈನ್ ಹಾಕ್ತಾರೆ. ಆದ್ರೆ ಟಂಟಂ ವಾಹನ ಚಾಲಕರು ದಂಡ ಕಟ್ಟಿ ಮತ್ತೆ ಅದೆ ಚಾಳಿಯನ್ನ ಮುಂದುವರಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಆರ್ಟಿಒ ಅಧಿಕಾರಿಗಳಿಗೆ ಕೇಳಿದ್ರೆ ಇಂತಹ ವಾಹನ ಹಾಗೂ ಚಾಲಕರ ವಿರುದ್ಧ ಕ್ರಮಕೈಗೊಳ್ಳಲಾಗುತ್ತೆ ಅಂತ ಹೇಳಿ ಜಾರಿಕೊಳ್ತಾರೆ.