ಯಾದಗಿರಿ : ನಗರದಲ್ಲಿರುವ ಟಿಪ್ಪು ಸುಲ್ತಾನ್ ವೃತ್ತಕ್ಕೆ ವೀರ ಸಾವರ್ಕರ್ ವೃತ್ತವೆಂದು ಮರುನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರ-ವಿರೋಧಗಳು ವ್ಯಕ್ತವಾಗಿದೆ. ಟಿಪ್ಪು ವೃತ್ತವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶಿವಾಜಿ ಸೇನೆಯ ರಾಜ್ಯಾಧ್ಯಕ್ಷ ಪರಶುರಾಮ ಶೇಗುರ್ಕರ್ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದಾಗ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹತ್ತಿಕುಣಿ ಕ್ರಾಸ್ನಲ್ಲಿರುವ ಟಿಪ್ಪು ವೃತ್ತಕ್ಕೆ ಈಗಾಗಲೇ ನಗರಸಭೆಯಿಂದ ವೀರ ಸಾವರ್ಕರ್ ಹೆಸರಿಡಲು ಅನುಮೋದನೆ ನೀಡಲಾಗಿದೆ. ಇದಕ್ಕೆ ಟಿಪ್ಪು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಪ್ರಾಣ ಬೇಕಾದರೆ ಬಿಡ್ತೀವಿ. ಆದರೆ, ಸರ್ಕಲ್ ತೆರವು ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹತ್ತಿಕುಣಿ ಕ್ರಾಸ್ ಬಳಿಯಿರುವ ಟಿಪ್ಪು ಸರ್ಕಲ್‌ನಲ್ಲಿ ಯಾವುದೇ ಪ್ರತಿಭಟನೆ ನಡೆಸಬಾರದು, ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದು ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಸಹಾಯಕ ಆಯುಕ್ತರಾದ ಶಾ ಆಲಂ ಹುಸೇನ್ ಆದೇಶ ಹೊರಡಿಸಿದ್ದಾರೆ.
ಟಿಪ್ಪು ಸರ್ಕಲ್ ತೆರವು ಮಾಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಜೈ ಶಿವಾಜಿ ಸೇನೆ ರಾಜ್ಯಾಧ್ಯಕ್ಷ ಪರಶುರಾಮ್ ಶೇಗುರ್ಕರ್ ವಿರುದ್ಧ ಯಾದಗಿರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೂ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ವಿರುದ್ಧವೂ ದೂರು ದಾಖಲಾಗಿದೆ. ಅಬ್ದುಲ್ ಕರೀಂ ಭಾನುವಾರದಿಂದ ಜಿಲ್ಲೆಯಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನಿಷೇಧಾಜ್ಞೆ ಜಾರಿ ನಡುವೆಯೂ ನಗರದ ಗಾಂಧಿ ಸರ್ಕಲ್ ಬಳಿ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗುರ್ಕರ್ ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
2010ರಲ್ಲೇ ಟಿಪ್ಪು ಸರ್ಕಲ್ ನಿರ್ಮಾಣಕ್ಕೆ ನಗರಸಭೆ ಅನುಮತಿ ನೀಡಿದೆ. ಆದರೆ ಈಗ ಸುಖಾಸುಮ್ಮನೆ ವಿವಾದ ಮಾಡುತ್ತಿದ್ದಾರೆ ಎಂದು ಉತ್ತರ ಕರ್ನಾಟಕ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಅಬ್ದುಲ್ ಕರೀಂ ತಿಳಿಸಿದ್ದಾರೆ. ಆದರೆ 1996 ಮೌಲಾನ ಅಬ್ದುಲ್ ಕಲಾಂ ವೃತ್ತ ಎಂದು ಠರಾವು ಹೊರಡಿಸಲಾಗಿತ್ತು. ಬಳಿಕ 2010 ರಲ್ಲಿ ಟಿಪ್ಪು ಸರ್ಕಲ್ ಎಂದು ಸರ್ಕಲ್ಗೆ ಮರುನಾಮಕರಣ ಮಾಡಲಾಗಿದೆ. ಅಲ್ಲದೇ ಇದನ್ನು ಸರಕಾರದಿಂದ ಅಧಿಕೃತಗೊಳಿಸಿಲ್ಲ. ಈ ವೃತ್ತಕ್ಕೆ ವೀರ ಸಾವರ್ಕರ್ ವೃತ್ತ ಎಂದು ಮರುನಾಮಕರಣ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಇನ್ನು ಹತ್ತಿಕುಣಿ ಕ್ರಾಸ್ ಬಳಿ ಇರುವ ಟಿಪ್ಪು ಸುಲ್ತಾನ್ ಸರ್ಕಲ್ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದ್ದರೂ ಏನೂ ಕ್ರಮಕೈಗೊಂಡಿಲ್ಲ. ಈ ಕೂಡಲೇ ಅಧಿಕಾರಿಗಳು ಈ ಸರ್ಕಲ್ ತೆರವುಗೊಳಿಸದಿದ್ದರೆ ನಾವೇ ತೆರವು ಕಾರ್ಯ ಮಾಡುತ್ತೇವೆ ಎಂದು ಶಿವಾಜಿ ಸೇನೆ ಸಂಸ್ಥಾಪಕ ಅಧ್ಯಕ್ಷ ಪರಶುರಾಮ್ ಶೇಗುರ್ಕರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭೆ ಅಧ್ಯಕ್ಷ ಸುರೇಶ್ ಅಂಬಿಗರ, ಈ ಟಿಪ್ಪು ಸರ್ಕಲ್ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ವೀರ ಸಾವರ್ಕರ್ ಹೆಸರನ್ನು ಇಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಟಿಪ್ಪು ಓರ್ವ ಮತಾಂಧ, ವಿಶ್ವನಾಥ್ ಹೇಳಿಕೆ ವೈಯಕ್ತಿಕ: ಬಿಜೆಪಿ ವಕ್ತಾರ ಕಾರ್ಣಿಕ್